ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯ 35 ಸಾವಿರ ಕಟ್ಟಡ ಅಸುರಕ್ಷಿತ!

5 ಸಾವಿರ ಕಟ್ಟಡಗಳಿಗೆ ಮಾತ್ರ ‘ಎನ್‌ಒಸಿ’ * ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನಿರ್ಲಕ್ಷ್ಯ * ‘ಎನ್‌ಒಸಿ’ ಇಲ್ಲದ ಕಟ್ಟಡಗಳ ನಿರ್ಮಾಣಕ್ಕೂ ಅನುಮತಿ
Last Updated 11 ಜುಲೈ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರದಲ್ಲಿ ತಲೆ ಎತ್ತಿರುವ ‘ಬಹುಮಹಡಿ ಕಟ್ಟಡ’ಗಳ (15 ಮೀಟರ್‌ಗಿಂತ ಹೆಚ್ಚು ಎತ್ತರ) ಪೈಕಿ 35,000ಕ್ಕೂ ಹೆಚ್ಚು ಕಟ್ಟಡಗಳು ಸುರಕ್ಷತೆ ಮಾನದಂಡಗಳಿಗೆ ಅನುಗುಣವಾಗಿಲ್ಲ.

ನಗರದಲ್ಲಿರುವ ಅಪಾಯಕಾರಿ ಕಟ್ಟಡಗಳ ಸಮೀಕ್ಷೆ ನಡೆಸಿದ್ದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು, ಅಂಥ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷವೂ ವರದಿ ನೀಡುತ್ತಿದ್ದಾರೆ. ಆ ವರದಿಗಳು ಮೂಲೆ ಸೇರುತ್ತಿವೆ.

ಇನ್ನೊಂದೆಡೆ ಕಟ್ಟಡ ದುರಂತಗಳು ಮರುಕಳಿಸುತ್ತಲೇ ಇವೆ. ಪ್ರತಿ ಬಾರಿ ದುರಂತಕ್ಕೆ ಕಾರಣವಾದ ಅಂಶಗಳ ಕುರಿತ ತನಿಖಾ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುವಾಗ, ನಗರದಲ್ಲಿರುವ ಅಸುರಕ್ಷಿತ ಕಟ್ಟಡಗಳ ಪಟ್ಟಿಯನ್ನೂ ಗಮನಕ್ಕೆ ತರುತ್ತಿದ್ದಾರೆ. ಆದರೆ, ಪಟ್ಟಿಯಲ್ಲಿರುವ ಕಟ್ಟಡಗಳ ಮಾಲೀಕರು ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಆಗುತ್ತಿಲ್ಲ.

ಇಂಥ ವರ್ತನೆಯಿಂದಲೇ ‘ಅಸುರಕ್ಷಿತ’ ಬಹುಮಹಡಿ ಕಟ್ಟಡಗಳು ಎಲ್ಲೆಂದರಲ್ಲಿ ರಾಜಾರೋಷವಾಗಿ ತಲೆ ಎತ್ತುತ್ತಿವೆ. ಅಷ್ಟೇ ವೇಗವಾಗಿಯೇ ಕೆಲ ಕಟ್ಟಡಗಳು ಕುಸಿದು ಬಿದ್ದು, ಕಾರ್ಮಿಕರು ಹಾಗೂ ನಿವಾಸಿಗಳ ಪ್ರಾಣವನ್ನು ಬಲಿ ಪಡೆಯುತ್ತಿವೆ. ಇದಕ್ಕೆಲ್ಲ ಹೊಣೆ ಯಾರು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ.

ಹಲ್ಲು ಕಿತ್ತ ಹಾವುಗಳು: ತಮ್ಮ ವರದಿ ಆಧರಿಸಿ ಅಸುರಕ್ಷಿತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಅಸಮಾಧಾನ ವ್ಯಕ್ತಪ
ಡಿಸಿದ ಹೆಸರು ಹೇಳಿಕೊಳ್ಳಲು ಬಯಸದ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಅಧಿಕಾರಿಯೊಬ್ಬರು, ‘ನಾವು ಹಲ್ಲು ಕಿತ್ತ ಹಾವುಗಳಿದ್ದಂತೆ. ವರದಿ ನೀಡುವುದಕ್ಕಷ್ಟೇ ಸೀಮಿತ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ನಮಗಿಲ್ಲ. ಇದ್ದಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

‘ಈ ಹಿಂದೆ ದೇಶದ ಹಲವೆಡೆ ಸಂಭವಿಸಿದ್ದ ಕಟ್ಟಡ ದುರಂತಗಳಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೇ ಕಾರಣಕ್ಕೆ ಕಟ್ಟಡ ನಿರ್ಮಿಸುವ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ‘ರಾಷ್ಟ್ರೀಯ ಕಟ್ಟಡ ನೀತಿ’ ರೂಪಿಸಲಾಗಿದೆ. ಆ ನೀತಿಗೆ ವಿರುದ್ಧ
ವಾಗಿಯೂ ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಯಾವಾಗ ಬೇಕಾದರೂ ಏನಾದರೂ ಆಗಬಹುದೆಂಬ ಆತಂಕ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಎನ್‌ಒಸಿ’ ಇಲ್ಲದ ಕಟ್ಟಡಗಳಿಗೂ ಅನುಮತಿ: ರಾಷ್ಟ್ರೀಯ ಕಟ್ಟಡ ನೀತಿ ಪ್ರಕಾರ, ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ (1+4) ಅಥವಾ 15 ಮೀಟರ್‌ಗಿಂತ ಎತ್ತರವಿರುವ ಕಟ್ಟಡಗಳ ನಿರ್ಮಾಣಕ್ಕೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಎನ್‌ಒಸಿ ಇಲ್ಲದಿದ್ದರೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ ಎಂಬ ಆರೋಪವಿದೆ.

‘ರಾಷ್ಟ್ರೀಯ ಕಟ್ಟಡ ನೀತಿಯನ್ವಯ ಬಹುಮಹಡಿ ಕಟ್ಟಡ ನಿರ್ಮಿಸುವವರ ಸಂಖ್ಯೆ ತೀರಾ ಕಡಿಮೆ. ಸದ್ಯದ ಮಾಹಿತಿ ಪ್ರಕಾರ, ನಗರದ 5 ಸಾವಿರ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಎನ್‌ಒಸಿ ಪಡೆಯಲಾಗಿದೆ. ಉಳಿದಂತೆ 35,000ಕ್ಕೂ ಹೆಚ್ಚು ಕಟ್ಟಡಗಳಿಗೆ ಎನ್‌ಒಸಿ ಇಲ್ಲ. ಪ್ರತಿ ವರ್ಷ ಇಂಥ ಕಟ್ಟಡಗಳ ಸಂಖ್ಯೆ ಏರುತ್ತಲೇ ಇದೆ. ಆದರೆ, ಅಂಥ ಕಟ್ಟಡಗಳನ್ನು ಬಿಬಿಎಂಪಿಯ ಅನುಮತಿ ಪಡೆದು ನಿರ್ಮಿಸಲಾಗುತ್ತಿದೆ ಎಂಬುದೇ ಆಶ್ಚರ್ಯಕರ ಸಂಗತಿ’ ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯ: ‘ಕಟ್ಟಡ ಯೋಜನೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅನುಮತಿ ನೀಡಬೇಕಾದರೆ, ಅದರ ಮಾಲೀಕರು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ಪಡೆದ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ಪ್ರಸ್ತುತ
ಪಡಿಸಬೇಕು ಎಂಬ ನಿಯಮವಿದೆ. ಆದರೆ, ಅಧಿಕಾರಿಗಳು, ಎನ್‌ಒಸಿ ಇಲ್ಲದಿದ್ದರೂ ಅನುಮತಿ ನೀಡಿ ಕರ್ತವ್ಯಲೋಪ ಎಸಗುತ್ತಿದ್ದಾರೆ. ಅವರ ನಿರ್ಲಕ್ಷ್ಯದಿಂದಲೇ ಕಟ್ಟಡ ದುರಂತಗಳು ಸಂಭವಿಸುತ್ತಿವೆ’ ಎಂದು ಅಗ್ನಿಶಾಮಕ ಅಧಿಕಾರಿ ದೂರಿದರು.

‘ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ತಪ್ಪು ಕಂಡುಹಿಡಿದು ಅಪಾಯಕಾರಿ ಕಟ್ಟಡಗಳ ಪಟ್ಟಿಯನ್ನು ನಾವೇ ಸಿದ್ಧಪಡಿಸುತ್ತಿದ್ದೇವೆ. ಅಂಥ ಕಟ್ಟಡಗಳನ್ನು ನೆಲಸಮ ಮಾಡಿ, ಉದ್ದಿಮೆ ಪರವಾನಗಿ ರದ್ದುಪಡಿಸಿ, ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಿ ಹಾಗೂ ಚಾಲ್ತಿ
ಯಲ್ಲಿರುವ ನಿಯಮದನ್ವಯ ಪ್ರಕರಣ ದಾಖಲಿಸಿಕೊಳ್ಳಿ ಎಂಬ ಸಲಹೆ ನೀಡುತ್ತೇವೆ. ಅದಕ್ಕೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕ್ಯಾರೇ ಎನ್ನುವುದಿಲ್ಲ. ಇದು ಅಸುರಕ್ಷಿತ ಕಟ್ಟಡ ನಿರ್ಮಿಸುವವರಿಗೆ ವರದಾನವಾಗಿ ಪರಿಣಮಿಸಿದೆ’ ಎಂದರು.

‘ನೋಟಿಸ್‌ ಹಿಂಪಡೆಯುಲು ಒತ್ತಡ’
‘ಮುಂಬೈನ ಪಬ್‌ವೊಂದರಲ್ಲಿ ಇತ್ತೀಚೆಗೆ ಅಗ್ನಿ ದುರಂತ ಸಂಭವಿಸಿತ್ತು. ಮುಂಜಾಗ್ರತಾ ಕ್ರಮವಾಗಿ ನಗರದ ಪಬ್‌ಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಬಹುತೇಕ ಪಬ್‌ಗಳಿರುವ ಕಟ್ಟಡಗಳು ಅಸುರಕ್ಷಿತ ಎಂಬುದು ಗೊತ್ತಾಗುತ್ತಿದ್ದಂತೆ ನೋಟಿಸ್‌ ನೀಡಲಾಗಿತ್ತು. ಅದಾದ ನಂತರ ಅದನ್ನು ಹಿಂಪಡೆಯುವಂತೆ ನಿರಂತರವಾಗಿ ಒತ್ತಡ ಬರಲಾರಂಭಿಸಿತ್ತು’ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಜನರ ಪ್ರಾಣ ಉಳಿಸುವ ಉದ್ದೇಶದಿಂದ ನೋಟಿಸ್‌ ನೀಡಲಾಗಿತ್ತು. ಅದನ್ನು ಸ್ವೀಕರಿಸಿದ್ದ ಕಟ್ಟಡ ಮಾಲೀಕರು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬದಲು ನೋಟಿಸ್ ಹಿಂಪಡೆಯುವಂತೆ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳಿಂದ ಒತ್ತಡ ಹಾಕಿಸುತ್ತಾರೆ’ ಎಂದು ದೂರಿದರು.

‘ಶವ ತೆಗೆಯಲು ಸೇನೆಯೇ ಬರಬೇಕಾದೀತು’
‘ನಗರದಲ್ಲಿ ಓಡಾಡಿದರೆ ಬಹುತೇಕ ಕಡೆ ಬಹುಮಹಡಿ ಕಟ್ಟಡಗಳೇ ಕಣ್ಣಿಗೆ ಬೀಳುತ್ತವೆ. ನಾವು 35 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಅಸುರಕ್ಷಿತ ಎಂಬುದನ್ನು ಪತ್ತೆ ಮಾಡಿದ್ದೇವೆ. ವಾಸ್ತವದಲ್ಲಿ ಅಂಥ ಕಟ್ಟಡಗಳ ಸಂಖ್ಯೆ 50 ಸಾವಿರಕ್ಕೂ ಹೆಚ್ಚು’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಸ್ಥಳೀಯ ಸಂಸ್ಥೆಗಳ ಕಣ್ಣು ತಪ್ಪಿಸಿಯೂ ಕೆಲವರು ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಕೆರೆ, ಜೌಗು ಪ್ರದೇಶಗಳಲ್ಲೂ ಇಂದು ಬಹುಮಹಡಿ ಕಟ್ಟಡಗಳಿವೆ. ಈ ಪರಿಪಾಠ ಹೀಗೆ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಕಟ್ಟಡ ದುರಂತಗಳು ಹೆಚ್ಚಾಗಲಿವೆ. ಕಟ್ಟಡದ ಅವಶೇಷಗಳ ಅಡಿ ಸಿಲುಕುವ ಮೃತದೇಹಗಳನ್ನು ಹೊರತೆಗೆಯಲು ಸೇನೆಯನ್ನೇ ತರಿಸಬೇಕಾದ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು
* ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗವಿರಬೇಕು

* ಚಾವಣಿಯಲ್ಲಿ ಮತ್ತು ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಇರಬೇಕು

* ನೆಲ ಅಂತಸ್ತು ವಾಹನ ನಿಲುಗಡೆಗೆ ಮಾತ್ರ ಬಳಕೆಯಾಗಬೇಕು

* ಕಟ್ಟಡದಲ್ಲಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ಇರಬೇಕು

* ನೀರಿನ ಕೊಳವೆ, ಎಲೆಕ್ಟ್ರಿಕ್ ಅಲಾರಾಂ ಹಾಗೂ ಅಗ್ನಿಶಾಮಕ ಸಲಕರಣೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು

* ಕಟ್ಟಡದಲ್ಲಿ ಕನಿಷ್ಠ 2 ಕಡೆ ಮೆಟ್ಟಿಲು, ಲಿಫ್ಟ್ ಇರುವುದು ಕಡ್ಡಾಯ

* ಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು

* ನಿರ್ಗಮನ ದ್ವಾರಗಳು ಕತ್ತಲಲ್ಲೂ ಗೋಚರವಾಗುವಂತೆ ಇರಬೇಕು

(ಆಧಾರ: ರಾಷ್ಟ್ರೀಯ ಕಟ್ಟಡ ನೀತಿ)

*
ಇಲಾಖೆಯ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡರೆ ಮಾತ್ರ ದುರಂತಗಳಿಗೆ ಕಡಿವಾಣ ಬೀಳಲಿದೆ. ಇಲ್ಲದಿದ್ದರೆ, ಜನ ಸಾಯುತ್ತಲೇ ಹೋಗಬೇಕಾಗುತ್ತದೆ.
-ಎನ್.ಆರ್.ಮಾರ್ಕಂಡೇಯ, ಅಗ್ನಿಶಾಮಕ ಇಲಾಖೆಯ ನಿವೃತ್ತ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT