ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಡಬಲ್‌ ಡೆಕರ್‌’ಗಿಲ್ಲ ಉದ್ಘಾಟನೆ ಭಾಗ್ಯ!

ಉದ್ಘಾಟನೆಗೆ ಅನುಮತಿ ನೀಡಲು ರಾಜ್ಯ, ಕೇಂದ್ರ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ಪತ್ರ
Published 8 ಜುಲೈ 2024, 0:30 IST
Last Updated 8 ಜುಲೈ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಗಿಗುಡ್ಡ–ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಮೆಟ್ರೊ ಮಾರ್ಗದಲ್ಲಿ ‘ಡಬಲ್‌ ಡೆಕರ್‌’ ಮೇಲ್ಸೇತುವೆ ಒಂದು ಬದಿಯಿಂದ ಪೂರ್ಣಗೊಂಡಿದೆ. ಉದ್ಘಾಟನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಪ್ಪಿಗೆಗಾಗಿ ಬಿಎಂಆರ್‌ಸಿಎಲ್‌ ಕಾಯುತ್ತಿದೆ.

‘ನಮ್ಮ ಮೆಟ್ರೊ’ ಆರ್‌.ವಿ. ರಸ್ತೆ–ಬೊಮ್ಮಸಂದ್ರ ಗುಲಾಬಿ ಮಾರ್ಗದಲ್ಲಿ ಮೇಲ್ಸೇತುವೆ ರಸ್ತೆ ಮತ್ತು ಅದರ ಮೇಲೆ ಮೆಟ್ರೊ ರೈಲು ಸಂಚಾರ ವ್ಯವಸ್ಥೆ ಇರುವ ‘ರೋಡ್ ಕಂ ರೇಲರ್‌’ (ಡಬಲ್ ಡೆಕರ್‌) ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ ಕಡೆಗೆ ಬರುವ ಮೇಲ್ಸೇತುವೆ ಕಾಮಗಾರಿ ಮುಗಿದಿದೆ. ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ನಿಂದ ರಾಗಿಗುಡ್ಡ ಕಡೆಗೆ ತೆರಳುವ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಒಂದು ವರ್ಷದಲ್ಲಿ ಅದು ಸಂಚಾರಕ್ಕೆ ತೆರೆದುಕೊಳ್ಳಲಿದೆ. ನೆಲ ಅಂತಸ್ತಿನಲ್ಲಿರುವ ತ್ರಿಪಥ ರಸ್ತೆಯಲ್ಲಿ ಸಂಚಾರ ಎಂದಿನಂತೆ ಮುಂದುವರಿಯಲಿದೆ.

‘ನಗರದ ವಾಹನದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಒಂದಾಗಿರುವ ಈ ಮಾರ್ಗದಲ್ಲಿ 3.3 ಕಿ.ಮೀ. ಹಾದುಹೋಗಲು ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತದೆ. ಈ ದಟ್ಟಣೆಯನ್ನು ಕಡಿಮೆ ಮಾಡಲು ಡಬಲ್‌ ಡೆಕರ್‌ ಯೋಜನೆ ಪೂರಕವಾಗಿದೆ. ಆದರೆ, 2021ರಲ್ಲಿಯೇ ಪೂರ್ಣಗೊಳ್ಳಬೇಕಿದ್ದ ಈ ಕಾಮಗಾರಿ ಈಗಾಗಲೇ ಮೂರು ವರ್ಷ ತಡವಾಗಿದೆ. ಈಗ ಒಂದು ಬದಿ ಪೂರ್ಣಗೊಂಡರೂ ಚಾಲನೆಗೊಂಡಿಲ್ಲ. ಮೇಲ್ಸೇತುವೆ ತೆರೆದುಕೊಂಡರೆ ಅರ್ಧ ಗಂಟೆಯ ಬದಲು 5–6 ನಿಮಿಷದಲ್ಲಿ ವಾಹನಗಳು ಕ್ರಮಿಸಲಿವೆ’ ಎಂದು ಆಟೊ ಚಾಲಕ ಪ್ರಕಾಶ್‌ ತಿಳಿಸಿದರು.

ಸಿಗ್ನಲ್‌ ರಹಿತ ಸಂಚಾರ: ‘ಡಬಲ್ ಡೆಕರ್‌’ನ ಮೇಲ್ಸೇತುವೆ ಸಿಗ್ನಲ್‌ ರಹಿತವಾಗಿರುವುದರಿಂದ ವಾಹನಗಳು ತಡೆರಹಿತವಾಗಿ ಸಂಚರಿಸಲಿವೆ. ಆದರೆ, ವಾಹನಗಳು ಒಮ್ಮೆ ಮೇಲ್ಸೇತುವೆ ಏರಿದರೆ 3.3 ಕಿ.ಮೀ. ಮಧ್ಯೆ ಎಲ್ಲಿಯೂ ಇಳಿಯಲು ಅವಕಾಶವಿಲ್ಲ. ಆದರೆ, ತಿರುಗಿ ಬರಲು ಮೂರು ಯು ಟರ್ನ್‌ಗಳನ್ನು ಒದಗಿಸಲಾಗಿದೆ.

ಮೇಲ್ಸೇತುವೆ ರಸ್ತೆ ವಾಹನಗಳಿಗೆ ಮುಕ್ತಗೊಂಡರೆ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ತೆರಳುವವರಿಗೆ ಭಾರಿ ಉಪಯೋಗವಾಗಲಿದೆ. ಜೊತೆಗೆ ಎಚ್‌ಎಸ್‌ಆರ್‌ ಬಡಾವಣೆಗೆ ಕಡೆಗೆ, ಬಿಟಿಎಂ ಲೇಔಟ್‌ ಕಡೆಗೆ ಸಂಚರಿಸುವ ವಾಹನಗಳಿಗೂ ಸಮಯ ಉಳಿತಾಯವಾಗಲಿದೆ.

ಎರಡು ವಾರದಲ್ಲಿ ಉದ್ಘಾಟನೆಯ ನಿರೀಕ್ಷೆ

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಅಡಿಯಲ್ಲಿ ಬಿಎಂಆರ್‌ಸಿಎಲ್‌ ಇರುವುದರಿಂದ ಎರಡೂ ಸರ್ಕಾರಗಳು ಒಪ್ಪಿಗೆ ನೀಡಬೇಕು. ಎರಡೂ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ಇನ್ನು ಎರಡು ವಾರದ ಒಳಗೆ ಉದ್ಘಾಟನೆಗೆ ದಿನ ನಿಗದಿಯಾಗುವ ನಿರೀಕ್ಷೆ ಇದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT