ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತರರಂತೆ ಹಣ, ಕಾರು ಪಡೆದು ಹೋರಾಟದಿಂದ ಹಿಂದೆ ಸರಿದಿಲ್ಲ: ಜಯಮೃತ್ಯುಂಜಯ ಸ್ವಾಮೀಜಿ

Last Updated 24 ಸೆಪ್ಟೆಂಬರ್ 2021, 14:14 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ನಾವು ನಡೆಸುತ್ತಿರುವ ಹೋರಾಟ ಮತ್ತು ಅದಕ್ಕೆ ಬೆಂಬಲ ಸಿಗುತ್ತಿರುವುದನ್ನು ಸಹಿಸದ ಕೆಲವರು ಹಲವು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಯಾರ ಹೆಸರನ್ನೂ ಪ್ರಸ್ತಾಪಿಸದೆ ಆರೋಪಿಸಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ನಲ್ಲಿ ಅವರು ಮಾತನಾಡಿದರು.

‘ಸಮಾಜ ಒಗ್ಗೂಡಿಸಲು ನಾನು ಶ್ರಮಿಸುತ್ತಿದ್ದೇನೆ. ಆದರೆ, ಕೆಲವರು ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ರಾಜಕಾರಣಿಗಳು ಮತ್ತು ಸ್ವಾಮೀಜಿಗಳ ಬೆಳವಣಿಗೆ ಸಹಿಸದವರೂ ನಮ್ಮಲ್ಲಿದ್ದಾರೆ. ನಾಯಕರಾದ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ ಹೀಗೆ... ಯಾರ ಮೇಲೆ ಸಿಟ್ಟಿದ್ದರೂ ಅವರ ವಿರುದ್ಧ ಚುನಾವಣೆಯಲ್ಲಿ ನಿಂತು ಗೆಲ್ಲಲ್ಲಿ. ಅದನ್ನು ಬಿಟ್ಟು ಸಮಾಜ ಒಡೆಯುವುದು ಸರಿಯಲ್ಲ’ ಎಂದು ಹೇಳಿದರು.

‘ಮಹಾಸಭಾಕ್ಕೆ ವಿಜಯಾನಂದ ಕಾಶಪ್ಪನವರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಕೆಲವರಿಗೆ ಸಿಟ್ಟದೆ. ಹಾಗೊಂದು ವೇಳೆ ನೇತೃತ್ವ ವಹಿಸಿಕೊಳ್ಳಲು ಯಾರಾದರೂ ಮುಂದೆ ಬಂದರೆ ಬಿಟ್ಟುಕೊಡುತ್ತೇವೆ. ಕೆಲವರು ಹೋರಾಟಕ್ಕೂ ಬರುವುದಿಲ್ಲ; ನಾಯಕತ್ವ ವಹಿಸಿಕೊಂಡವರನ್ನೂ ಸಹಿಸಿಕೊಳ್ಳುವುದಿಲ್ಲ’ ಎಂದು ಟೀಕಿಸಿದರು.

‘ಬೇರೆಯವರಂತೆ ಹಣ, ಕಾರು ಪಡೆದು ಹೋರಾಟದಿಂದ ಹಿಂದೆ ಸರಿದಿಲ್ಲ. ಸಮಾಜಕ್ಕೋಸ್ಕರ ಮಠ ಬಿಟ್ಟು ಬೀದಿಗಿಳಿದಿದ್ದೇನೆ. ನಮ್ಮ ಒಗ್ಗಟ್ಟು ಒಡೆಯುವವರಿಗೆ ಸಮಾಜದವರು ಕಿವಿಕೊಡಬಾರದು. ಸಾವಿರ ತೊಂದರೆ ಎದುರಾಗಲಿ, ಎಷ್ಟೇ ಅವಮಾನಿಸಲಿ ದಡ ಮುಟ್ಟುವವರೆಗೂ‌ ಹಿಂದೆ ಸರಿಯುವುದಿಲ್ಲ. ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಗುಡುಗಿದರು.

‘ಆಗ್ರಹ ಆಗ್ರಹ ಪಂಚಮಸಾಲಿಗಳ ಸತ್ಯಾಗ್ರಹ’ ಎನ್ನುವ ಘೋಷಣೆಯೊಂದಿಗೆ ಅ.1ರಿಂದ 5ನೇ ಹಂತದ ಚಳವಳಿ ನಡೆಸುತ್ತೇವೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಹೀಗಾಗಿ, ಸಮಾಜದವರು ಮಕ್ಕಳನ್ನೂ ಜೊತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರಬೇಕು’ ಎಂದು ಕರೆ ನೀಡಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುಖಂಡರಾದ ಎ.ಬಿ. ಪಾಟೀಲ, ಎಚ್.ಎಸ್. ಶಿವಶಂಕರ್, ವೀಣಾ ಕಾಶಪ್ಪನವರ, ರೋಹಿಣಿ ಪಾಟೀಲ, ದಿನೇಶ ಪಾಟೀಲ, ಮಲ್ಲೇಶ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT