ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ನೇಹಿತೆ ಜೊತೆ ಚಾಟಿಂಗ್: ಯುವಕನ ಮೇಲೆ ಹಲ್ಲೆ

Published 1 ಮೇ 2024, 14:26 IST
Last Updated 1 ಮೇ 2024, 14:26 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಸ್ನೇಹಿತೆ ಜೊತೆ ವಾಟ್ಸ್ಆ್ಯಪ್‌ ಚಾಟ್‌ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಯುವಕನೊಬ್ಬನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶಶಾಂಕ್ ಹಾಗೂ ಈತನ ಸ್ನೇಹಿತ ಚಂದನ್ ಬಂಧಿತರು. ಇವರಿಬ್ಬರೂ ಸೇರಿಕೊಂಡು ಹರ್ಷಿತ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಹರ್ಷಿತ್ ನೀಡಿದ್ದ ಹೇಳಿಕೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಹರ್ಷಿತ್ ಅವರ ತಂದೆ, ಬಸವನಗುಡಿಯಲ್ಲಿ ಹೂವು ಅಲಂಕಾರ ಮಳಿಗೆ ಇಟ್ಟುಕೊಂಡಿದ್ದಾರೆ. ತಂದೆಯ ಕೆಲಸಕ್ಕೆ ಹರ್ಷಿತ್ ಸಹಾಯ ಮಾಡುತ್ತಿದ್ದ. ಮಳಿಗೆ ಬಳಿಯ ಲ್ಯಾಬ್‌ವೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು, ಅವರಿಗೂ ಹರ್ಷಿತ್‌ಗೂ ಪರಿಚಯವಾಗಿತ್ತು. ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡು, ಚಾಟ್ ಮಾಡಲಾರಂಭಿಸಿದ್ದರು.’

‘ಯುವತಿಯ ಸ್ನೇಹಿತನಾಗಿದ್ದ ಶಶಾಂಕ್, ವಾಟ್ಸ್‌ಆ್ಯಪ್‌ ಚಾಟಿಂಗ್ ಅನ್ನು ಗಮನಿಸಿದ್ದ. ‘ಹರ್ಷಿತ್ ಸ್ನೇಹಿತ. ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಯುವತಿ ಹೇಳಿದ್ದರು. ಅಷ್ಟಾದರೂ ಆರೋಪಿ, ಹರ್ಷಿತ್ ಮೇಲೆ ಅನುಮಾನ ಪಟ್ಟಿದ್ದ. ಶಶಾಂಕ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರೆಂಬ ಮಾಹಿತಿಯೂ ಇದೆ’ ಎಂದು ಪೊಲೀಸರು ತಿಳಿಸಿದರು.

ಲಾಂಗ್‌ನಿಂದ ಹೊಡೆದು ಪರಾರಿ:

‘ಆರೋಪಿ ಶಶಾಂಕ್, ಸ್ನೇಹಿತ ಚಂದನ್ ಜೊತೆ ಸಂಚು ರೂಪಿಸಿದ್ದ. ಏಪ್ರಿಲ್ 28ರಂದು ಇಬ್ಬರೂ ಮದ್ಯ ಕುಡಿದಿದ್ದರು. ನಂತರ, ಬೈಕ್‌ನಲ್ಲಿ ಹರ್ಷಿತ್‌ ಅವರ ಮಳಿಗೆಗೆ ಹೋಗಿದ್ದರು. ಅಲ್ಲಿಯೇ ಹರ್ಷಿತ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.’

‘ಹರ್ಷಿತ್ ಅವರ ಬಲಗೈ ಹೆಬ್ಬೆರಳು ತುಂಡಾಗಿತ್ತು. ಎಡಗೈಗೂ ಗಾಯವಾಗಿತ್ತು. ಎರಡೂ ಕೈಗಳಿಂದ ರಕ್ತ ಸೋರುತ್ತಿತ್ತು. ಸ್ಥಳೀಯರು ಹರ್ಷಿತ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವರ ಆರೋಗ್ಯದಲ್ಲಿ ಸದ್ಯ ಚೇತರಿಕೆ ಕಂಡುಬಂದಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT