ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರ್ಮಿಕ ಮೂಲಭೂತವಾದ ವಿಜೃಂಭಣೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ

ಕುವೆಂಪು ಕುರಿತ ವಿಚಾರ ಗೋಷ್ಠಿ
Published : 10 ಜನವರಿ 2024, 15:30 IST
Last Updated : 10 ಜನವರಿ 2024, 15:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಧಾರ್ಮಿಕ ಮೂಲಭೂತವಾದ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ಇದ್ದೇವೆ. ಒಂದು ಕಡೆ ದ್ವೇಷೋತ್ಪಾದನೆ ಇದ್ದರೆ, ಇನ್ನೊಂದೆಡೆ ಭಯೋತ್ಪಾದನೆಯಿದೆ. ಆದ್ದರಿಂದ ಈ ವೇಳೆ ಕುವೆಂಪು ಅವರ ಸರ್ವಜನಾಂಗದ ಶಾಂತಿಯತೋಟ ಮುಖ್ಯವಾಗುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿ.ಎನ್. ಉಪಾಧ್ಯ ಅವರ ‘ಕುವೆಂಪು: ವಿಚಾರ ಸಾಹಿತ್ಯ ನಿರ್ಮಾಪಕರು’ ಕೃತಿ ಬಿಡುಗಡೆ ಮಾಡಿ, ಕುವೆಂಪು ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. 

‘ನಾಡು, ದೇಶದ ಬಗ್ಗೆ ಮಾತನಾಡುವಾಗ ಕುವೆಂಪು ಅವರ ಆಶಯವನ್ನು ಅನುಸರಿಸಿದರೆ ನಿಜವಾದ ಅರ್ಥದಲ್ಲಿ ನಾವು ಪ್ರಜಾಪ್ರಭುತ್ವವಾದಿಗಳಾಗಿ ರುತ್ತೇವೆ. ಧಾರ್ಮಿಕ ಮೂಲಭೂತವಾದ ಯಾವ ಧರ್ಮದಿಂದ ಬಂದರೂ ನಾನು ಖಂಡಿಸುತ್ತೇನೆ. ಜಾತ್ಯತೀತ ತತ್ವಕ್ಕೂ ಧಕ್ಕೆ ಬರುವ ಸಂದರ್ಭದಲ್ಲಿ ಇದ್ದೇವೆ. ಈ ಕಾರಣದಿಂದ ಕುವೆಂಪು ಅವರ ಜಾತ್ಯತೀತ ತತ್ವ ಹಾಗೂ ಅವರು ಪ್ರಸ್ತುತ ಆಗುತ್ತಾರೆ. ಅವರು ರಚಿಸಿದ ‘ನಾಡಗೀತೆ’ಯು ಒಕ್ಕೂಟ ಪದ್ಧತಿಯನ್ನು ಪ್ರತಿಪಾದನೆ ಮಾಡುತ್ತದೆ’ ಎಂದು ಹೇಳಿದರು.

‘ಕುವೆಂಪು ಅವರು ಪುರೋಹಿತಶಾಹಿ, ವೈದಿಕಶಾಹಿಯ ಬಗ್ಗೆ ಮಾತನಾಡಿದ್ದರು. ಆದರೆ, ಅವರು ಬ್ರಾಹ್ಮಣರ ದ್ವೇಷಿಯಾಗಿದ್ದರು ಎಂದು ಸರಳೀಕರಿಸಲಾಯಿತು. ಪುರೋಹಿತಶಾಹಿ ಎನ್ನುವುದು ಬ್ರಾಹ್ಮಣರನ್ನೂ ಒಳಗೊಂಡಂತೆ ಶೂದ್ರರಲ್ಲಿಯೂ ಇರುವ ಒಂದು ಮನೋಧರ್ಮ. ಆದ್ದರಿಂದ ಪುರೋಹಿತಶಾಹಿ, ವೈದಿಕಶಾಹಿ ಒಂದು ಜಾತಿಯಲ್ಲ. ಬ್ರಾಹ್ಮಣರನ್ನು ಅವರು ವಿರೋಧಿಸಿದ್ದರೆ ತಮ್ಮ ಕೃತಿಯಾದ ‘ರಾಮಾಯಣ ದರ್ಶನಂ’ ಅನ್ನು ಬ್ರಾಹ್ಮಣರಾದ ಟಿ.ಎಸ್. ವೆಂಕಣ್ಣಯ್ಯ ಅವರಿಗೆ ಅರ್ಪಿಸುತ್ತಿರಲಿಲ್ಲ’ ಎಂದು ತಿಳಿಸಿದರು. 

‘ಕುವೆಂಪು ಅವರ ಕಾವ್ಯದಲ್ಲಿ ಮಹಿಳೆ’ ಎಂಬ ವಿಷಯದ ಬಗ್ಗೆ ಮಾತನಾಡಿದ ವಿಮರ್ಶಕಿ ಎಲ್.ಜಿ. ಮೀರಾ, ‘ಕನ್ನಡ ನಾಡಿನ ಸ್ತ್ರೀಯರು ಕುವೆಂಪು ಅವರಿಗೆ ನಮನ ಸಲ್ಲಿಸುತ್ತಾರೆ. ಕುವೆಂಪು ಇಲ್ಲದ ಸಾಹಿತ್ಯ ಲೋಕವನ್ನು ಊಹಿಸಲೂ ಸಾಧ್ಯವಿಲ್ಲ. ಅವರು ದೇಶ, ನಾಡು ಮತ್ತು ಸ್ವಾತಂತ್ರ್ಯವನ್ನು ‘ಕಾಳಿ’ಗೆ ಹೋಲಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಹಿಂದೂವಲ್ಲದ ಕುವೆಂಪು ಹೇಗೆ ಒಕ್ಕಲಿಗ?’

‘ಒಕ್ಕಲಿಗರ ಸಂಘದ ಚುನಾವಣೆಗಳ ಕರಪತ್ರದಲ್ಲಿ ಕುವೆಂಪು ಅವರ ಫೋಟೊಗಳನ್ನು ಹಾಕಿಕೊಳ್ಳುತ್ತಾರೆ. ಅವರು ಒಕ್ಕಲಿಗರು ಎಂಬ ಕಾರಣಕ್ಕೆ ಬಳಸುವುದಾಗಿ ಆ ಸಮುದಾಯದವರು ಹೇಳುತ್ತಾರೆ. ಆದರೆ ಒಕ್ಕಲಿಗರು ಕುವೆಂಪು ಅವರನ್ನು ಎಷ್ಟು ಓದಿಕೊಂಡಿದ್ದಾರೆ? ಕುವೆಂಪು ಅವರು ತಾನು ಹಿಂದೂ ಅಲ್ಲವೆಂದು ನಿರಾಕರಿಸಿದ್ದಾರೆ. ಇನ್ನು ಅವರೆಲ್ಲಿ ಒಕ್ಕಲಿಗರಾಗುತ್ತಾರೆ? ಮುಗ್ದತನದಿಂದಲೋ ಮೂರ್ಖತನದಿಂದಲೋ ಒಂದು ಜಾತಿಗೆ ಸಂಬಂಧಿಸಿದಂತೆ ಗುರುತಿಸಲಾಗುತ್ತಿದೆ’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಬೇಸರ ವ್ಯಕ್ತಪಡಿಸಿದರು. ‘ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕುವೆಂಪು ಅವರನ್ನು ನೋಡಲು ಬಯಸಿದ್ದರು. ಕುವೆಂಪು ಅವರು ತಮ್ಮ ಜಾತಿಯ ದೊಡ್ಡ ಕವಿ ಜ್ಞಾನಪೀಠ ಸೇರಿ ವಿವಿಧ ಪ್ರಶಸ್ತಿಗಳು ಬಂದಿವೆ ಎಂಬ ಕಾರಣಕ್ಕೆ ಸ್ವಾಮೀಜಿ ಅವರ ಬಳಿ ಹೋಗಿದ್ದರು. ಮಠಾಧೀಶರಿಗೂ ಈ ರೀತಿಯ ತಪ್ಪು ತಿಳಿವಳಿಕೆ ಇರುತ್ತದೆ’ ಎಂದು ಹೇಳಿದರು. 

ಪುಸ್ತಕ ಪರಿಚಯ

ಪುಸ್ತಕ: ‘ಕುವೆಂಪು: ವಿಚಾರ ಸಾಹಿತ್ಯ ನಿರ್ಮಾಪಕರು’

ಲೇಖಕ: ಜಿ.ಎನ್. ಉಪಾಧ್ಯ

ಪುಟಗಳು: 126 ಬೆಲೆ: ₹ 150

ಪ್ರಕಾಶನ: ಜನಪ್ರಕಾಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT