ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಬಿಬಿಎಂಪಿ: ₹2 ಸಾವಿರ ಕೋಟಿ ಅಕ್ರಮ!

2021–22ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ; ಹಿಂದಿನ ಸಾಲಿಗಿಂತ ಹೆಚ್ಚು
Published 19 ಜೂನ್ 2024, 0:30 IST
Last Updated 19 ಜೂನ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಲೆಕ್ಕಪರಿಶೋಧನೆಯಲ್ಲಿ ₹2,010 ಕೋಟಿಯಷ್ಟು ಅಕ್ರಮ ಕಂಡು ಬಂದಿದ್ದು, ಇದರಲ್ಲಿ ₹422 ಕೋಟಿ ಮಾತ್ರ ವಸೂಲಿ ಮಾಡಲಾಗಿದೆ.

ಬಿಬಿಎಂಪಿ ಮುಖ್ಯ ಲೆಕ್ಕಪರಿಶೋಧಕರು ಸಲ್ಲಿಸಿರುವ 2021–22ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಈ ಅಂಶ ಪ್ರಕಟಿಸಲಾಗಿದ್ದು, 696 ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. 124 ಕಂಡಿಕೆಗಳಲ್ಲಿ ವಸೂಲಾತಿಯಾಗಿದ್ದು, ಇನ್ನುಳಿದ 625 ಆಕ್ಷೇಪಣೆಗಳಿಗೆ ಯಾವ ಉತ್ತರವನ್ನೂ ಬಿಬಿಎಂಪಿ ನೀಡಿಲ್ಲ. 1964ರಿಂದ 2021–22ರ ಅವಧಿಯಲ್ಲಿ 2021–22ರಲ್ಲಿನ ಆಕ್ಷೇಪಣೆ ಅತಿಹೆಚ್ಚಿನದ್ದಾಗಿದೆ.

ಲೆಕ್ಕಪರಿಶೋಧನೆ ವರದಿಯಲ್ಲಿ ಪ್ರಸ್ತಾಪಿಸಿರುವ ಕಂಡಿಕೆಗಳ ನ್ಯೂನತೆ ಮತ್ತು ವಸೂಲಾತಿಗಳ ಬಗ್ಗೆ ಸಕಾಲದಲ್ಲಿ ಕ್ರಮ ಜರುಗಿಸದಿರುವುದರಿಂದ ಪಾಲಿಕೆಗೆ ನಷ್ಟವಾಗುವ ಸಂಭವವಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಈ ಸಾಲಿನ ಲೆಕ್ಕಪರಿಶೋಧನೆ ವರದಿಯೊಂದಿಗೆ ಹಿಂದಿನ ಸಾಲಿನ ವರದಿಗಳ ಮೇಲೆಯೂ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು ಎಂದು ಅಭಿಪ್ರಾಯಪಡಲಾಗಿದೆ.

₹8 ಕೋಟಿ ಹೆಚ್ಚುವರಿ ಬಿಲ್‌ ಪಾವತಿ: ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ ಹಾಗೂ ಶಿಕ್ಷಣ ವಿಭಾಗಗಳಲ್ಲಿ ಹೆಚ್ಚುವರಿ ಪಾವತಿಯಿಂದ ₹8.01 ಕೋಟಿ ನಷ್ಟವಾಗಿರುವುದನ್ನು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ನಿಯಮ ಉಲ್ಲಂಘನೆ: ಕಾಮಗಾರಿ ಅನುಷ್ಠಾನ ಹಾಗೂ ಸಾಮಗ್ರಿ ಖರೀದಿಯಲ್ಲಿ ₹15.95 ಕೋಟಿಯನ್ನು ನಿಯಮ ಉಲ್ಲಂಘಿಸಿ ಪಾವತಿಸಲಾಗಿದೆ. ಸಾಮಾನ್ಯ ಆಡಳಿತದಲ್ಲಿ ₹9.98 ಕೋಟಿ, ಆರೋಗ್ಯ ವಿಭಾಗದಲ್ಲಿ ₹1.57 ಕೋಟಿ, ಕಾಮಗಾರಿಯಲ್ಲಿ ₹4.28 ಹಾಗೂ ಶಿಕ್ಷಣ ಇಲಾಖೆಯಲ್ಲಿ ₹11.36 ಲಕ್ಷ ಪಾವತಿಸಲಾಗಿದೆ.

ಬೃಹತ್‌ ನೀರುಗಾಲುವೆ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಅತಿಹೆಚ್ಚು ನಿಯಮ ಉಲ್ಲಂಘನೆಗಳಾಗಿವೆ. ಎಸ್‌ಆರ್‌ ದರ ಜಾರಿಯಾಗುವ ಮುನ್ನವೇ ದರಪಟ್ಟಿಯನ್ನು ಅನ್ವಯಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಅದರಂತೆಯೇ ಬೊಮ್ಮನಹಳ್ಳಿ ವಿಭಾಗದಲ್ಲಿ ₹78.97 ಲಕ್ಷ ಪಾವತಿಸಲಾಗಿದೆ. ಒಂದು ಸಂಸ್ಥೆಗೆ ಗುತ್ತಿಗೆ ನೀಡಿದ್ದರೆ ಮತ್ತೊಬ್ಬ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿರುವ ಪ್ರಕರಣಗಳು ಈ ಎರಡು ವಿಭಾಗಗಳಲ್ಲಿ ಹೆಚ್ಚಾಗಿವೆ.

ಒಂದೇ ಕಾಮಗಾರಿಗೆ ಎರಡು ಬಿಲ್ಲು!

ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಕಚೇರಿಯಿಂದ ಮಾಗಡಿ ರಸ್ತೆಯಲ್ಲಿ ನಿರ್ವಹಿಸಲಾದ ನೀರುಗಾಲುವೆ ಕಾಂಕ್ರೀಟ್‌ ಬಾಕ್ಸ್‌ ಕಾಮಗಾರಿಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡಲ್ಲೂ ಪಾಂಡುರಂಗ ಅವರಿಗೆ ₹7.37 ಲಕ್ಷ ಪಾವತಿಸಲಾಗಿದೆ. ಮುಖ್ಯ ಎಂಜಿನಿಯರ್‌ ಅವರ ಕರ್ತವ್ಯ ನಿರ್ಲಕ್ಷ್ಯತೆ ಗಂಭೀರವಾದದ್ದು ಎಂದು ವರದಿಯಲ್ಲಿ ಹೇಳಲಾಗಿದೆ.

ಇಬ್ಬರಿಗೆ ಬಿಲ್: ದಾಸರಹಳ್ಳಿ ಉಪವಿಭಾಗದಲ್ಲಿ ಹಣಕಾಸು ಉಪ ನಿಯಂತ್ರಕರ ಕಚೇರಿಯ ಶೌಚಾಲಯ ದುರಸ್ತಿಗೆ ಗುತ್ತಿಗೆದಾರರ ಎಚ್‌.ಎಸ್‌. ಗಿರೀಶ್‌ ಅವರಿಗೆ 2021ರ ಫೆಬ್ರುವರಿ 16ರಂದು ₹99,508 ಪಾವತಿಸಲಾಗಿದೆ. ಇದೇ ಕೆಲಸಕ್ಕಾಗಿ ಗುತ್ತಿಗೆದಾರ ಎನ್‌.ಎಂ. ಚೇತನ್‌ ಅವರಿಗೆ ಅಷ್ಟೇ ಮೊತ್ತವನ್ನು ಮಾರ್ಚ್‌ 19ರಂದು ಪಾವತಿಸಲಾಗಿದೆ.

ಎರಡು ಬಾರಿ ಪಾವತಿ: ಬೊಮ್ಮನಹಳ್ಳಿ ವಿಭಾಗದ ರಸ್ತೆ ಮೂಲಸೌಕರ್ಯ ಕಾರ್ಯಪಾಲಕ ಎಂಜಿನಿಯರ್‌ ವತಿಯಿಂದ ಕೈಗೊಂಡ ಚರಂಡಿ ಸ್ಲ್ಯಾಬ್‌ ತೆಗೆಯುವುದು ಮತ್ತು ಮರು ಅಳವಡಿಸುವ ಕಾರ್ಯಕ್ಕೆ ಎರಡು ಬಾರಿ ಒಟ್ಟು ₹1.16 ಲಕ್ಷ ಪಾವತಿಸಲಾಗಿದೆ.

ಒಂದು ಶುಲ್ಕ, ಎರಡು ಬಿಲ್ಲು: ಒಎಫ್‌ಸಿ ವಿಭಾಗದ ಕಾರ್ಯಪಾಲಕರ ಕಚೇರಿಯಲ್ಲಿ ಒಂದೇ ಡಿ.ಡಿಗೆ ಎರಡು ಬಾರಿ ರಸೀದಿಯನ್ನು ನೀಡಲಾಗಿದೆ. 31 ಪ್ರಕರಣಗಳಲ್ಲಿ
₹4.21 ಕೋಟಿ ಮೊತ್ತಕ್ಕೆ 62 ರಸೀದಿಗಳನ್ನು ನೀಡಲಾಗಿದೆ.

ಮಾಡದ ಕಾಮಗಾರಿಗೆ ಬಿಲ್ಲು!

ಗಾಂಧಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ವ್ಯಾಪ್ತಿಯಲ್ಲಿ ದಕ್ಷಿಣ ಸೆಂಟ್ರಲ್‌ ಲಿಂಕ್‌ ರಸ್ತೆಗೆ ಎರಡು ದಿಕ್ಕಿನಲ್ಲಿ ಡ್ರೈನ್‌ನಲ್ಲಿ ಹೂಳು ತೆಗೆಯಲು, ಹಳೆಯ ಸ್ಲ್ಯಾಬ್‌ ತೆಗೆದು ಮರು ಅಳವಡಿಸುವ ಕಾಮಗಾರಿಗಾಗಿ ₹63.83 ಲಕ್ಷ ‌ ಪಾವತಿಸಲಾಗಿದೆ. ಆದರೆ, ಹಳೆಯ ಸ್ಲ್ಯಾಬ್‌ ತೆಗೆದು, ಹೊಸದಾಗಿ ಅಳವಡಿಸಿದ ಯಾವುದೇ ವಿವರ ಇಲ್ಲದ್ದರಿಂದ, ಕಾಮಗಾರಿ ನಡೆದಿರುವುದು ಸತ್ಯಕ್ಕೆ ದೂರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಂದಿರಾ ಕ್ಯಾಂಟೀನ್‌: ಪಾರ್ಸಲ್‌ಗೆ ಶುಲ್ಕ!

ಇಂದಿರಾ ಕ್ಯಾಂಟೀನ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶವಿಲ್ಲದಿದ್ದರೂ ₹11.59 ಲಕ್ಷವನ್ನು ಬೊಮ್ಮನಹಳ್ಳಿ ವಲಯದ ಹಣಕಾಸು ವಿಭಾಗದ ಉಪ ನಿಯಂತ್ರಕರು ರಿವಾರ್ಡ್ಸ್‌ ಎಂಬ ಸಂಸ್ಥೆಗೆ ಜಿಸಿಎಸ್‌ಟಿ ಸೇರಿದಂತೆ ಹಣ ಪಾವತಿಸಿದ್ದಾರೆ. ಟೆಂಡರ್‌ ಕರಾರು ಒಪ್ಪಂದ ಮತ್ತು ಕಾರ್ಯಾದೇಶದಲ್ಲೂ ಪಾರ್ಸಲ್‌ ಶುಲ್ಕ ಪಾವತಿಸಲು ಅವಕಾಶವಿಲ್ಲ.

ಪ್ರಮುಖ ತೊಡಕುಗಳು

* ನಗದು ಪುಸ್ತಕ ಅಸರ್ಮಪಕ ನಿರ್ವಹಣೆ

* ಪೂರ್ಣ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಒದಗಿಸದಿರುವುದು

* ಅಸಮರ್ಪಕ ಕಾರಣ ನೀಡಿ ಲೆಕ್ಕ ತನಿಖಾ ಕಾರ್ಯಕ್ರಮ ಮುಂದೂಡಿಕೆ

* ಲೆಕ್ಕಪರಿಶೋಧನೆಗ ಅಧಿಕಾರಿ/ ಸಿಬ್ಬಂದಿಯಿಂದ ಅಸಹಕಾರ ಮನೋಭಾವ

* ನಿಗದಿತ ಅವಧಿಯಲ್ಲಿ ಸಲ್ಲಿಕೆಯಾಗದ ವಾರ್ಷಿಕ ಲೆಕ್ಕಪತ್ರ 

* ಲೆಕ್ಕಪತ್ರಗಳು, ದಾಖಲೆಗಳು, ನಿಗದಿತ ನಮೂನೆಯ ವಹಿ ನಿರ್ವಹಿಸದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT