ಗುರುವಾರ , ಮೇ 26, 2022
30 °C
ಆರು ಶಾಲೆಗಳಲ್ಲಿ ತಪಾಸಣೆ * ‘ಇ–ಮೇಲ್’ ಬೆನ್ನುಬಿದ್ದ ತನಿಖಾ ತಂಡ

ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ಹುಸಿಯೆಂದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಲೆಯಲ್ಲಿ ಶಕ್ತಿಯುತ ಬಾಂಬ್ ಇಟ್ಟಿದ್ದೇವೆ’ ಎಂಬುದಾಗಿ ಬೆದರಿಕೆ ಸಂದೇಶ ಬಂದಿದ್ದರಿಂದ ನಗರದ ಆರು ಶಾಲೆಗಳಲ್ಲಿ ಪೊಲೀಸರು ಚುರುಕಿನ ತಪಾಸಣೆ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದಿದ್ದರಿಂದ, ಇದೊಂದು ಹುಸಿ ಸಂದೇಶವೆಂದು ಘೋಷಿಸಿದರು.

'ಮಹದೇವಪುರದ ಗೋಪಾಲನ್ ಇಂಟರ್‌ ನ್ಯಾಷನಲ್ ಶಾಲೆ, ವರ್ತೂರು ಬಳಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಬಳಿಯ ವಿನ್ಸೆಂಟ್ ಪಲ್ಲೋಟಿ, ಗೋವಿಂದಪುರ ಠಾಣೆ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಹಾಗೂ ಹೆಬ್ಬಗೋಡಿಯ ಎಬಿನೈಸರ್ ಸ್ಕೂಲ್‌ನಲ್ಲಿ ಬಾಂಬ್ ಇರಿಸಿರುವ ಬಗ್ಗೆ ಶುಕ್ರವಾರ ಬೆಳಿಗ್ಗೆ ಸಂದೇಶ ಬಂದಿತ್ತು' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಿಮ್ಮ ಶಾಲೆಯಲ್ಲಿ ಪ್ರಬಲವಾದ ಬಾಂಬ್‌ ಇರಿಸಲಾಗಿದೆ. ಇದು ತಮಾಷೆಯಲ್ಲ. ತಕ್ಷಣವೇ ಪೊಲೀಸರು ಮತ್ತು ಯೋಧರನ್ನು ಕರೆಯಿಸಿ. ನೀವು ಸೇರಿದಂತೆ ನೂರಾರು ಜೀವಗಳು ಅಪಾಯದಲ್ಲಿ ಸಿಲುಕಬಹುದು. ವಿಳಂಬ ಮಾಡಬೇಡಿ. ಈಗ ಎಲ್ಲವೂ ನಿಮ್ಮ ಕೈಯಲ್ಲಿದೆ’ ಎಂಬ ಸಂದೇಶ ಇ–ಮೇಲ್‌ನಲ್ಲಿತ್ತು’ ಎಂದೂ ತಿಳಿಸಿದರು.

ಸಂಜೆವರೆಗೂ ತಪಾಸಣೆ: ‘ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಶಾಲೆಗಳಿಗೆ ಹೋಗಿ ಸಂಜೆಯವರೆಗೂ ತಪಾಸಣೆ ಮಾಡಿದ್ದಾರೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ’ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.

‘ಇದೊಂದು ಹುಸಿ ಸಂದೇಶವೆಂದು ಗೊತ್ತಾಗಿದ್ದು, ಈ ಬಗ್ಗೆ ಆಯಾ ಶಾಲೆಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ಧೈರ್ಯ ತುಂಬಲಾಗಿದೆ. ಇ– ಮೇಲ್ ಕಳುಹಿಸಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಶಾಲೆಗಳಿಗೂ ಭದ್ರತೆ ಕಲ್ಪಿಸಲಾಗಿದೆ’ ಎಂದೂ ತಿಳಿಸಿದರು.

ಮೈದಾನದಲ್ಲಿ ಮಕ್ಕಳು: ಶಾಲೆ ಕೊಠಡಿಯಲ್ಲಿದ್ದ ಮಕ್ಕಳನ್ನು ತಪಾಸಣೆಗೂ ಮುನ್ನ ಮೈದಾನಕ್ಕೆ ಕರೆತರಲಾಯಿತು. ತಾತ್ಕಾಲಿಕ್ ಶೆಡ್‌ಗಳಲ್ಲಿ ಮಕ್ಕಳು, ಶಿಕ್ಷಕರನ್ನು ಕೂರಿಸಲಾಯಿತು. ಆಟಿಕೆ ಸಾಮಗ್ರಿ, ಶಾಲೆಯ ಪ್ರತಿಯೊಂದು ಬೋಧನಾ ಕೊಠಡಿ, ಶೌಚಾಲಯ ಹಾಗೂ ಇತರೆ ಕೊಠಡಿಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು