ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೃಶ್ಯ ಜಾತಿಗಳ ವಿರುದ್ಧ ಹೋರಾಟದ ಎಚ್ಚರಿಕೆ

ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧ ಸಲ್ಲದು
Last Updated 15 ಡಿಸೆಂಬರ್ 2019, 13:18 IST
ಅಕ್ಷರ ಗಾತ್ರ

ಹೊಸಪೇಟೆ: ‘ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಸ್ಪೃಶ್ಯ ಜಾತಿಗಳು ಸಹಕರಿಸಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಪಟ್ಟಿಯಿಂದ ಅವುಗಳನ್ನು ಕೈಬಿಡುವಂತೆ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ಮಾದಿಗ ದಂಡೋರ ಸಂಘಟನೆಯ ಖಜಾಂಚಿ ಗೋಪಾಲಪುರ ಮುನಿರಾಜು ಎಚ್ಚರಿಕೆ ನೀಡಿದರು.

ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಮಟ್ಟದ ಮಾದಿಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸ್ಪೃಶ್ಯ ಜಾತಿಗಳ ವಿರೋಧದಿಂದ ಸದಾಶಿವ ಆಯೋಗದ ವರದಿ ಜಾರಿ ವಿಷಯ ನನೆಗುದಿಗೆ ಬಿದ್ದಿದೆ. ನಮ್ಮ ಜನಾಂಗದ 15ರಿಂದ 20 ಶಾಸಕರು ಚುನಾವಣೆಯಲ್ಲಿ ಗೆದ್ದು, ವಿಧಾನಸಭೆಗೆ ಹೋಗಿ ಅದರ ವಿರುದ್ಧ ಧ್ವನಿ ಎತ್ತುವವರೆಗೆ ಅದು ಜಾರಿ ಆಗುವುದು ಅನುಮಾನ’ ಎಂದು ಹೇಳಿದರು.

‘ಮೀಸಲಾತಿ ಕೋಟಾದಲ್ಲಿ ಮಾದಿಗರಿಗೆ ಅನ್ಯಾಯವಾಗುತ್ತಿದೆ ಎಂದು ಸದಾಶಿವ ಅವರು ಅವರ ವರದಿಯಲ್ಲಿ ತಿಳಿಸಿದ್ದಾರೆ. ಹೀಗಿದ್ದಾಗಲೂ ಎಸ್ಸಿ ಪಟ್ಟಿಯಲ್ಲಿರುವ ಜಾತಿಗಳವರು ಅದನ್ನು ವಿರೋಧಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಮಾದಿಗರಿಗೆ ಈ ಹಿಂದೆ ಸಿ.ಎಂ. ಇದ್ದಾಗ ಯಡಿಯೂರಪ್ಪ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಅವಧಿಯಲ್ಲೇ ಬಾಬು ಜಗಜೀವನರಾಂ ಚರ್ಮ ಇಲಾಖೆ ಸ್ಥಾಪನೆಯಾಗಿದೆ. ಈಗ ಪುನಃ ಅವರೇ ಮುಖ್ಯಮಂತ್ರಿಯಾಗಿದ್ದು, ವರದಿ ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮಾದಿಗ ಸಮಾಜದ ಹೆಸರಿನಲ್ಲಿ ಲಾಭ ಪಡೆದು ಉನ್ನತ ಸ್ಥಾನಕ್ಕೆ ಹೋಗಿರುವವರು, ವಿದ್ಯಾವಂತರು ಮಾದಿಗರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದು ದುರದೃಷ್ಟಕರ. ಆದರೆ, ಈಗಲೂ ಗ್ರಾಮೀಣ ಪ್ರದೇಶದವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ’ ಎಂದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಜೆ. ಜಗನ್ನಾಥ, ‘ನಮ್ಮ ಸಮಾಜದವರೇ ನಮ್ಮ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಹಣಕ್ಕಾಗಿ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ವಿರುದ್ಧ ಅನ್ಯಾಯವಾದಾಗ ಎಲ್ಲರೂ ನಿಂತು ಹೋರಾಟ ಮಾಡಬೇಕು. ಆದರೆ, ನಮ್ಮೊಳಗೆ ಹುಳುಕು ಇದೆ’ ಎಂದು ಹೇಳಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ‘ಸಂಘಟನೆ, ಹೋರಾಟದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಆದರೆ, ಶಿಕ್ಷಣದಲ್ಲಿ ಬಹಳ ಹಿಂದುಳಿದಿದ್ದೇವೆ. ಹೀಗಾಗಿ ಮುಖ್ಯವಾಹಿನಿಗೆ ಬಂದಿಲ್ಲ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್‌.ಆರ್‌. ಪ್ರಸಾದ್‌, ಉಪಾಧ್ಯಕ್ಷ ಎಚ್‌. ವೆಂಕಟೇಶ್‌, ತಾಲ್ಲೂಕು ಅಧ್ಯಕ್ಷ ಹುಲುಗಪ್ಪ ಹೋತೂರ್‌, ಪಂಚಾಯತ್‌ ರಾಜ್‌ ಇಲಾಖೆಯ ಮುಖ್ಯ ಎಂಜಿನಿಯರ್‌ ಯಮನೂರಪ್ಪ, ಕೂಡ್ಲಿಗಿ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ, ಚಂದ್ರಶೇಕರ್‌, ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT