ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Karaga | ಏ.6ರಂದು ಬೆಂಗಳೂರು ಕರಗ

Last Updated 21 ಮಾರ್ಚ್ 2023, 23:45 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಹಾಗೂ ಕೋವಿಡ್‌ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರು ಕರಗ ಉತ್ಸವ ಏ.6ರಂದು ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ದ್ರೌಪದಿದೇವಿ ಕರಗ ಶಕ್ತ್ಯುತ್ಸವ ಮತ್ತು ಧರ್ಮರಾಯ ಸ್ವಾಮಿ ರಥೋತ್ಸವದ ಆಹ್ವಾನ ಪತ್ರಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿ, ಅವರು ಮಾತನಾಡಿದರು.

ಕರಗ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಬೀದಿಗಳಲ್ಲಿ ದೀಪಗಳನ್ನು ಅಳವಡಿಸಬೇಕು. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು. ಇ-ಶೌಚಾಲಯಗಳನ್ನು ಅಳವಡಿಸಬೇಕು. ಬಿಬಿಎಂಪಿ ವತಿಯಿಂದ ಸಂಪಂಗಿರಾಮನಗರ ಕಲ್ಯಾಣಿಯನ್ನು ಸ್ವಚ್ಛ ಮಾಡಬೇಕು. ಜಲಮಂಡಳಿ ವತಿಯಿಂದ ಕಲ್ಯಾಣಿಗೆ ನೀರು ತುಂಬಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದರು.

ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಕ್ರಮ ವಹಿಸಬೇಕು. ಸಂಚಾರ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಹೇಳಿದರು.

‘ಕರಗ ಉತ್ಸವಕ್ಕೆ ವ್ಯಾಪಾರಿಗಳು ಹಣವನ್ನು ಮುಂಗಡವಾಗಿ ಕೇಳುತ್ತಿದ್ದಾರೆ. ಹೀಗಾಗಿ ₹70 ಲಕ್ಷ ಬಿಡುಗಡೆ ಮಾಡಬೇಕು’ ಎಂದು ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿಯವರು ಮನವಿ ಮಾಡಿದರು.

‘ಕರಗ ಉತ್ಸವಕ್ಕೆ ₹1 ಕೋಟಿಯವರೆಗೂ ಹಣ ಬಿಡುಗಡೆ ಮಾಡಲು ಅವಕಾಶವಿದೆ. ಈ ಆರ್ಥಿಕ ವರ್ಷವಾದ ನಂತರವಷ್ಟೇ ಹಣ ಬಿಡುಗಡೆ ಮಾಡಬಹುದು. ಎಲ್ಲದ್ದಕ್ಕೂ ಸೂಕ್ತ ಬಿಲ್‌ಗಳನ್ನು ನೀಡಿದರೆ ಏಪ್ರಿಲ್‌ನಲ್ಲಿ ಕೂಡಲೇ ಹಣ ಬಿಡುಗಡೆ ಮಾಡಲಾಗುತ್ತಿದೆ. ಕಳೆದ ಬಿಲ್‌ ಬಾಕಿ ಇದ್ದರೆ, ಅದಕ್ಕೆ ಬಿಲ್‌ಗಳನ್ನು ನೀಡಿದರೆ, ಅವು ಕ್ರಮಬದ್ಧವಾಗಿದ್ದರೆ ಹಣ ಬಿಡುಗಡೆಯಾಗುತ್ತದೆ’ ಎಂದು ತುಷಾರ್‌ ಗಿರಿನಾಥ್‌ ಸ್ಪಷ್ಟಪಡಿಸಿದರು.

‘ಕರಗ ನಡೆಯುವ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಬಹುದು. ಹೀಗಾಗಿ ಅಧಿಕಾರಿಗಳು ಹೇಳಿದಂತೆ ಕೇಳಿ. ಹೆಚ್ಚು ತೊಂದರೆ ಕೊಡಬೇಡಿ. ಎಲ್ಲ ರೀತಿಯ ನೆರವಿನೊಂದಿಗೆ ಉತ್ಸವ ನಡೆಸಿ’ ಎಂದು ಶಾಸಕ ಉದಯ್‌ ಗರುಡಾಚಾರ್‌ ಹೇಳಿದರು.

‘ಎಂದಿನಂತೆ ಕರಗ ಮಸ್ತಾನ್‌ ಸಾಬ್‌ ದರ್ಗಾಗೆ ಹೋಗುತ್ತದೆ. ಎಲ್ಲ ರೀತಿಯ ಸಂಪ್ರದಾಯಗಳು ಎಂದಿನಂತೆಯೇ ನಡೆಯಲಿವೆ’ ಎಂದು ಸ್ಪಷ್ಟಪಡಿಸಿದರು.

ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ಡಾ. ದೀಪಕ್, ‌‌ರವೀಂದ್ರ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸತೀಶ್ ಇದ್ದರು.

ಕರಗ ವೇಳಾಪಟ್ಟಿ

ಮಾರ್ಚ್‌ 29ರಂದು ರಥೋತ್ಸವ ಧ್ವಜಾರೋಹಣ

ಮಾರ್ಚ್‌ 30ರಿಂದ ಏ.2ರವರೆಗೆ ಪ್ರತಿದಿನ ವಿಶೇಷ ಪೂಜೆ

ಏ.3ರಂದು ಆರತಿ ದೀಪಗಳು

ಏ.4ರಂದು ಹಸೀ ಕರಗ (ಸಂಪಂಗಿ ಕೆರೆ ಅಂಗಳದಲ್ಲಿ)

ಏ.5ರಂದು ಪೊಂಗಲು ಸೇವೆ

ಏ.6ರಂದು ಕರಗ ಶಕ್ತ್ಯುತ್ಸವ– ಧರ್ಮರಾಯಸ್ವಾಮಿ ಮಹಾರಥೋತ್ಸವ

ಏ.7ರಂದು ದೇವಸ್ಥಾನದಲ್ಲಿ ಗಾವು ಶಾಂತಿ

ಏ.8ರಂದು ವಸಂತೋತ್ಸವ, ಧ್ವಜಾರೋಹಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT