ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಲೀಮೆರಿಡಿಯನ್‌ ಅಂಡರ್‌ಪಾಸ್‌ಗೆ ‘ರೂಫ್‌ ಟಾಪ್‌’

Published 12 ಜನವರಿ 2024, 23:45 IST
Last Updated 12 ಜನವರಿ 2024, 23:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಪೂರ್ವ ವಲಯದಲ್ಲಿರುವ ಅಂಡರ್‌ಪಾಸ್‌ಗಳನ್ನು ಮಳೆಗಾಲದ ಸಂದರ್ಭದಲ್ಲಿ ಸುರಕ್ಷಿತವಾಗಿರಿಸಲು ‘ರಕ್ಷಣಾ ಕಾಮಗಾರಿ’ಗಳನ್ನು ನಡೆಸಲಾಗುತ್ತಿದೆ.

2023ರ ಮೇ 21ರಂದು ಭಾರಿ ಮಳೆಗೆ ನೀರು ತುಂಬಿಕೊಂಡು ಯುವತಿ ಸಾವಿಗೆ ಕಾರಣವಾಗಿದ್ದ ಕೆ.ಆರ್‌. ವೃತ್ತದ ಅಂಡರ್‌ಪಾಸ್‌ನಲ್ಲಿ ಮಳೆನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಲಾಗುತ್ತದೆ. ಸ್ಯಾಂಕಿ ರಸ್ತೆ ಲೀಮೆರಿಡಿಯನ್‌ ಅಂಡರ್‌ಪಾಸ್‌ಗೆ ‘ರೂಫ್‌ ಟಾಪ್‌’ ನಿರ್ಮಿಸಲು ನಿರ್ಧರಿಸಲಾಗಿದೆ. ₹42.35 ಲಕ್ಷ ವೆಚ್ಚದಲ್ಲಿ ಈ ಎರಡೂ ಕಾಮಗಾರಿಗಳನ್ನು ನಿರ್ವಹಿಸಲು ಟೆಂಡರ್ ಕರೆಯಲಾಗಿದೆ.

ಪೂರ್ವ ವಲಯದಲ್ಲಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ಕಾಮಗಾರಿ ಕೈಗೊಳ್ಳಲು ₹42.35 ಲಕ್ಷ ಹಾಗೂ ವಲಯದಲ್ಲಿರುವ ಎಲ್ಲ ಅಂಡರ್‌ಪಾಸ್‌ಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ₹42.35 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ. ಆರು ತಿಂಗಳಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಕಳೆದ ವರ್ಷ ನಗರದಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ಸಾಕಷ್ಟು ಸಮಸ್ಯೆಯಾಗಿತ್ತು. ಆಗ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರಿನ ಮೀಟರ್‌ ಗೇಜ್‌ ಮತ್ತು ಸಿ.ಸಿ ಟಿ.ವಿ ಕ್ಯಾಮೆರಾ, ದೀಪ ಅಳವಡಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದರು.

ಆಯಾ ವಲಯ ವ್ಯಾಪ್ತಿಯಲ್ಲಿರುವ ಅನುದಾನವನ್ನು ಬಳಸಿಕೊಂಡು ಅಂಡರ್‌ಪಾಸ್‌ಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕು ಎಂದು ಸೂಚಿಸಲಾಗಿತ್ತು. ಇದೀಗ ಪೂರ್ವ ವಲಯದಲ್ಲಿ ರಸ್ತೆ ಮೂಲಸೌಕರ್ಯ ವಿಭಾಗದಿಂದ ಕಾಮಗಾರಿ ನಿರ್ವಹಿಸಲು ಟೆಂಡರ್‌ ಕರೆಯಲಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT