ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ 68 ಶಾಲೆಗಳಿಗೆ ಬಾಂಬ್ ಬೆದರಿಕೆ: ಪೋಷಕರಲ್ಲಿ ಆತಂಕ

Published 1 ಡಿಸೆಂಬರ್ 2023, 5:18 IST
Last Updated 1 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವ್ಯಾಪ್ತಿಯ 48 ಹಾಗೂ ಗ್ರಾಮಾಂತರ ವಿಭಾಗದ 20 ಶಾಲೆಗಳೂ ಸೇರಿದಂತೆ ಒಟ್ಟು 68 ಶಾಲೆಗಳಿಗೆ ಶುಕ್ರವಾರ ಬೆಳಿಗ್ಗೆ ತಲುಪಿದ ಬಾಂಬ್‌ ಬೆದರಿಕೆ ಹೊತ್ತ ಇ–ಮೇಲ್‌, ಶಾಲೆಗಳ ಆವರಣದಲ್ಲಿ ತಲ್ಲಣಕ್ಕೆ ಕಾರಣವಾಯಿತು.

ಬಾಂಬ್‌ ಬೆದರಿಕೆಯ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ತಮ್ಮ ಮಕ್ಕಳನ್ನು ಕರೆತರಲು ಪೋಷಕರು ತಂಡೋಪತಂಡವಾಗಿ ಶಾಲೆಗಳ ಕಡೆ ದೌಡಾಯಿಸಿದರು. ಇದರಿಂದಾಗಿ ಶಾಲಾ ಅಂಗಳಗಳಲ್ಲಿ ಆತಂಕ ಮನೆ ಮಾಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಶಾಲೆಗಳ ಆವರಣಗಳಲ್ಲಿ ಶೋಧ ಆರಂಭಿಸಿದರು. ಸದಾಶಿವನಗರದ ಶಾಲೆಯೊಂದಕ್ಕೆ ಭೇಟಿ ಕೊಟ್ಟ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶಿಕ್ಷಕರು, ಮಕ್ಕಳಲ್ಲಿ ಧೈರ್ಯ ತುಂಬುವ ಯತ್ನ ಮಾಡಿದರು. ಪೊಲೀಸರು ಶೋಧ ನಡೆಸಿದ ಬಳಿಕ, ಯಾವುದೇ ಬಾಂಬ್ ಪತ್ತೆಯಾಗದಿದ್ದಾಗ ಇದೊಂದು ಹುಸಿ ಬೆದರಿಕೆ ಎಂಬುದು ಮಧ್ಯಾಹ್ನದ ಹೊತ್ತಿಗೆ ಖಚಿತವಾಯಿತು.

ಬೆದರಿಕೆಯ  ಇ– ಮೇಲ್‌ ಕಳುಹಿಸಿ, ಭಯ ಸೃಷ್ಟಿಗೆ ಕಾರಣರಾದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ನಗರ ವ್ಯಾಪ್ತಿಯಲ್ಲೇ 48 ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗಳಿಗೆ ಬೆದರಿಕೆ ಬಂದಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಸಿಸಿಬಿ ವಿಭಾಗದ ಡಿಸಿಪಿ ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

kharijjitas@bebbel.com ನಿಂದ ಇ–ಮೇಲ್‌ ಬಂದಿದೆ. ಅಂತರರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪಿಸಿ ಇ–ಮೇಲ್‌ ಬರೆಯಲಾಗಿದ್ದು, ವಿಪಿಎನ್‌ ಸಂಪರ್ಕದ ಮೂಲಕ ವಿದೇಶದಿಂದ ಇ–ಮೇಲ್ ಬಂದಿರುವಂತೆ ರವಾನಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಇ–ಮೇಲ್‌ ಬಂದಿರುವ ಶಾಲೆಗಳ ಕೊಠಡಿ, ಶಿಕ್ಷಕರ ಕೊಠಡಿ, ಮೈದಾನ ಹಾಗೂ ಇತರೆ ಎಲ್ಲ ಸ್ಥಳಗಳಲ್ಲೂ ಶೋಧ ನಡೆಸಲಾಗಿದೆ’.

‘ಯಾವುದೇ ಅನುಮಾನಾಸ್ಪದ ವಸ್ತುಗಳು, ಸ್ಫೋಟಕಗಳು ಪತ್ತೆಯಾಗಿಲ್ಲ. ಬರಹ ಮಾತ್ರ ಏಕಸ್ವರೂಪದಲ್ಲಿದೆ. ಇ– ಮೇಲ್‌ನಲ್ಲಿ ಉಲ್ಲೇಖಿಸಿ ದಂತೆ ಎಲ್ಲಿಯೂ ಬಾಂಬ್‌ ಪತ್ತೆಯಾಗಿಲ್ಲ. ಆದರೆ, ಪತ್ರದಲ್ಲಿ ಉಗ್ರ ಚಟುವಟಿಕೆಗಳ ಕುರಿತು ಪ್ರಸ್ತಾಪಿಸಲಾಗಿದೆ. ಇ– ಮೇಲ್ ಅನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

ಬೆದರಿಕೆಯು ಕಾಡ್ಗಿಚ್ಚಿನಂತೆ ವ್ಯಾಪಿಸಿದ್ದರಿಂದ ನಗರದ ಶಾಲಾ ಆವರಣದಲ್ಲಿ ಇಡೀ ದಿನ ಆತಂಕದ ವಾತಾವರಣವಿತ್ತು. ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ಗಂಟೆ ಒಳಗೆ ಉತ್ತರ ವಲಯ, ದಕ್ಷಿಣ ವಲಯ, ಆನೇಕಲ್‌ನ ಶಾಲೆಗಳಿಗೆ ಇ– ಮೇಲ್‌ನಲ್ಲಿ ಬೆದರಿಕೆ ಬಂದಿದೆ. ಆಗಷ್ಟೇ ಪೋಷಕರು  ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆ, ಕೆಲಸಕ್ಕೆ ತೆರಳಿದ್ದರು. ಮಾಹಿತಿ ತಿಳಿದ ಪೋಷಕರೂ ದಿಗ್ಭ್ರಾಂತಕ್ಕೆ ಒಳಗಾದರು.

ಸದಾಶಿವನಗರದ ನೀವ್‌ ಅಕಾಡೆಮಿ ಶಾಲೆಗೆ ಬೆಳಿಗ್ಗೆ 8ಕ್ಕೆ ಬಂದ ಸಿಬ್ಬಂದಿ ಕಂಪ್ಯೂಟರ್‌ನಲ್ಲಿ ಇ– ಮೇಲ್ ಪರಿಶೀಲನೆ ನಡೆಸಿದಾಗ ‘ಶಾಲಾ ಅಂಗಳದಲ್ಲಿ ಸ್ಪೋಟಕವಿದೆ’ ಎಂದು ಮಾಹಿತಿ ಓದಿ ಬೆಚ್ಚಿಬಿದ್ದರು. ಅದಾದ ನಂತರ ಬೆದರಿಕೆ ಬಂದಿರುವ ಶಾಲೆಗಳ ಪಟ್ಟಿ ಬೆಳೆಯುತ್ತಾ ಹೋಯಿತು. ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ಆತಂಕಕ್ಕೀಡಾದರೆ, ಪುಟ್ಟ ಮಕ್ಕಳು ಕಂಗಾಲಾಗಿದ್ದರು.

‘ಇದೊಂದು ಹುಸಿ ಬಾಂಬ್ ಬೆದರಿಕೆಯಾಗಿದೆ. ನಿರ್ಲಕ್ಷ್ಯ ವಹಿಸದೇ ಗಂಭೀರವಾಗಿ ತನಿಖೆ ನಡೆಸಲಾಗುವುದು. ಶಾಲಾ ಆಡಳಿತ ಮಂಡಳಿಯರು ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ಬೆದರಿಕೆ ಕರೆ ಬಾರದ ಶಾಲೆಗಳಿಗೂ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದರು.

ಮಾಹಿತಿ ತಿಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಜತೆಗೆ ಸಮಾಲೋಚನೆ ನಡೆಸಿದರು. ಸ್ಥಳಕ್ಕೆ ಎಲ್ಲ ತಪಾಸಣಾ ಸಿಬ್ಬಂದಿ ರವಾನಿಸುವಂತೆ ಸೂಚನೆ ನೀಡಿದರು.

‘ಅಲ್ಲಾಹುವಿನ ಶತ್ರುಗಳನ್ನು ಬಿಡುವುದಿಲ್ಲ’
‘ಶಾಲಾ ಮೈದಾನದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ. ನ.26ರಂದು ಅಲ್ಲಾಹುವಿನ ಮಾರ್ಗದಲ್ಲಿ ನಮ್ಮ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಹತ್ಯೆ ಮಾಡಿದ್ದಾರೆ. ನೂರಾರು ಮುಜಾಹಿದ್​ಗಳು ಅಲ್ಲಾಹುವಿನ ಮಾರ್ಗದಲ್ಲಿ ಹೋರಾಟ ನಡೆಸಲು ಈಗ ಸಜ್ಜಾಗಿದ್ದೇವೆ. ನೀವು ಅಲ್ಲಾಹುವಿನ ಶತ್ರುಗಳು. ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಬಿಡುವುದಿಲ್ಲ’ ಎಂದು ಇ– ಮೇಲ್‌ನಲ್ಲಿ ಪ್ರಸ್ತಾಪಿಸಲಾಗಿದೆ. ‘ನೀವೆಲ್ಲರೂ ನಮ್ಮ ಗುಲಾಮರಾಗದೆ ಬೇರೆ ಆಯ್ಕೆಗಳೇ ಇಲ್ಲ. ಅಲ್ಲಾಹುವಿನ ನೈಜ ಧರ್ಮವನ್ನು ಸ್ವೀಕರಿಸಿ.‌ ನಿಮ್ಮ ದೇವಸ್ಥಾನಗಳು, ನಿಮ್ಮ ಮೂರ್ತಿಗಳು, ಬುದ್ಧನಿಂದ ಅನಂತತ್ವದವರೆಗಿನ ನಿಮ್ಮ ನಂಬಿಕೆಗಳೆಲ್ಲವನ್ನೂ ಸ್ಪೋಟಿಸಲಿದ್ದೇವೆ. ಇಸ್ಲಾಂಗೆ ಎಲ್ಲರೂ ಮತಾಂತರಗೊಳ್ಳಬೇಕು. ಇಲ್ಲವೇ ಇಸ್ಲಾಂನ ಹರಿತವಾದ ಖಡ್ಗಕ್ಕೆ ಸಿಲುಕಿ ಸಾಯಿರಿ’ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ಇ- ಮೇಲ್‌ ಮಾಡಲಾಗಿದೆ.

ನಗರ, ಗ್ರಾಮೀಣ ಭಾಗದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಬೆದರಿಕೆ ಪತ್ರ ಬಂದಿತ್ತು. ನಗರದ ಸಾಣೆಗುರುವನಹಳ್ಳಿ ಸರ್ಕಾರಿ ಶಾಲೆಗೆ ಇ– ಮೇಲ್ ಬಂದಿದ್ದರಿಂದ ಅಲ್ಲಿಯೂ ಆತಂಕದ ಸ್ಥಿತಿಯಿತ್ತು. ನ್ಯಾಷನಲ್‌ ಪಬ್ಲಿಕ್‌ ಅಕಾಡೆಮಿ, ಸೇಂಟ್‌ ಜಾನ್ಸ್‌ ಶಾಲೆ, ಬೆಂಗಳೂರು ಟ್ರಸ್ಟ್‌ ಸ್ಕೂಲ್‌, ನ್ಯೂ ಅಕಾಡೆಮಿ ಸ್ಕೂಲ್‌, ಅನುಪಮಾ ಶಾಲೆ ಸೇರಿದಂತೆ ಹಲವು ಶಾಲೆಗಳ ಆವರಣದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

‘ಐಪಿ ಅಡ್ರೆಸ್ ಜರ್ಮನಿ ಯಲ್ಲಿದೆ ಎಂಬುದು ಗೊತ್ತಾಗಿದೆ. ಜರ್ಮನಿಯಿಂದ ಇ ಮೇಲ್ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ. ಇಲ್ಲವಾದರೆ ಬೇರೆ ದೇಶದಲ್ಲೇ ಕುಳಿತುಕೊಂಡು ಹ್ಯಾಕ್ ಮಾಡಿ ಇ ಮೇಲ್ ಸಂದೇಶ ಕಳಿಸಿರುವ ಸಾಧ್ಯತೆಯೂ ಇದೆ. ಮಲೇಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳಿಗೆ ಬೀಬಲ್ ಡಾಟ್ ಕಾಂನಿಂದ ಈ ಹಿಂದೆ ಬೆದರಿಕೆ ಬಂದಿತ್ತು. ಈ ಬಾರಿ ಬೆಂಗಳೂರಿನ ಶಾಲೆಗಳಿಗೆ ಬೀಬಲ್.ಕಾಂ ಮೂಲಕ ಬಾಂಬ್ ಸಂದೇಶ ರವಾನೆಯಾಗಿದೆ’ ಎಂದು ಪೊಲೀಸರು ಹೇಳಿದರು.

ಎಲ್ಲ ಶಾಲೆಗಳಿಗೂ ಭದ್ರತೆ ಒದಗಿಸಿ ಎಚ್ಚರಿಕೆಯಿಂದಿರಲು ಪೊಲೀಸರಿಗೆ ಸೂಚಿಸಿದ್ದೇನೆ. ಬೆದರಿಕೆ ಪತ್ರ ಕಳುಹಿಸಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಕೊಠಡಿಯಿಂದ ಓಡಿಬಂದ ಶಿಕ್ಷಕರು, ವಿದ್ಯಾರ್ಥಿಗಳು

ಬಾಂಬ್ ಬೆದರಿಕೆ ವಿಷಯ ಹಬ್ಬುತ್ತಿದಂತೆ ಬಹುತೇಕ ಶಾಲೆಗಳಲ್ಲಿ ಮಕ್ಕಳನ್ನು ಶಾಲಾ ಕಟ್ಟಡದಿಂದ ಹೊರ ಕರೆತಂದು, ಮೈದಾನದಲ್ಲಿ ಬಿಡಲಾಯಿತು. ಬಾಂಬ್‌ ಬೆದರಿಕೆ ಬಂದ ಕೆಲ ಶಾಲೆಗಳು ಅಕ್ಕಪಕ್ಕದ ಶಾಲೆಗಳ ಬಸ್‌ಗಳನ್ನು ಬಳಸಿಕೊಂಡು ಮಕ್ಕಳನ್ನು ಮನೆಗೆ ಕಳುಹಿಸಿದರು. ಅಷ್ಟರಲ್ಲಿ ಬಾಂಬ್‌ ಬೆದರಿಕೆ ಬಾರದ ಶಾಲೆಗಳಲ್ಲೂ ಗದ್ದಲ ಆರಂಭವಾಯಿತು. ಆಗಲೇ ಬಸ್‌ಗಳನ್ನು ಬೆದರಿಕೆ ಇದ್ದ ಶಾಲೆಗಳಿಗೆ ಕಳುಹಿಸಿಕೊಟ್ಟಿದ್ದರಿಂದ ಉಳಿದ ಶಾಲೆಗಳ ಆಡಳಿತ ಮಂಡಳಿಗಳು ಆತಂಕದ ಪರಿಸ್ಥಿತಿ ಎದುರಿಸಿದರು.

‘ಕೆಲಸಕ್ಕೆ ತೆರಳಿದ್ದೆ. ಮನೆಯಿಂದ ಕರೆ ಬಂದ ಕಾರಣ ಆತಂಕದಲ್ಲೇ ಶಾಲೆ ಬಳಿ ತೆರಳಿದೆ. ಅಲ್ಲಿ ಪೋಷಕರ ದಟ್ಟಣೆಯೇ ನೆರೆದಿತ್ತು. ನಂತರ ಪುತ್ರಿಯನ್ನು ಕರೆದುಕೊಂಡು ಮನೆಗೆ ತಲುಪಿಸಿ, ಮತ್ತೆ ಕಚೇರಿಗೆ ತೆರಳಿದೆ. ಎಲ್ಲ ಪೋಷಕರಲ್ಲೂ ಆತಂಕ ಮನೆ ಮಾಡಿತ್ತು’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಯಿಕ್ರಿಯಿಸಿದರು.

ಆರಂಭದಲ್ಲಿ ಬಂದ ಕೆಲ ಪೋಷಕರಿಗೆ ಪರಿಸ್ಥಿತಿ ಮನವರಿಕೆ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಒತ್ತಡಕ್ಕೆ ಮಣಿದು ಪೋಷಕರ ಜತೆ ಮಕ್ಕಳನ್ನು ಕಳಹಿಸಿಲು ಆರಂಭಿಸಿದ ನಂತರ ಆ ಪೋಷಕರಿಂದ ಇತರೆ ಪೋಷಕರಿಗೆ ಮಾಹಿತಿ ನೀಡಲು ಆರಂಭಿಸಿದರು. ಇದರಿಂದ ಕಡಿಮೆ ಸಮಯದಲ್ಲಿ ಎಲ್ಲ ಪೋಷಕರು ಶಾಲೆ ಬಳಿ ಜಮಾಯಿಸಲು ದಾರಿಯಾಯಿತು ಎಂದು ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಮಾಹಿತಿ ನೀಡಿದರು.

ರೋಪಿಗಳು ವಿದೇಶಿ ಇ–ಮೇಲ್‌ ವ್ಯವಸ್ಥೆ ಬಳಸಿರುವುದು ಪತ್ತೆಯಾಗಿದೆ. ಐ.ಪಿ ವಿಳಾಸದ ಮಾಹಿತಿ ಒದಗಿಸುವಂತೆ ಆ ಕಂಪನಿಗೆ ಪೊಲೀಸರು ಪತ್ರ ಬರೆದಿದ್ದಾರೆ.
ಜಿ. ಪರಮೇಶ್ವರ, ಗೃಹ ಸಚಿವ

ಪದೇ ಪದೇ ಶಾಲೆಗಳಿಗೆ ಬೆದರಿಕೆ

ಬೆಂಗಳೂರಿನಲ್ಲಿ ಪದೇ ಪದೇ ಶಾಲೆಗಳನ್ನೇ ಗುರಿಯಾಗಿಸಿ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸುತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

2022 ಜುಲೈ 29ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಡೆತನದ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಬಂದಿತ್ತು. ನಂತರ ತನಿಖೆ ನಡೆಸಿದ ಪೊಲೀಸರಿಗೆ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಬೆದರಿಕೆ ಹಾಕಿದ್ದ ಎಂಬುದಾಗಿತ್ತು. ಆತನನ್ನು ವಶಕ್ಕೆ ಪಡೆಯಲಾಗಿತ್ತು.

2023 ಜನವರಿ 6ರಂದು ರಾಜಾಜಿನಗರದ ಎನ್‌ಪಿಎಸ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಈ ಮೇಲ್‌ ಮೂಲಕವೇ ಬೆದರಿಕೆ ಹಾಕಲಾಗಿತ್ತು. ‘ಶಾಲೆ ಆವರಣದಲ್ಲಿ ಜಿಲಿಟಿನ್ ಕಡ್ಡಿ ಇಟ್ಟು ಸ್ಫೋಟಿಸಲಾಗುವುದು’ ಎಂದು ಬೆದರಿಕೆ ಹಾಕಲಾಗಿತ್ತು.

ಬೆದರಿಕೆ ಇ ಮೇಲ್‌ನ ಹಿಂದಿನ ಹುನ್ನಾರ ಏನಿದೆ ಎಂಬುದು ಕುರಿತು ತನಿಖೆ ನಡೆಯುತ್ತಿದೆ. ಬೀಬಲ್ ಡಾಟ್‌ ಕಾಮ್‌ ಡೊಮೈನ್ ಮೂಲಕ ಇ ಮೇಲ್ ಬಂದಿದೆ.
ಬಿ.ದಯಾನಂದ್, ನಗರ ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT