ಜುಗೂಳ(ಬೆಳಗಾವಿ ಜಿಲ್ಲೆ): ‘ಪ್ರವಾಹದಾಗ ಕೃಷ್ಣಾ ನದಿ ಉಕ್ಕಿ ಹರಿತಿರ್ತೇತಿ. ನೀರಿನ ಸೆಳವಿಗೆ ಸಿಕ್ಕು, ಒಮ್ಮಿಂದೊಮ್ಮೆ ದೋಣಿ ಅಲುಗಾಡಿದಂಗ್ ಆಗ್ತೇತಿ. ಒಂದು ವೇಳೆ ದೋಣಿ ಪಲ್ಟಿ ಆದ್ರ, ಗಂಡ್ಮಕ್ಳು ಹೆಂಗೋ ಈಜ್ಕೊಂತ ದಡ ಸೇರ್ತಿವಿ. ಆದ್ರ ಹೆಣ್ಮಕ್ಳು ಮತ್ತು ವಯಸ್ಸಾದಾವ್ರ ಇದ್ರ, ಅವರ ಕತಿ ಏನ್ರೀ...’
ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮಸ್ಥ ದಯಾನಂದ ಮಿಣಚೆ ಅವರು ಸಂಕಷ್ಟ ತೋಡಿಕೊಂಡಿದ್ದು ಹೀಗೆ. ಜುಗೂಳ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಖಿದ್ರಾಪುರ ಅಕ್ಕಪಕ್ಕದಲ್ಲಿವೆ. ಒಂದು ಬದಿಯಿಂದ ಇನ್ನೊಂದು ಬದಿ ಹೋಗಲು 2 ಕಿ.ಮೀ ಅಂತರವಿದೆ. ಎರಡೂ ಕಡೆಯ ಗ್ರಾಮಸ್ಥರಿಗೆ ದೋಣಿಯೇ ಆಸರೆ.
‘ಜುಗೂಳದಿಂದ ಖಿದ್ರಾಪುರಕ್ಕೆ ಹೋಗಲು ನೇರ ರಸ್ತೆ ಸಂಪರ್ಕವಿಲ್ಲ. ರಾಜಾಪುರ ಬ್ಯಾರೇಜ್ ಮಾರ್ಗವಾಗಿ 8 ಕಿ.ಮೀ ಸಂಚರಿಸಿ, ಖಿದ್ರಾಪುರ ತಲುಪಬಹುದು. ಮಳೆಗಾಲದಲ್ಲಿ ಆ ಬ್ಯಾರೇಜ್ ಮುಳುಗುವುದರಿಂದ 40 ಕಿ.ಮೀ ಸುತ್ತು ಬಳಸಿ ಸಂಚರಿಸುವುದು ಅನಿವಾರ್ಯ. ಕೃಷಿ ಕೆಲಸ, ದೇವರ ದರ್ಶನ ಅಲ್ಲದೇ ಬೇರೆ ಬೇರೆ ಕೆಲಸಕ್ಕೆ ನಾವು ಖಿದ್ರಾಪುರಕ್ಕೆ ಹೋಗುತ್ತೇವೆ. ಆದರೆ, ದೋಣಿ ಹೊರತುಪಡಿಸಿ ಬೇರೆ ಮಾರ್ಗವಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.
‘ನಮ್ಮಲ್ಲಿ ಕೆಲವರ ಜಮೀನು ಖಿದ್ರಾಪುರದಲ್ಲಿ ಮತ್ತು ಅಲ್ಲಿನ ಕೆಲವರ ಜಮೀನು ಜುಗೂಳದಲ್ಲಿ ಇವೆ.ಕೃಷಿ ಕೆಲಸಕ್ಕೆ ಎರಡೂ ಕಡೆಯವರು ಪ್ರತಿ ದಿನ ದೋಣಿಯಲ್ಲಿ ಹೋಗಬೇಕು. ಖಿದ್ರಾಪುರದಲ್ಲಿನ ಕೋಪೇಶ್ವರ ದೇವಾಲಯಕ್ಕೆ ಪ್ರತಿ ಸೋಮವಾರ ಸಾಕಷ್ಟು ಭಕ್ತರು ಹೋಗುತ್ತಾರೆ. ದೋಣಿಯಲ್ಲಿ ಒಮ್ಮೆ ಹೋಗಿ, ಬರಲು ₹ 40 ಕೊಡಬೇಕು. ಸರ್ಕಾರವು ನಮಗಾಗಿ ಪರ್ಯಾಯ ಮಾರ್ಗವನ್ನೂ ಕಲ್ಪಿಸಿಲ್ಲ’ ಎಂದು ಜುಗೂಳ ಗ್ರಾಮಸ್ಥ ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೋಣಿ ಸಂಚಾರ ಅಪಾಯಕಾರಿಯಾಗಿದ್ದು, ಪರ್ಯಾಯ ಮಾರ್ಗಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರವು ₹ 20.86 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೈಗೊಂಡಿತು. ಅದರೆ, ಆರು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೋಣಿಯಲ್ಲಿ ಸಂಚರಿಸುವವರ ಹಿತದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 20 ಲೈಫ್ ಜಾಕೆಟ್ ನೀಡಿದ್ದೇವೆ. ಅವುಗಳ ಕಡ್ಡಾಯ ಬಳಕೆಗೆ ಸೂಚಿಸಿದ್ದೇವೆ.–ರಾಜೇಶ ಬುರ್ಲಿ ತಹಶೀಲ್ದಾರ್ ಕಾಗವಾಡ
ಅನ್ನಪೂರ್ಣೇಶ್ವರಿ ಫೌಂಡೇಷನ್ ದೋಣಿ ವ್ಯವಸ್ಥೆ ಕಲ್ಪಿಸಿದೆ. ಸರ್ಕಾರವೂ ಪ್ರತ್ಯೇಕ ದೋಣಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವೇ ಸೇತುವೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು.–ಉಮೇಶ ಪಾಟೀಲ ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.