ಮಂಗಳವಾರ, ಜನವರಿ 19, 2021
21 °C
ಹಂಪಿ ವಿರೂಪಾಕ್ಷ ದೇವಸ್ಥಾನ ಆಡಳಿತ ಮಂಡಳಿಯ ಗಮನಕ್ಕಿಲ್ಲ ವಿಷಯ

ಹಂಪಿ ವಿರೂಪಾಕ್ಷ ದೇಗುಲದಲ್ಲಿ ವಸ್ತ್ರ ಸಂಹಿತೆಯ ಬ್ಯಾನರ್ ಪ್ರತ್ಯಕ್ಷ‌‌: ಗೊಂದಲ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವುದರ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಆದರೆ, ಇದರ ನಡುವೆಯೇ ಇಲ್ಲಿನ ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಆ ಕುರಿತ ಬ್ಯಾನರ್‌‌ ಹಾಕಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಭಕ್ತರಲ್ಲಿ ಗೊಂದಲಕ್ಕೂ ಕಾರಣವಾಗಿದೆ.

ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ. ಈ ಹಿಂದೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ‌ ಈ ಕುರಿತು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದವು. ಬಳಿಕ ದೇವಸ್ಥಾನ ಆಡಳಿತ ಮಂಡಳಿಯು ಪುರುಷರಿಗೆ ಪಂಚೆ, ಮಹಿಳೆಯರಿಗೆ ಸೀರೆಯ ವ್ಯವಸ್ಥೆ ಮಾಡಿತು. ಕೆಲದಿನಗಳ ನಂತರ ನಿಂತು ಹೋದ ಈ ವ್ಯವಸ್ಥೆ ಪುನಃ ಆರಂಭಗೊಂಡಿಲ್ಲ. ಪರಿಷತ್‌ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಆದರೆ, ಈಗ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಬ್ಯಾನರ್‌‌ ಅಳವಡಿಸಲಾಗಿದೆ. ವಿರೂಪಾಕ್ಷ ದೇವಸ್ಥಾನ ಪ್ರವೇಶಿಸುವ ಭಕ್ತರು ಸೀರೆ, ಚೂಡಿದಾರ್‌, ಪಂಚೆ, ಪ್ಯಾಂಟು, ಶರ್ಟ್‌ ಧರಿಸಿಕೊಂಡು ಒಳಹೋಗಬೇಕು ಎಂಬ ಚಿತ್ರ, ಬರಹ ಅದರ ಮೇಲೆ ಮುದ್ರಿಸಲಾಗಿದೆ. ಇನ್ನೊಂದು ಬದಿಯಲ್ಲಿ ತುಂಡುಡುಗೆಗಳಾದ ಶಾರ್ಟ್ಸ್‌, ನೈಟಿ ಧರಿಸಿದವರಿಗೆ ಪ್ರವೇಶ ನಿಷಿದ್ಧ ಎಂಬ ಸೂಚನೆ ಇದೆ.

ಬ್ಯಾನರ್‌‌ ಮೇಲೆ ವಿರೂಪಾಕ್ಷ ದೇವಸ್ಥಾನ ಹಂಪಿ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ‘ಈ ಬ್ಯಾನರ್‌‌ ದೇವಸ್ಥಾನದಿಂದ ಅಳವಡಿಸಿಲ್ಲ’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್ ‘ಪ್ರಜಾವಾಣಿ’ಗೆ‌ ತಿಳಿಸಿದ್ದಾರೆ. ಯಾವುದೇ ಸಂಘಟನೆಯೂ ಇದರ ಜವಾಬ್ದಾರಿ ಹೊತ್ತುಕೊಂಡಿಲ್ಲ. ಹಾಗಿದ್ದರೆ ಈ ಬ್ಯಾನರ್‌‌‌ ಅಳವಡಿಸಿದವರು ಯಾರು ಎಂಬ ಪ್ರಶ್ನೆ, ಅದರ ಸುತ್ತ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಅಷ್ಟೇ ಅಲ್ಲ, ಈ ಬ್ಯಾನರ್‌‌‌ ನೋಡಿದ ಭಕ್ತರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಆದರೆ, ವಿಶ್ವ ಹಿಂದೂ ಪರಿಷತ್ ಇದನ್ನು ಸ್ವಾಗತಿಸಿದೆ.

‘ಇದುವರೆಗೆ ಹಂಪಿ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಬ್ಯಾನರ್‌‌ ಇರಲಿಲ್ಲ. ಶುಕ್ರವಾರ ಏಕಾಏಕಿ ಕಾಣಿಸಿಕೊಂಡಿದೆ. ಇದು ಭಕ್ತರಲ್ಲಿ ಗೊಂದಲ ಮೂಡಿಸಿದೆ. ಹಂಪಿಗೆ ವಿವಿಧ ಭಾಗಗಳ ಜನ ಬಂದು ಹೋಗುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿಯ ದಿರಿಸು ಧರಿಸಿಕೊಂಡು ಬರುತ್ತಾರೆ. ಅನಗತ್ಯ ಗೊಂದಲ ಸೃಷ್ಟಿಸಬಾರದು. ಅದಕ್ಕೆ ಅವಕಾಶವೂ ಕೊಡಬಾರದು’ ಎಂದು ಹೆಸರು ಹೇಳಲಿಚ್ಛಿಸದ ಹಂಪಿ ಹಿರಿಯ ಗೈಡ್‌ ಹೇಳಿದರು.

‘ಹಂಪಿಯಲ್ಲಿ ವಸ್ತ್ರ ಸಂಹಿತೆಯ ಬ್ಯಾನರ್‌‌‌ ಅಳವಡಿಸಿರುವುದು ಗಮನಕ್ಕೆ ಬಂತು. ನಮ್ಮಲ್ಲಿ ಕೆಲವರು ಶಾರ್ಟ್ಸ್‌ ಧರಿಸಿದ್ದರಿಂದ ಅನುಮಾನ ಬಂದು ದೇವಸ್ಥಾನದವರನ್ನು ವಿಚಾರಿಸಿದೆವು. ಅವರು ದರ್ಶನ ಮಾಡಿಕೊಂಡು ಹೋಗುವಂತೆ ತಿಳಿಸಿದ್ದರಿಂದ ನಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಆದರೆ, ಇದರಿಂದ ಭಕ್ತರಲ್ಲಿ ಗೊಂದಲ ಉಂಟಾಗುತ್ತಿದೆ’ ಎಂದು ಬೆಂಗಳೂರಿನ ಪ್ರವಾಸಿ ಲಕ್ಷ್ಮಿ ತಿಳಿಸಿದರು.

***

ವಸ್ತ್ರ ಸಂಹಿತೆ ಜಾರಿಗೆ ತರುವುದರ ಕುರಿತು ಸರ್ಕಾರದಿಂದ ಇದುವರೆಗೆ ಯಾವುದೇ ನಿರ್ದೇಶನ ಬಂದಿಲ್ಲ. ಯಾರೋ ಖಾಸಗಿ ವ್ಯಕ್ತಿಗಳು ವಸ್ತ್ರ ಸಂಹಿತೆಯ ಬ್ಯಾನರ್‌‌‌ ಹಾಕಿದ್ದಾರೆ.

- ಪ್ರಕಾಶ್‌ ರಾವ್‌, ಕಾರ್ಯನಿರ್ವಾಹಕ ಅಧಿಕಾರಿ, ಹಂಪಿ ವಿರೂಪಾಕ್ಷ ದೇವಸ್ಥಾನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು