ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಿಟ್ಟುಹೋದವರ್‍ಯಾರೂ ದೊಡ್ಡವರಾಗಿಲ್ಲ: ಸುಧಾಂಶು ತ್ರಿವೇದಿ

ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ
Last Updated 16 ಏಪ್ರಿಲ್ 2023, 11:24 IST
ಅಕ್ಷರ ಗಾತ್ರ

ಬೆಳಗಾವಿ: ‘ಕ್ರಿಯಾಶೀಲ ಪಕ್ಷದಲ್ಲಿ ಕೆಲವು ಬದಲಾವಣೆಗಳನ್ನು ಅನಿವಾರ್ಯ. ಅವುಗಳನ್ನು ಒ‍ಪ್ಪಿಕೊಂಡು ಪಕ್ಷ ಮುನ್ನಡೆಸಬೇಕು. ಬಿಜೆಪಿಯಿಂದ ಬೇಸತ್ತು ಬೇರೆ ಪಕ್ಷಕ್ಕೆ ಹೋದವರು ಯಾರೂ ದೊಡ್ಡವರಾದ ಉದಾರಹಣೆ ಇಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು.

ಇಲ್ಲಿನ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರವನ್ನು (ಬೆಳಗಾವಿ, ಚಿಕ್ಕೊಡಿ, ವಿಜಯ‍ಪುರ ಹಾಗೂ ಬಾಗಲಕೋಟೆ ಜಿಲ್ಲೆ) ಭಾನುವಾರ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಿದ್ದರಿಂದ ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂಬುದು ಸುಳ್ಳು. ಎಲ್ಲ ಸಮುದಾಯಗಳಿಗೂ ಬಿಜೆಪಿ ಅವಕಾಶ ನೀಡಿದೆ. ಲಿಂಗಾಯತ ಸಮುದಾಯದ ದೊಡ್ಡ ನಾಯಕರ ಪಡೆಯೇ ನಮ್ಮಲ್ಲಿದೆ’ ಎಂದರು.

‘ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಫ್ರಭುತ್ವ ರಾಷ್ಟ್ರ ಮಾತ್ರವಲ್ಲ; ಪ್ರಜಾಪ್ರಭುತ್ವದ ಜನನಿ ಕೂಡ’ ಎಂದು ಪ್ರಧಾನಿ ನರೇಂದ್ರ ಮೋದಿ ಪದೇಪದೇ ಹೇಳುತ್ತಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರ ಅನುಭವ ಮಂಟಪವೇ ಜಗತ್ತಿನ ಮೊದಲ ಪ್ರಜಾಪ್ರಭುತ್ವ ಕೇಂದ್ರ. ಹೀಗಾಗಿ, ವಿಶ್ವಕ್ಕೆ ಪ್ರಜಾಪ್ರಭುತ್ವದ ಮಾದರಿ ಕೊಟ್ಟ ನಾಡು ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ’ ಎಂದರು.

‘ಒಂದೆಡೆ ದೇಶದ ಸುರಕ್ಷತೆ, ಇನ್ನೊಂದೆಡೆ ಜನ ಕಲ್ಯಾಣ; ಈ ಎರಡೂ ಸೂತ್ರಗಳನ್ನು ಮೋದಿ ಅವರು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದಾರೆ. ಅವರ ಆಶಯದಂತೆ ರಾಜ್ಯದಲ್ಲಿ ಕೂಡ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ನಮ್ಮ ಕೆಲಸಗಳ ಕಾರಣದಿಂದಲೇ ಈ ಬಾರಿ ಮತ್ತೆ ಬಹುಮತ ಪಡೆಯಲಿದ್ದೇವೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

‘ಡಬಲ್‌ ಎಂಜಿನ್ ಸರ್ಕಾರಗಳು ಒಂದಾಗಿ ಕೆಲಸ ಮಾಡಿದ್ದರಿಂದ ಕರ್ನಾಟಕದಲ್ಲಿ ಕೃಷಿಯಿಂದ ಹಿಡಿದು ಆಧುನಿಕ ತಂತ್ರಜ್ಞಾನದವರೆಗೆ ಬಹಳಷ್ಟು ಬೆಳವಣಿಗೆ ಸಾಧ್ಯವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ದೇಶಕ್ಕೆ ಬಂದ ವಿದೇಶ ಹೂಡಿಕೆಯ ಪ್ರಮಾಣದಲ್ಲಿ ಶೇ 38ರಷ್ಟನ್ನು ಈ ರಾಜ್ಯವೇ ಬಾಚಿಕೊಂಡಿದೆ’ ಎಂದೂ ಅವರು ಹೇಳಿದರು.

‘ಬೆಂಗಳೂರು, ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಮಾರ್ಗ, ಬೆಳಗಾವಿ ರೈಲ್ವೆ ನಿಲ್ದಾಣ ಆಧುನೀಕರಣ ಸೇರಿದಂತೆ ಹಲವು ಬೃಹತ್‌ ಯೋಜನೆಗಳು ಕೈಗೂಡಿವೆ. ಹುಬ್ಬಳ್ಳಿಯಲ್ಲಿ ಎಲೆಕ್ಟ್ರಾನಿಕ್‌ ಹಬ್‌ ನಿರ್ಮಾಣ, ಕಳಸಾ– ಬಂಡೂರು ಯೋಜನೆ ಕಾರ್ಯಗತ ಮಾಡುವುದು, ಬೆಂಗಳೂರಿನಲ್ಲಿ ಐಫೋನ್‌ ತಯಾರಿಕೆ ಘಟಕ... ಹೀಗೆ ತಂತ್ರಜ್ಞಾನದಲ್ಲೂ ಈ ರಾಜ್ಯ ಮುಂದಿದೆ. ಬಿಜೆಪಿ ಸರ್ಕಾರ ನಿರೀಕ್ಷಿತ ಗುರಿ ಮುಟ್ಟಿದೆ’ ಎಂದರು.

ಪಕ್ಷದ ರಾಜ್ಯ ಘಟಕದ ವಕ್ತಾ ಎಂ.ಬಿ.ಝಿರಲಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು, ಅಭ್ಯರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT