ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಸಾಲ ತೀರಿಸಲು ಚಿನ್ನದ ಸರಗಳ್ಳತನ: ಇಬ್ಬರು ಆರೋಪಿಗಳ ಬಂಧನ

Published : 29 ಸೆಪ್ಟೆಂಬರ್ 2024, 15:52 IST
Last Updated : 29 ಸೆಪ್ಟೆಂಬರ್ 2024, 15:52 IST
ಫಾಲೋ ಮಾಡಿ
Comments

ಬೆಂಗಳೂರು: ಸಾಲ ತೀರಿಸುವ ಸಲುವಾಗಿ ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ತಲಘಟ್ಟಪುರ ಪೊಲೀಸರು, ₹ 1.5 ಲಕ್ಷ ಮೌಲ್ಯದ 32 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರಹಳ್ಳಿ ನಿವಾಸಿ ರಂಗಸ್ವಾಮಿ ಅಲಿಯಾಸ್ ರಂಗ ಮತ್ತು ರಾಜರಾಜೇಶ್ವರಿ ನಗರದ ಕೃಷ್ಣಪ್ಪ ಲೇಔಟ್‌ ನಿವಾಸಿ ಶಿವಕುಮಾರ್ ಬಂಧಿತರು.

ದ್ವಾರಕಾನಗರದ ಚನ್ನಸಂದ್ರದ ಮಹಿಳೆಯೊಬ್ಬರು ಬನಶಂಕರಿಯ ಬಿಡಿಎ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು, ಅವರ ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಕೋಣನಕುಂಟೆ ಕ್ರಾಸ್ ಬಳಿ ಇಬ್ಬರು ಆರೋಪಿಗಳನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

‘ಸರಗಳವು ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡರು. ಹೊಸಕೆರೆಹಳ್ಳಿ ಆಭರಣ ಅಂಗಡಿಗೆ ಮಾರಾಟ ಮಾಡಿದ್ದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ರಂಗಸ್ವಾಮಿ ಕಾರು ಚಾಲಕನಾಗಿದ್ದರೆ, ಶಿವಕುಮಾರ್ ಆಟೊ ಚಾಲಕ. ಇಬ್ಬರೂ ದುಶ್ಚಟ ಮತ್ತು ಶೋಕಿಗಾಗಿ ಕೈ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಂಗಲ್ಯ ಸರ ಕಳ್ಳತನ: ಕಿರಾಣಿ ಅಂಗಡಿಯೊಂದರಲ್ಲಿ ಸಕ್ಕರೆ ಖರೀದಿ ನೆಪದಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ತಿರುಪತಿ ಮೂಲದ ವಿನಯ್ ಕುಮಾರ್ ಎಂಬುವರನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೆ.4ರಂದು ಠಾಣಾ ವ್ಯಾಪ್ತಿಯ ವಿನಾಯಕ ನಗರದಲ್ಲಿ ಮಹಿಳೆಯೊಬ್ಬರು ತಮ್ಮ ಅಂಗಡಿಯಲ್ಲಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ವಿನಯ್‌, ಸಕ್ಕರೆ ಖರೀದಿಸುವ ನೆಪದಲ್ಲಿ ಸಮೀಪ ಬಂದು ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ. ವಿಚಾರಣೆ ವೇಳೆ ಹನುಮಂತನಗರದಲ್ಲಿ ಮಹಿಳೆಯೊಬ್ಬರಿಂದ ಚಿನ್ನದ ಸರ ಕಸಿದ ವಿಚಾರ ಬಾಯ್ಬಿಟ್ಟಿದ್ದ. ಆರೋಪಿಯಿಂದ ₹ 5 ಲಕ್ಷ ಮೌಲ್ಯದ 77 ಗ್ರಾಂ. ಮಾಂಗಲ್ಯ ಸರ ಜಪ್ತಿ ಮಾಡಲಾಗಿದೆ.

ಬೈಕ್‌ ಅಡ್ಡಗಟ್ಟಿ ಚಿನ್ನದ ಸರ ಸುಲಿಗೆ : ನಗರದ ಸೇಂಟ್‌ ಮಾರ್ಕ್ಸ್ ರಸ್ತೆಯ ಎಸ್‌ಬಿಐ ಸರ್ಕಲ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರನ್ನು ಅಡಗಟ್ಟಿ, ಚಿನ್ನದ ಸರ ಸುಲಿಗೆ ಮಾಡಲಾಗಿದೆ.

ನಂಬರ್ ಪ್ಲೇಟ್ ಇಲ್ಲದ ಬೈಕ್​ನಲ್ಲಿ ಬಂದ ಅಪರಿಚಿತರಿಬ್ಬರು, ಯುವಕನೊಬ್ಬನ ಬಳಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಆದರೆ, ಯುವಕರು ಬೈಕ್‌ ಹಿಂಬಾಲಿಸಿಕೊಂಡು ಹೋದರು. ಬೈಕ್ ನಿಲ್ಲಿಸಿದ ಕಳ್ಳರು, ಮತ್ತೊಬ್ಬ ಯುವಕನ ಬಳಿಯೂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT