ಬೆಂಗಳೂರು: ಜಾತ್ರೆ, ಸಂತೆ, ಬಸ್ ಹಾಗೂ ಜನಸಂದಣಿ ಜಾಗಗಳಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣಗಳನ್ನು ದೋಚುತ್ತಿದ್ದ ಆರೋಪಿಯನ್ನು ಬಂಧಿಸಿರುವ ಕೆ.ಆರ್. ಪುರಂ ಪೊಲೀಸರು, ₹40 ಲಕ್ಷ ಮೌಲ್ಯದ 536 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಶಾರದಾ (32) ಬಂಧಿತ ಆರೋಪಿ. ಕಳವು ವಸ್ತುಗಳನ್ನು ಸ್ವೀಕರಿಸಿದ್ದ ಈಕೆಯ ಪತಿ ಹಾಗೂ ತಂದೆಯನ್ನು ಸಹ ಬಂಧಿಸಲಾಗಿದೆ. ಈಕೆಯ ಬಂಧನದಿಂದಾಗಿ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಏಳು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ಆಗಸ್ಟ್ 13ರಂದು ಬಟ್ಟೆ ಅಂಗಡಿಯಲ್ಲಿ ಖರೀದಿಸುವ ವೇಳೆ ₹ 6 ಸಾವಿರ ನಗದು ಕಳ್ಳತನವಾಗಿತ್ತು. ಮಹಿಳೆ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಘಟನೆ ನಡೆದ 24 ತಾಸಿನಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಸಿ.ಸಿ.ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಈಕೆ ಕಳವು ಮಾಡಿರುವುದು ಗೊತ್ತಾಯಿತು.
ಅರಸೀಕೆರೆಯ ಗಿರಿವಿ ಅಂಗಡಿ, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಅಡವಿಟ್ಟಿದ್ದ ಒಟ್ಟು 536 ಗ್ರಾಂ. ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಯಿತು. ಈಕೆ ನಕಲಿ ನೋಟುಗಳನ್ನು ಕೆಳಗೆ ಬಿಸಾಡಿ, ಮಹಿಳೆಯರ ಗಮನವನ್ನು ಬೇರಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ನಕಲಿ ನೋಟಿನ ಆಸೆಗೆ ಬಿದ್ದು ಹಲವು ಮಹಿಳೆಯರು ಚಿನ್ನಾಭರಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.