ಬೆಳಗಾವಿ: ‘ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಇಲ್ಲವೇ, ಇವೆರಡೂ ಮಹಾನಗರಗಳ ಮಧ್ಯೆ 100 ಎಕರೆ ಪ್ರದೇಶದಲ್ಲಿ ಸ್ಟಾರ್ಟ್‌ಅಪ್ ಪಾರ್ಕ್ ಸ್ಥಾಪಿಸಲಾಗುವುದು. ಅಲ್ಲಿ ನವೋದ್ಯಮಿಗಳಿಗೆ ನಿವೇಶನ ಕಲ್ಪಿಸಿ, ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಇಲ್ಲಿನ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್‌ನ(ಕಾಹೇರ್) ಇನ್‌ಕ್ಯುಬೇಷನ್ ಆ್ಯಂಡ್ ಇನ್ನೋವೇಷನ್ ಸೆಂಟರ್ (ಕೆಐಐಸಿ) ಶುಕ್ರವಾರ ಆಯೋಜಿಸಿದ್ದ ‘ಮೆಡ್‌ಟೆಕ್ ಹ್ಯಾಕಥಾನ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಪ್ರಸ್ತುತ ಇರುವ ಸ್ಟಾರ್ಟ್‌ಅಪ್‌ಗಳಲ್ಲಿ ಶೇ 43ರಷ್ಟು ಬೆಂಗಳೂರು ಮಹಾನಗರದಲ್ಲೇ ಇವೆ. ಈ ಭಾಗದ ಯುವಜನರು ಸಂಶೋಧನೆಗಳ ಮೂಲಕ ತಮ್ಮ ಕನಸು ಸಾಕಾರವಾಗಿಸಿಕೊಳ್ಳಲು ನೆರವಾಗುವ ಸ್ಟಾರ್ಟ್‌ಅಪ್ ಪಾರ್ಕ್ ಅನ್ನು ಬೆಳಗಾವಿ–ಹುಬ್ಬಳ್ಳಿ ಮಧ್ಯೆ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಮುಂದಿನ ಮೂರು ತಿಂಗಳಲ್ಲಿ ಸ್ಥಳ ಅಂತಿಮಗೊಳಿಸಿ, ಕಾಮಗಾರಿ ಆರಂಭಿಸಲಾಗುವುದು’ ಎಂದರು.
‘ಈ ಭಾಗದಲ್ಲಿ ಇರುವ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಮೂಲಕ ವೈದ್ಯಕೀಯ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕಿದೆ. ಸಂಶೋಧನೆಗೆ ಒತ್ತು ನೀಡಿ, ಸ್ವಾವಲಂಬನೆ ಸಾಧಿಸಬೇಕಿದೆ. ಇತಿಹಾಸದ ಪುಟ ತೆರೆದಾಗ, ಕೈಗಾರಿಕೆಗಳಿಗೆ ಮೈಸೂರು ರಾಜರ ಕೊಡುಗೆಯೂ ದೊಡ್ಡದಿದೆ ಎಂಬುದು ತಿಳಿಯುತ್ತದೆ’ ಎಂದು ಸ್ಮರಿಸಿದರು.
‘ವೈದ್ಯಕೀಯ ಸಾಧನಗಳು, ಡಯಾಗ್ನೋಸ್ಟಿಕ್‌ಗಳು, ಡಿಜಿಟಲ್ ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೆಡ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಕರ್ನಾಟಕ ನೆಲೆ ಕಲ್ಪಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಬೆಂಗಳೂರು ಬಯೋ–ಇನ್ನೋವೇಷನ್ ಸೆಂಟರ್ ಮತ್ತು ದಿ ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲೆಕ್ಯೂಲರ್ ಪ್ಲಾಟ್‌ಫಾರ್ಮ್ಸ್ ರಾಜ್ಯದಲ್ಲಿ ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರಿಗೆ ವಿಶ್ವದರ್ಜೆಯ ಸೌಕರ್ಯ ಕಲ್ಪಿಸುತ್ತಿವೆ’ ಎಂದರು.
‘ಕರ್ನಾಟಕದ ಆರೋಗ್ಯ ಮತ್ತು ಮೆಡ್‌ಟೆಕ್ ಪರಿಸರ ವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ವೈದ್ಯಕೀಯ ಮತ್ತು ದಂತ ಉಪಕರಣಗಳ ವಲಯದಲ್ಲಿ ಆಗುತ್ತಿರುವ ಒಟ್ಟಾರೆ ಉತ್ಪಾದನೆಯಲ್ಲಿ ಶೇ 25ರಷ್ಟು ಕರ್ನಾಟಕದಲ್ಲೇ ಉತ್ಪಾದನೆಯಾಗುತ್ತಿರುವುದು ವಿಶೇಷ’ ಎಂದು ಹೇಳಿದರು.
‘ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಕೆಎಲ್‌ಇ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಅಗಾಧವಾಗಿ ಬೆಳೆದಿದೆ. ಆರೋಗ್ಯ ಮತ್ತು ತಂತ್ರಜ್ಞಾನ ರಂಗಕ್ಕೆ ಗಣನೀಯವಾದ ಕೊಡುಗೆ ನೀಡುತ್ತಿದೆ. ಅತ್ಯಾಧುನಿಕ ಸೌಲಭ್ಯಗಳ ಮೂಲಕ ಬಯೋಮೆಡಿಕಲ್ ಎಂಜಿನಿಯರಿಂಗ್ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ’ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಸಂಶೋಧನೆಗೆ ಒತ್ತು ನೀಡುವ ದೃಷ್ಟಿಯಿಂದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ಚಾಲನೆ ನೀಡಲಾಗಿದೆ. ಕೆಐಐಸಿ ಮೂಲಕವೂ ಸಲಹೆ, ಸಹಕಾರ ನೀಡುತ್ತಿದ್ದೇವೆ’ ಎಂದು ತಿಳಿಸಿದರು.
ಎಸ್‌ಐಡಿಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಸತ್ಯಪ್ರಕಾಶ ಸಿಂಗ್, ‘ಇಂದು ಸ್ಟಾರ್ಟಪ್‌ಗಳಿಗೆ ಅಗತ್ಯವಿರುವ ನೆರವು ಒದಗಿಸಲು ಅನೇಕ ಬ್ಯಾಂಕ್‌ಗಳು, ಇನ್‌ಕ್ಯುಬೇಷನ್ ಆ್ಯಂಡ್ ಇನ್ನೋವೇಷನ್ ಸೆಂಟರ್ ಮುಂದಿವೆ. ಆದರೆ, ವಿದ್ಯಾರ್ಥಿಗಳು ಉದ್ಯಮಿಯಾಗಲು ಮುಂದೆಬರಬೇಕು’ ಎಂದರು.
ದೆಹಲಿಯ ಐಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಖಿಲ್ ಅಗರವಾಲ್, ‘ವೈದ್ಯರು ಉತ್ತಮ ಉದ್ಯಮಿ ಹಾಗೂ ಸಲಹೆಗಾರರಾಗಬಹುದು ಎಂಬುದನ್ನು ಮರೆಯಬಾರದು. ಬೆಳಗಾವಿಗೆ ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿದ್ದು, ನಿಮಗೆ ಎಲ್ಲ ರೀತಿಯ ಮಾರ್ಗದರ್ಶನ, ಸೌಕರ್ಯ ನೀಡಲು ತಯಾರಿದ್ದೇವೆ. ಮುಂಬರುವ ವರ್ಷದವರೆಗೆ 20 ವೈದ್ಯರಾದರೂ ಉದ್ಯಮಿಗಳಾಗಲು ಮುಂದೆಬರಬೇಕು’ ಎಂದು ಕೋರಿದರು.
ಇದೇವೇಳೆ, ವಿವಿಧ ಆಸ್ಪತ್ರೆಗಳೊಂದಿಗೆ ಕಾಹೇರ್ ಒಡಂಬಡಿಕೆ ಮಾಡಿಕೊಂಡಿತು.
ವಿಜ್ಞಾನಿ ಡಾ.ಅರವಿಂದಕುಮಾರ, ಕಾಹೇರ್ ಕುಲಪತಿ ಡಾ.ನಿತಿನ್ ಗಂಗಾನೆ, ಕೆಐಐಸಿ ಪ್ರಧಾನ ವ್ಯವಸ್ಥಾಪಕ ರಿತೇಶ್ ದೇಶಪಾಂಡೆ ಇದ್ದರು. ಕಾಹೇರ್ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ ಸ್ವಾಗತಿಸಿದರು. ಡಾ.ನೇಹಾ ಧಡೇದ, ಡಾ.ಸೌಮ್ಯಾ ಮಾಸ್ತೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.