ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯಮಿ ಸುಲಿಗೆ: ಚಿನ್ನದ ವ್ಯಾಪಾರಿಗಳ ಬಂಧನ; ಚಿನ್ನದ ಗಟ್ಟಿ, ₹69 ಲಕ್ಷ ನಗದು ವಶ

306 ಗ್ರಾಂ ಚಿನ್ನದ ಗಟ್ಟಿ, ₹69 ಲಕ್ಷ ನಗದು ವಶ
Published : 27 ಸೆಪ್ಟೆಂಬರ್ 2024, 20:32 IST
Last Updated : 27 ಸೆಪ್ಟೆಂಬರ್ 2024, 20:32 IST
ಫಾಲೋ ಮಾಡಿ
Comments

ಬೆಂಗಳೂರು: ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಅಧಿಕಾರಿಗಳು ಶೋಧನೆಯ ನೆಪದಲ್ಲಿ ಉದ್ಯಮಿ ಕೇಶವ್‌ ತಕ್‌ ಅವರ ಕಂಪನಿ ಮೇಲೆ ದಾಳಿ ನಡೆಸಿ ಹಣ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಇಬ್ಬರು ಚಿನ್ನದ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಚಿನ್ನದ ವ್ಯಾಪಾರಿಗಳಿಂದ ನಗದು ಹಾಗೂ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಕೇಶವ್‌ ತಕ್‌ ಅವರ ವಹಿವಾಟಿನ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ, ಸುಲಿಗೆ ಸಂಚಿನಲ್ಲಿ ಭಾಗಿಯಾಗಿ, ಹಣದಲ್ಲಿ ಪಾಲು ಪಡೆದಿದ್ದ ಆರೋಪದಡಿ ಮುಕೇಶ್‌ ಜೈನ್‌ ಹಾಗೂ ಪ್ರಕಾಶ್‌ ಜೈನ್‌ ಎಂಬ ಚಿನ್ನದ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಪೊಲೀಸ್‌ ಕಮಿಷನರ್‌ ಬಿ.ದಯಾನಂದ, ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ರಾಜಸ್ಥಾನದವರು. ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿದ್ದಾರೆ. ಈ ಇಬ್ಬರೂ ಕೇಶವ್‌ ತಕ್‌ ಅವರನ್ನು ಪಾರು ಮಾಡುವ ನೆಪದಲ್ಲಿ ಹವಾಲಾ ಮೂಲಕ ₹1.1 ಕೋಟಿ ಪಡೆದಿದ್ದರು ಎಂದು ಮಾಹಿತಿ ನೀಡಿದರು.

ಜಿಎಸ್‌ಟಿ ಅಧಿಕಾರಿಗಳಿಂದ ₹57 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಸುಲಿಗೆ ಮಾಡಿದ್ದ ಹಣದಲ್ಲಿ ಚಿನ್ನದ ವ್ಯಾಪಾರಿ ಖರೀದಿಸಿದ್ದ 307 ಗ್ರಾಂ ಚಿನ್ನದ ಗಟ್ಟಿ ವಶ ಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಒಟ್ಟು ₹ 93 ಲಕ್ಷ ವಶಕ್ಕೆ ಪಡೆಯಲಾಗಿದೆ. ಆದರೆ, ಅಧಿಕಾರಿಗಳು ₹1.50 ಕೋಟಿ ಸುಲಿಗೆ ಮಾಡಿದ್ದರು ಎಂದು ಉದ್ಯಮಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಹವಾಲಾ ಮಾದರಿಯಲ್ಲಿ ಹಣ ವರ್ಗಾವಣೆ ಆಗಿರುವುದರ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಬಂಧಿತ ಅಧಿಕಾರಿಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳ‌ಪಡಿಸಿದಾಗ ವ್ಯಾಪಾರಿಗಳಿಬ್ಬರು ಕೇಶವ್‌ ತಕ್‌ ಅವರ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ನೀಡಿದ್ದರು ಎಂಬ ವಿಚಾರ ಗೊತ್ತಾಯಿತು. ಶಾಂತಿನಗರದಲ್ಲಿ ಮುಕೇಶ್‌ ಜೈನ್‌ ಅವರನ್ನು ಬಂಧಿಸಲಾಯಿತು. ಸುಲಿಗೆ ಮಾಡಿದ್ದ ಹಣದಲ್ಲಿ 306 ಗ್ರಾಂ ಚಿನ್ನದ ಗಟ್ಟಿ ಖರೀದಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡ. ಈತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ವ್ಯಾಪಾರಿ ಪ್ರಕಾಶ್ ಜೈನ್‌ರನ್ನು ಬಂಧಿಸಿ, ಅವರ ಬ್ಯಾಂಕ್ ಖಾತೆಯಲ್ಲಿರುವ ₹ 12.30 ಲಕ್ಷ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

. ಸಿಜಿಎಸ್‌ಟಿ ಅಧಿಕಾರಿಗಳ ಪರವಾಗಿ ಹವಾಲಾ ಮೂಲಕ ಪಡೆದಿದ್ದ ಹಣದಲ್ಲಿ ಚಿನ್ನದ ವ್ಯಾಪಾರಿಗಳು ₹ 50 ಲಕ್ಷ ಕಮಿಷನ್ ತೆಗೆದುಕೊಂಡಿದ್ದರು. ಉಳಿದ ಹಣವನ್ನು ಜಿಎಸ್‌ಟಿ ಅಧಿಕಾರಿಗಳಿಗೆ ತಲುಪಿಸಿದ್ದರು ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ: ಶೋಧದ ನೆಪದಲ್ಲಿ ಜೀವನ್ ಬಿಮಾನಗರದ ಉದ್ಯಮಿ ಕೇಶವ್ ತಕ್ ಕಂಪನಿ ಮೇಲೆ ದಾಳಿ ನಡೆಸಿ, ₹1.5 ಕೋಟಿ ಸುಲಿಗೆ ಮಾಡಿದ್ದ ಆರೋಪದಡಿ ಸಿಜಿಎಸ್​ಟಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಸೆ.10 ರಂದು ಸಿಸಿಬಿ ಬಂಧಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT