ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಹಾರಾಷ್ಟ್ರಕ್ಕೆ 2ನೇ ದಿನವೂ ಬಸ್‌ ಸಂಚಾರ ಸ್ಥಗಿತ

Last Updated 14 ಮಾರ್ಚ್ 2021, 14:20 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದಾಗಿ ಇಲ್ಲಿಂದ ಆ ರಾಜ್ಯಕ್ಕೆ ಸಾರಿಗೆ ಬಸ್‌ಗಳ ಕಾರ್ಯಾಚರಣೆಯನ್ನು 2ನೇ ದಿನವಾದ ಭಾನುವಾರವೂ ಸ್ಥಗಿತಗೊಳಿಸಲಾಗಿದೆ. ಅಲ್ಲಿಂದಲೂ ಇಲ್ಲಿಗೆ ಬಸ್‌ಗಳು ಬರುತ್ತಿಲ್ಲ.

ಪರಿಣಾಮ, ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವುದು ಕಂಡುಬಂದಿದೆ.

‘ಮೊದಲ ದಿನವಾದ ಶನಿವಾರ ಇಲ್ಲಿಂದ ಕೊಲ್ಹಾಪುರಕ್ಕೆ ಮಾತ್ರ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಮಹಾರಾಷ್ಟ್ರದ ಯಾವುದೇ ನಗರಗಳಿಗೂ ಬಸ್‌ಗಳನ್ನು ಬಿಟ್ಟಿಲ್ಲ. ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಆ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಮಹಾರಾಷ್ಟ್ರಕ್ಕೆ ಬಸ್‌ಗಳ ಕಾರ್ಯಾಚರಣೆಯನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ)ಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಚೋದನೆ: 4 ಪ್ರಕರಣ ದಾಖಲು

ಈ ನಡುವೆ, ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ನಾಲ್ಕು ಪ್ರಕರಣ ದಾಖಲಿಸಿದ್ದಾರೆ.

‘ನಾಲ್ಕು ವಿವಿಧ ಫೇಸ್‌ಬುಕ್ ಖಾತೆಗಳು ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಅಡ್ಮಿನ್‌ಗಳ ವಿರುದ್ಧ ಮಾರ್ಕೆಟ್, ತಿಲಕವಾಡಿ, ಗ್ರಾಮೀಣ ಹಾಗೂ ಶಹಾಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿದ್ದೇವೆ. ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಹಾಕಿ ಶಾಂತಿ, ಸುವ್ಯವಸ್ಥೆ ಕೆಡಿಸಲು ಹುನ್ನಾರ ನಡೆಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು’ ಎಂದು ಡಿಸಿಪಿ ವಿಕ್ರಂ ಅಮಟೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT