ಶುಕ್ರವಾರ, ಜೂನ್ 5, 2020
27 °C

ಲಾಕ್‌ಡೌನ್: ವಾಣಿಜ್ಯ ಬಳಕೆ ಕಡಿಮೆಯಾದ್ದರಿಂದ ಬೆಂಗಳೂರಿನಲ್ಲಿ ಅಂತರ್ಜಲ ವೃದ್ಧಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Borewell

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬಂದ್ ಆಗಿದ್ದರಿಂದ ಬೆಂಗಳೂರಿನ ಕೆಲವೆಡೆ ಕೊಳವೆಬಾವಿಗಳಲ್ಲಿ ತಿಂಗಳ ಅವಧಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು ಕಂಡುಬಂದಿದೆ. 

ಕೇಂದ್ರ ಅಂತರ್ಜಲ ಮಂಡಳಿಯಲ್ಲಿ ವಿಜ್ಞಾನಿಯಾಗಿದ್ದ ವಿ.ಎಸ್.ಪ್ರಕಾಶ್ (ರಾಜ್ಯದಲ್ಲಿ ಬರ ಪರಿಸ್ಥಿತಿ ವೇಳೆ ನಿಭಾಯಿಸುವ ಕೆಲಸವನ್ನೂ ಮಾಡಿದ್ದರು) ಅವರು ಎಲೆಕ್ಟ್ರಾನಿಕ್ ಸಿಟಿ, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಳೆದ ತಿಂಗಳಿನಿಂದ ತಲಾ ಮೂರು ಹಾಗೂ ಒಂದು ಕೊಳವೆ ಬಾವಿಗಳ ಅಧ್ಯಯನ ನಡೆಸುತ್ತಿದ್ದಾರೆ. ಪ್ರಕಾಶ್ ಅವರು ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ’ದ ಸ್ಥಾಪಕರೂ ಹೌದು.

‘ಕೊಳವೆ ಬಾವಿಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಗಿತ್ತು. ಮಾರ್ಚ್‌ 22ರಿಂದ ಏಪ್ರಿಲ್ 25ರ ಅವಧಿಯಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕ್ರಮೇಣ ಹೆಚ್ಚಾಗಿರುವುದು ಕಂಡುಬಂದಿದೆ. ಬಳಕೆಗಾಗಿ ಪಂಪ್ ಮಾಡಲು ಆರಂಭಿಸುವುದಕ್ಕೂ ಮೊದಲು ಇದ್ದ ನೀರಿನ ಮಟ್ಟ ಹೆಚ್ಚಾಗಿರುವುದೂ ಗಮನಕ್ಕೆ ಬಂದಿದೆ’ ಎಂದು ಪ್ರಕಾಶ್ ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿನ ಕೊಳವೆ ಬಾವಿಗಳ ನೀರಿನ ಮಟ್ಟವು 67 ಮೀಟರ್‌ನಿಂದ (219 ಅಡಿ) 90 ಮೀಟರ್‌ಗೆ (295 ಅಡಿ) ಏರಿಕೆಯಾಗಿದೆ. ಎಚ್‌ಎಸ್‌ಆರ್‌ ಲೇಔಟ್‌ನ ಕೊಳವೆ ಬಾವಿಯ ನೀರಿನ ಮಟ್ಟ 2.1 ಮೀಟರ್‌ನಷ್ಟು (6.88 ಅಡಿ) ಹೆಚ್ಚಾಗಿದೆ.

ಎಲೆಕ್ಟ್ರಾನಿಕ್‌ ಸಿಟಿಯ ಶೇ 70ರಷ್ಟು ನೀರಿನ ಅವಶ್ಯಕತೆಯನ್ನು ಕೊಳವೆ ಬಾವಿಗಳೇ ಪೂರೈಸುತ್ತವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಬೆಂಗಳೂರು ಜಲಮಂಡಳಿಯು ನೀರಿನ ವಾಣಿಜ್ಯ ಉದ್ದೇಶದ ಬಳಕೆಗೆ ಹೆಚ್ಚು ಶುಲ್ಕ ವಿಧಿಸುವುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. 1,000 ಅಡಿವರೆಗಿನ ಕೊಳವೆ ಬಾವಿಯೂ ಅಲ್ಲಿದೆ. ಇನ್ನು ಎಚ್‌ಎಸ್‌ಆರ್ ಲೇಔಟ್‌ನ ಶೇ 50ರಷ್ಟು ನೀರಿನ ಅವಶ್ಯಕತೆಯನ್ನು ಕೊಳವೆ ಬಾವಿಗಳೇ ಪೂರೈಸುತ್ತವೆ. 300 ಅಡಿಗಳಿಗಿಂತ 600 ಅಡಿಗಳವರೆಗಿನ ಕೊಳವೆ ಬಾವಿಗಳು ಅಲ್ಲಿವೆ.

ಎಲೆಕ್ಟ್ರಾನಿಕ್ ಸಿಟಿಗೆ ಹೋಲಿಸಿದರೆ ಎಚ್‌ಎಸ್‌ಆರ್ ಲೇಔಟ್‌ನ ಕೊಳವೆ ಬಾವಿಗಳ ನೀರಿನ ಮಟ್ಟ ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಲು ಎರಡು ಕಾರಣಗಳಿವೆ ಎನ್ನುತ್ತಾರೆ ಪ್ರಕಾಶ್.

‘ಎಚ್‌ಎಸ್‌ಆರ್ ಲೇಔಟ್‌ ವಸತಿ ಪ್ರದೇಸವಾಗಿದೆ. ಲಾಕ್‌ಡೌನ್ ವೇಳೆ ಗೃಹ ಬಳಕೆ ಅವಶ್ಯಕತೆಗಾಗಿ ನೀರಿನ ಬಳಕೆ ಹೆಚ್ಚಾಗಿದೆ’ ಎಂದು ಅವರು ಹೇಳಿದ್ದಾರೆ. 

ನೀರಿನ ಮಟ್ಟದ ಕುರಿತು, ಅದರಲ್ಲೂ ಅಂತರ್ಜಲದ ಬಗ್ಗೆ ಲೆಕ್ಕಹಾಕಲು ನಿರ್ದಿಷ್ಟ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಿದೆ. ಬೇಡಿಕೆ–ನಿರ್ವಹಣೆ ಲೆಕ್ಕಹಾಕಬೇಕಿದೆ ಎಂದೂ ಅವರು ಹೇಳಿದ್ದಾರೆ.

‘ನೀರಿಗೆ ಸಂಬಂಧಿಸಿ ದತ್ತಾಂಶದ ಕೊರತೆ ಇದೆ. ಸರಿಯಾಗಿ ಲೆಕ್ಕಹಾಕಲಾಗದ ಯಾವುದನ್ನೇ ಆದರೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಈಗ ಅಸ್ತಿತ್ವದಲ್ಲಿರುವ ಅಂತರ್ಜಲ ಮತ್ತು ನೀರಿನ ಮೇಲ್ಮೈ ಲೆಕ್ಕಾಚಾರ ವ್ಯವಸ್ಥೆ ಸಾಕಷ್ಟು ಲೋಪದಿಂದ ಕೂಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು