ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಟಾಕಿ ಗಾಯಕ್ಕೆ 24 ಗಂಟೆಯೂ ಸೇವೆ, ಸಹಾಯವಾಣಿ ಸಂಖ್ಯೆಗಳು

Last Updated 23 ಅಕ್ಟೋಬರ್ 2022, 21:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಕಿನ ಹಬ್ಬ ದೀಪಾ ವಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿ ಸುವುದು ಪಟಾಕಿ. ಆದರೆ, ಪಟಾಕಿ ಸಿಡಿತದ ವೇಳೆ ಅಜಾಗರೂಕತೆಯೇ ಶಾಶ್ವತ ಅಂಧತ್ವಕ್ಕೆ ನೂಕುವ ಸಾಧ್ಯತೆ ಗಳಿವೆ. ಹಾಗಾಗಿ, ನಗರದ ವಿವಿಧ ಆಸ್ಪತ್ರೆಗಳುಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದು, ಹಬ್ಬದ ದಿನಗಳಲ್ಲಿ 24x7 ಸೇವೆಗಳನ್ನು ನೀಡಲು ಮುಂದಾಗಿವೆ.

ಮಿಂಟೊ, ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ, ಡಾ. ಅಗರವಾಲ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳು ಚಿಕಿತ್ಸೆಗೆ ಬೇಕಾದ ಔಷಧಗಳನ್ನು ದಾಸ್ತಾನು ಮಾಡಿ ಕೊಂಡಿವೆ. ಅದೇ ರೀತಿ, ಪ್ರತ್ಯೇಕ ಹಾಸಿಗೆ ವ್ಯವಸ್ಥೆಯನ್ನು ಮಿಂಟೊ, ನಾರಾಯಣ ನೇತ್ರಾಲಯ ಸೇರಿ ಕೆಲ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜತೆಗೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಪಟಾಕಿ ತ್ಯಜಿಸಿ, ಹಣತೆ ದೀಪ ಹಚ್ಚುವ ಮೂಲಕ ಈ ವರ್ಷದ ದೀಪಾವಳಿ ಆಚರಿಸುವಂತೆ ಮನವಿ ಮಾಡಿಕೊಂಡಿವೆ.

‘ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗುವ ಜತೆಗೆ ಸುಟ್ಟಗಾಯಗಳಾಗುವ ಸಾಧ್ಯತೆಗಳಿರುತ್ತವೆ. ಪಟಾಕಿಯ ಜೋರಾದ ಶಬ್ದದಿಂದಶ್ರವಣ ಸಮಸ್ಯೆ ಕೂಡ ಉಂಟಾಗುತ್ತದೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯಿಂದ ಉಸಿರಾಟದ (ಆಸ್ತಮಾ) ಹಾಗೂ ಚರ್ಮದ ತೊಂದರೆಗಳು ಕಾಣಿಸಿಕೊಳ್ಳಲಿವೆ. ಪಟಾಕಿಗಳನ್ನು ಹಚ್ಚಲೇಬೇಕು ಎಂದಾದಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಿ’ ಎಂದು ನಗರದ ನೇತ್ರ ವೈದ್ಯರು ಮನವಿ ಮಾಡಿದ್ದಾರೆ.

‘ಪಟಾಕಿ ಕಣ್ಣಿಗೆ ಮಾರಕವಾಗಿದ್ದು, ಅಂಧತ್ವ ತರುವ ಸಾಧ್ಯತೆಯಿರುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮ ಇಂದ್ರಿಯವಾಗಿದ್ದು, ಪಟಾಕಿ ಹಚ್ಚುವ ಮುನ್ನ ಎಚ್ಚರವಹಿಸಬೇಕು. ಸಾಮಾನ್ಯವಾಗಿ ಪಟಾಕಿ ಸಿಡಿತದಿಂದ ಗಾಯಕ್ಕೊಳಗಾದವರಲ್ಲಿ ಶೇ 19ರಷ್ಟು ಮಂದಿಗೆ ಕಣ್ಣಿಗೆ ಹಾನಿಯಾಗಿರುತ್ತದೆ. ಶೇ 30ರಷ್ಟು ಮಂದಿ ಕೈ ಬೆರಳಿಗೆ ಹಾನಿ ಮಾಡಿಕೊಂಡಿರುತ್ತಾರೆ’ ಎಂದುಮಿಂಟೊ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್ ತಿಳಿಸಿದರು.

‘ಹಸಿರು ಪಟಾಕಿಗಳಲ್ಲಿ ರಾಸಾಯನಿಕ ಗಳ ಬಳಕೆ ಪ್ರಮಾಣ ಶೇ 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದರು.

ನಕ್ಷತ್ರಕಡ್ಡಿಯೂ ಅಪಾಯಕಾರಿ: ‘ಜಾಗೃತಿಯಿಂದಾಗಿ ವರ್ಷದಿಂದ ವರ್ಷಕ್ಕೆ ಪಟಾಕಿ ಸಿಡಿಸುವ ಪ್ರಮಾಣ ಕಡಿಮೆಯಾಗುತ್ತಿದೆ. ಎಚ್ಚರಿಕೆ ವಹಿಸದೆ ಪಟಾಕಿ ಸಿಡಿಸಿದಲ್ಲಿ ದೀಪಾವಳಿ ಕತ್ತಲೆಯನ್ನು ತರುವ ಸಾಧ್ಯತೆಗಳಿವೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು.

‘ಕಡಿಮೆ ತೀವ್ರತೆಯ ಪಟಾಕಿಗಳೆಂದು ಗುರುತಿಸಿರುವ ನಕ್ಷತ್ರಕಡ್ಡಿ, ಭೂಚಕ್ರ ಇನ್ನಿತರವುಗಳೇ ಹೆಚ್ಚು ಅಪಾಯಕಾರಿ. ಇವುಗಳೂ ಸಿಡಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳಿಗೆ ಆದಷ್ಟು ದೂರದಿಂದಲೇ ಬೆಂಕಿ ಹಚ್ಚುವ ಅವಕಾಶ ನೀಡುವುದು ಉತ್ತಮ’ ಎಂದರು.

ವಿಕ್ಟೋರಿಯಾದಲ್ಲಿ ಸುಟ್ಟ ಗಾಯಕ್ಕೆ ಚಿಕಿತ್ಸೆ

ಪಟಾಕಿಅವಘಡದಿಂದ ಸಂಭವಿಸುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಕೇಂದ್ರಕ್ಕೆ ಅಗತ್ಯ ವೈದ್ಯರು, ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನದ 24 ಗಂಟೆಯೂ ಇಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ. ಕೇಂದ್ರದಲ್ಲಿ 54 ಹಾಸಿಗೆಗಳಿವೆ.

30 ಹಾಸಿಗೆಗಳ ವಾರ್ಡ್

ನಗರದ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿಗಾಯಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ. 30 ಹಾಸಿಗೆಗಳು ಈ ವಾರ್ಡ್‌ನಲ್ಲಿ ಇರಲಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ರಜೆ ಪ‍ಡೆಯದೆಯೇ ಸೇವೆ ಸಲ್ಲಿಸಲಿದ್ದಾರೆ.

‌‘ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿಯಿದ್ದು, ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ’ ಎಂದು ಡಾ. ಸುಜಾತಾ ರಾಥೋಡ್ ತಿಳಿಸಿದರು.

ಸಹಾಯವಾಣಿಗಳು

ಮಿಂಟೊ ಆಸ್ಪತ್ರೆ:9480832430 ಅಥವಾ 948174013

ನಾರಾಯಣ ನೇತ್ರಾಲಯ: ರಾಜಾಜಿನಗರ ಶಾಖೆ- 080 66121643 ಅಥವಾ 9902 546046, ಹೊಸೂರು ರಸ್ತೆ ಶಾಖೆ- 080-66660655 ಅಥವಾ9902 821128, ಇಂದಿರಾನಗರ ಶಾಖೆ– 080 66974000,ಬನ್ನೇರುಘಟ್ಟ ರಸ್ತೆ ಶಾಖೆ– 080 66121618 ಅಥವಾ9513522400

ಶಂಕರ ಕಣ್ಣಿನ ಆಸ್ಪತ್ರೆ: (ಮಾರತಹಳ್ಳಿ)080 69038900 ಅಥವಾ9739270477

ರೈನ್‌ಬೋ ಮಕ್ಕಳ ಆಸ್ಪತ್ರೆ: (ಬನ್ನೇರುಘಟ್ಟ) 9355400341, ಮಾರತಹಳ್ಳಿ ಶಾಖೆ 9355400340, ಹೆಬ್ಬಾಳ ಶಾಖೆ 9355400342

ಜಯನಗರದ ನೇತ್ರಧಾಮ: 080 26088000 ಅಥವಾ 9448071816

ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ: ಬನ್ನೇರುಘಟ್ಟ ಶಾಖೆ 08048193419, ರಾಜರಾಜೇಶ್ವರಿ ನಗರ ಶಾಖೆ 918048193501

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT