ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲಕ್ಕೆ ಟ್ಯಾಂಕರ್ ಮಾಫಿಯಾ ಕನ್ನ

ಕರಿಯನಪಾಳ್ಯ: ಮನೆಗಳ ಕೊಳವೆ ಬಾವಿಗಳಲ್ಲಿ ಬತ್ತಿದ ನೀರು: ಕಂಗಾಲಾದ ಜನ
Last Updated 9 ಜುಲೈ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರು ಮಾರಾಟ ದಂಧೆಯಲ್ಲಿ ತೊಡಗಿರುವ ಟ್ಯಾಂಕರ್‌ ಮಾಫಿಯಾದವರು ಬನಶಂಕರಿ ಬಡಾವಣೆಯ 6ನೇ ಹಂತದ 2ನೇ ಬ್ಲಾಕ್‌ನ ಕರಿಯನಪಾಳ್ಯದಲ್ಲಿ ಅಂತರ್ಜಲಕ್ಕೆ ಕನ್ನ ಹಾಕುತ್ತಿದ್ದಾರೆ. ಅವರು ಸಾವಿರ ಅಡಿ ಆಳಕ್ಕೆ ಕೊಳವೆಬಾವಿ ಕೊರೆದು, ನೀರು ಹೊರ ತೆಗೆಯುತ್ತಿರುವುದರಿಂದ ಆಸುಪಾಸಿನ ಮನೆಗಳ ಕೊಳವೆಬಾವಿಗಳು ಬತ್ತಿಹೋಗಿವೆ.

‘ಕೊಳವೆಬಾವಿ ನೀರನ್ನು ಟ್ಯಾಂಕರ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುವ ದಂಧೆ ಕರಿಯನ‍ಪಾಳ್ಯದಲ್ಲಿ ನಾಲ್ಕೈದು ವರ್ಷಗಳಿಂದ ನಡೆಯುತ್ತಿದೆ. ಮೂರು ಟ್ಯಾಂಕರ್ ಲಾರಿಗಳನ್ನು ಇಟ್ಟುಕೊಂಡು ನೀರಿನ ವ್ಯಾಪಾರ ನಡೆಸುತ್ತಿರುವ ವ್ಯಕ್ತಿಯೊಬ್ಬರು ದಿನಕ್ಕೆ ಏನಿಲ್ಲವೆಂದರೂ 40ಕ್ಕೂ ಅಧಿಕ ಲೋಡ್‌ಗಳಷ್ಟು ನೀರನ್ನು ಸಾಗಿಸುತ್ತಿದ್ದಾರೆ. ಕೊಳವೆಬಾವಿಯಿಂದ ಇಷ್ಟೊಂದು ಪ್ರಮಾಣದಲ್ಲಿ ನೀರೆತ್ತುವುದರಿಂದ ಈ ಪ್ರದೇಶದ ಅಂತರ್ಜಲದ ಮಟ್ಟ ತೀವ್ರ ಕುಸಿತ ಕಂಡಿದೆ’ ಎಂದು ಬನಶಂಕರಿ ಆರನೇ ಹಂತದ ಕರಿಯನಪಾಳ್ಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪ್ರದೇಶಕ್ಕೆ ಕಾವೇರಿ ನೀರಿನ ಸಂಪರ್ಕ ಇಲ್ಲ. 3,000ಕ್ಕೂ ಹೆಚ್ಚು ಮನೆಗಳಿವೆ. ಒಂದೆರಡು ಮನೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮನೆಗಳು ಕೊಳವೆಬಾವಿ ನೀರನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ. ಟ್ಯಾಂಕರ್‌ ಮಾಫಿಯಾದವರು ಅಂತರ್ಜಲವನ್ನು ವಾಣಿಜ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಇಲ್ಲಿನ ನಿವಾಸಿಗಳೆಲ್ಲೂ ಕುಡಿಯುವ ನೀರಿಗೂ ತತ್ವಾರ ಎದುರಿಸಬೇಕಾಗಿ ಬಂದಿದೆ’ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದರು.

‘ನೀರಿನ ಮಾರಾಟ ದಂಧೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಸೋಮವಾರ ಭೇಟಿಯಾಗಿ ಈ ಪ್ರದೇಶದ ನೀರಿನ ಸಮಸ್ಯೆಯನ್ನು ವಿವರಿಸಿದ್ದೇವೆ. ನೀರಿನ ಮಾರಾಟಕ್ಕೆ ಕೊಳವೆ ನೀರನ್ನು ಬಳಸದಂತೆ ಮನವಿ ಮಾಡಿದ್ದೇವೆ. ಆದರೆ, ನಮ್ಮ ಕೋರಿಕೆಗೆ ಆ ವ್ಯಕ್ತಿ ಕಿಂಚಿತ್ತೂ ಬೆಲೆ ನೀಡಿಲ್ಲ. ‘ನಾನು ಬಂಡವಾಳ ಹೂಡಿದ್ದೇನೆ. ನನಗಾಗುವ ನಷ್ಟ ಭರಿಸುವವರು ಯಾರು’ ಎಂದು ನಮ್ಮನ್ನೇ ಪ್ರಶ್ನೆ ಮಾಡಿದ್ದಾರೆ’ ಎಂದರು.

‘ಅಂತರ್ಜಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಕೊಳವೆಬಾವಿಯ ನೀರನ್ನು ಮಾರಾಟ ಮಾಡುವ ದಂಧೆ ನಗರದಲ್ಲಿ ರಾಜಾರೋಷವಾಗಿಯೇ ನಡೆಯುತ್ತಿದೆ. ಅಂತರ್ಜಲ ನಿರ್ದೇಶನಾಲಯವಾಗಲೀ, ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಇನ್ನಾದರೂ ಸ್ಥಳಕ್ಕೆ ಭೇಟಿ ನೀಡಿ ಈ ಕೊಳವೆಬಾವಿ ನೀರನ್ನು ಟ್ಯಾಂಕರ್‌ಗಳಲ್ಲಿ ಪೂರೈಸುವುದನ್ನು ತಡೆಯಬೇಕು’ ಎಂದು ಅವರು ಒತ್ತಾಯಿಸಿದರು.

‘ತಿಂಗಳಿಗೊಮ್ಮೆ ಜಲಮಂಡಳಿ ನೀರು’
‘ಕರಿಯನಪಾಳ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಭಾವ ತೀವ್ರವಾಗಿರುವುದರಿಂದ ಜಲಮಂಡಳಿಯವರು ಟ್ಯಾಂಕರ್‌ ಮೂಲಕ ನೀರು ಪೂರೈಸುವುದಾಗಿ ಹೇಳಿದ್ದರು. 20 ದಿನಗಳಿಗೆ ಒಂದು ಟ್ಯಾಂಕರ್‌ ನೀರು ಕಳುಹಿಸುತ್ತಾರೆ. ಇದು ಯಾವುದಕ್ಕೂ ಸಾಲುತ್ತಿಲ್ಲ’ ಎಂದು ಸತೀಶ್‌ ದೂರಿದರು.

‘ಕಾವೇರಿ ಸಂಪರ್ಕ ಕಲ್ಪಿಸಿ’
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬನಶಂಕರಿ ಬಡಾವಣೆಯ ಆರನೇ ಹಂತವನ್ನು ಅಭಿವೃದ್ಧಿಪಡಿಸಿ 20 ವರ್ಷಗಳೇ ಕಳೆದಿವೆ. ಇಲ್ಲಿಗೆ ಇನ್ನೂ ಕಾವೇರಿ ನೀರಿನ ಸಂಪರ್ಕವನ್ನು ಒದಗಿಸಿಲ್ಲ.

‘ಬಿಡಿಎ ಈ ಬಡಾವಣೆ ಅಭಿವೃದ್ಧಿಪಡಿಸಿದಾಗಲೇ ನೀರಿನ ಸೌಕರ್ಯ ಒದಗಿಸಬೇಕಿತ್ತು. ನಿವೇಶನಗಳ ಹಂಚಿಕೆ ಪೂರ್ಣಗೊಂಡ ಬಳಿಕ ಬಿಡಿಎ ಈ ಬಡಾವಣೆ ಇದೆ ಎಂಬುದನ್ನೇ ಮರೆತುಬಿಟ್ಟಿದೆ’ ಎಂದು ಕರಿಯನಪಾಳ್ಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

‘ನಾನು 12 ವರ್ಷಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದೇನೆ. ಕಾವೇರಿ ಸಂಪರ್ಕ ಕಲ್ಪಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಜಲಮಂಡಳಿ ನಮ್ಮ ಬೇಡಿಕೆ ಈಡೇರಿಸಿಲ್ಲ. ಇನ್ನಾದರೂ ಇಲ್ಲಿಗೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕು’ ಎಂದು ಸತೀಶ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT