ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಆಸ್ತಿ ಬಾಕಿ ಎಚ್ಚರಿಕೆಗೆ ‘ಎಐ– ಐವಿಆರ್‌ಎಸ್’

Published 5 ಫೆಬ್ರುವರಿ 2024, 23:39 IST
Last Updated 5 ಫೆಬ್ರುವರಿ 2024, 23:39 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ನಿತ್ಯವೂ ‘ಎಚ್ಚರಿಕೆಯ ಕರೆ’ ಮಾಡಲು ನಿರ್ಧರಿಸಿರುವ ಬಿಬಿಎಂಪಿ, ಇದಕ್ಕಾಗಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯ ‘ಐವಿಆರ್‌ಎಸ್’ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಮಾಲೀಕರಿಗೆ ಧ್ವನಿ ಸಂದೇಶವನ್ನು ಕರೆ ಮೂಲಕ ನೀಡುವ ‘ಇಂಟಿಗ್ರೇಟೆಡ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌ (ಐವಿಆರ್‌ಎಸ್)’ ಅಳವಡಿಸಿಕೊಳ್ಳಲು ಟೆಂಡರ್‌ ಆಹ್ವಾನಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳ ಮನವಿ ಮೇರೆಗೆ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬಿಬಿಎಂಪಿ ಮಾಹಿತಿ ವಿಭಾಗ ಮುಂದಾಗಿದೆ.

‘ಆಸ್ತಿ ತೆರಿಗೆ ಪಾವತಿ ಬಾಕಿ, ಕೈಗೊಳ್ಳಲಾಗುವ ಕ್ರಮಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಆಸ್ತಿ ಮಾಲೀಕರಿಗೆ ‘ಐವಿಆರ್‌ಎಸ್‌’ ಮೂಲಕ ಕರೆ ಮಾಡಿ ಆಗಾಗ್ಗೆ ತಿಳಿಸಲಾಗುತ್ತದೆ. ಇದರಿಂದ ಆಸ್ತಿ ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ವೇಗ ಕಂಡುಕೊಳ್ಳಬಹುದಾಗಿದೆ’ ಎಂದು ಮಾಹಿತಿ ವಿಭಾಗದ ಅಧಿಕಾರಿಗಳು ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 20 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿವೆ. 2024ರ ಜನವರಿ ಅಂತ್ಯಕ್ಕೆ ಸುಮಾರು 6 ಲಕ್ಷ ಆಸ್ತಿಗಳ ತೆರಿಗೆ ಪಾವತಿಯಾಗಿಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ತೆರಿಗೆ ಪಾವತಿ ಮಾಡಿಸಿಕೊಳ್ಳಲು ಕಂದಾಯ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಆಗಾಗ್ಗೆ ಮಾಲೀಕರಿಗೆ ನೆನಪಿಸುವ ಕಾರ್ಯ ಆಗುತ್ತಿಲ್ಲ. ಹೀಗಾಗಿ, ವೃತ್ತಿಪರ, ಐವಿಆರ್‌ಎಸ್‌ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬಿಬಿಎಂಪಿ ಕಂದಾಯ ಇಲಾಖೆ ಮುಂದಾಗಿದೆ’ ಎಂದು ಮಾಹಿತಿ ನೀಡಿದರು.

‘ಐವಿಆರ್‌ಎಸ್‌ ಕೇಂದ್ರವು ವಾರದ ಏಳೂ ದಿನ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿದೆ. ದಿನವೂ ಸುಮಾರು 60 ಸಾವಿರ ಕರೆಗಳನ್ನು ಮಾಡಬೇಕಿದ್ದು, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಸಂಖ್ಯೆ ಕಡಿಮೆಯಾದಂತೆ ಈ ಕರೆಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಸಹಾಯ ವ್ಯವಸ್ಥೆ ಹಾಗೂ ಇತರೆ ದೂರು ವಿಭಾಗಗಳಿಂದ ಪ್ರತಿನಿತ್ಯ ಸುಮಾರು 200 ದೂರುಗಳನ್ನು ನಾಗರಿಕರಿಂದ ಬಿಬಿಎಂಪಿ ಸ್ವೀಕರಿಸುತ್ತಿದ್ದು, ಅದರ ಬಗ್ಗೆ ಕೈಗೊಂಡ ಕ್ರಮದ ಮಾಹಿತಿಯನ್ನೂ ನಾಗರಿಕರಿಗೆ ನೀಡಬೇಕು. ಎಲ್ಲ ಕರೆ ಹಾಗೂ ದೂರುಗಳ ದಾಖಲೆಯನ್ನು ಪ್ರತಿ ತಿಂಗಳೂ ಬಿಬಿಎಂಪಿಗೆ ಏಜೆನ್ಸಿ ಒದಗಿಸಬೇಕು’ ಎಂದು ಅಧಿಕಾರಿಗಳು ತಿಳಿಸಿದರು.

‘ಫೆ.21ರವರೆಗೆ ಟೆಂಡರ್‌ ಸಲ್ಲಿಸಲು ಅವಕಾಶವಿದ್ದು, ತಿಂಗಳಾಂತ್ಯಕ್ಕೆ ಎಲ್ಲ ಪ್ರಕ್ರಿಯೆ ಮುಗಿಯಲಿದೆ. ಮಾರ್ಚ್ ಮೊದಲ ವಾರದಿಂದ ಐವಿಆರ್‌ಎಸ್‌ ವ್ಯವಸ್ಥೆ ಆರಂಭಿಸುವ ಯೋಜನೆಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT