ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅದೃಷ್ಟದ ಚೊಂಬಿನ ಕಥೆ ಹೆಣೆದು ಉದ್ಯಮಿಗೆ ವಂಚನೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

Published : 13 ಸೆಪ್ಟೆಂಬರ್ 2024, 20:46 IST
Last Updated : 13 ಸೆಪ್ಟೆಂಬರ್ 2024, 20:46 IST
ಫಾಲೋ ಮಾಡಿ
Comments

ಬೆಂಗಳೂರು: ಉದ್ಯಮಿಯೊಬ್ಬರ ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡು ವಂಚಿಸಿದ್ದ ಆರೋಪದ ಅಡಿ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. 

ವಂಚನೆಗೆ ಒಳಗಾದ ಹೆಣ್ಣೂರು ಪ್ರಕೃತಿ ಲೇಔಟ್‌ನ ನಿವಾಸಿ ಕಾಂತರಾಜ್‌ ಅವರು ನೀಡಿದ ದೂರು ಆಧರಿಸಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಾಗರತ್ನಾ, ಹೊಳೆನರಸೀಪುರದ ರಾಮಚಂದ್ರ, ಬೆಂಗಳೂರಿನ ಸುಕುಮಾರನ್‌, ನಟೇಶ್‌ ಅಲಿಯಾಸ್‌ ವೆಂಕಟರಾಮನ್‌ ವಿರುದ್ಧ ನಂಬಿಕೆ ದ್ರೋಹ, ಅಪರಾಧಿಕ ಒಳಸಂಚು ಆರೋಪದ ಅಡಿ ಪ್ರಕರಣ ದಾಖಲಾಗಿದೆ.

ಕಚ್ಚಾ ತೈಲ ಹಾಗೂ ರಿಫೈನರಿ ಘಟಕ ತೆರೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುವುದಾಗಿ ನಂಬಿಸಿ ಬಳಿಕ ‘ರೈಸ್‌ ಪುಲ್ಲಿಂಗ್’ ಚೊಂಬು ವ್ಯವಹಾರದ ಕಥೆ ಹೆಣೆದು ಉದ್ಯಮಿಗೆ ವಂಚಿಸಲಾಗಿತ್ತು ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಕಾಂತರಾಜು ಅವರು ಕಚ್ಚಾ ತೈಲ ಹಾಗೂ ರಿಫೈನರಿ ಘಟಕ ತೆರೆಯಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದಿದ್ದರು. ಆದರೂ ಅನುಮತಿ ಸಿಕ್ಕಿರಲಿಲ್ಲ. ಬೇರೊಂದು ಮಾರ್ಗದ ಮೂಲಕ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದರು. ಆಗ ಕನಕಪುರದ ಮನು ಹಾಗೂ ರಾಜಣ್ಣ ಅವರ ಪರಿಚಯವಾಗಿತ್ತು. ಅವರು ನಾಗರತ್ನಾ ಹಾಗೂ ರಾಮಚಂದ್ರ ಅವರನ್ನು ಪರಿಚಯಿಸಿದ್ದರು. ಈ ವೇಳೆ ನಾಗರತ್ನಾ ಅವರು ಚನ್ನರಾಯಪಟ್ಟಣದಲ್ಲಿ ನನ್ನದು ಪೆಟ್ರೋಲ್‌ ಬಂಕ್‌ ಇದ್ದು, ನನಗೆ ರಾಜಕಾರಣಿಗಳ ಪರಿಚಯ ಇದೆ. ಘಟಕ ತೆರೆಯಲು ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿದ್ದರು. ಅಲ್ಲದೇ ಅನುಮತಿಗೆ ದೊಡ್ಡ ಮೊತ್ತದ ಹಣದ ಅಗತ್ಯವಿದೆ. ನಿಮ್ಮ ಬಳಿ ಅಷ್ಟು ಹಣ ಹೊಂದಿಸುವುದು ಅಸಾಧ್ಯ. ನಮ್ಮ ಬಳಿ ಐದು ‘ರೈಸ್‌ ಪುಲ್ಲಿಂಗ್‌’ ಚೊಂಬುಗಳಿದ್ದು, ಅವುಗಳ ಮಾರಾಟದಿಂದ ದೊಡ್ಡ ಮೊತ್ತದ ಹಣ ಸಿಗುತ್ತದೆ ಎಂಬುದಾಗಿ ನಂಬಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಹೋಟೆಲ್‌ವೊಂದಕ್ಕೆ ಕಾಂತರಾಜ್‌ ಅವರನ್ನು ನಟೇಶ್ ಹಾಗೂ ಸುಕುಮಾರ್ ಕರೆಸಿಕೊಂಡು ತಾವು ರೇಡಿಯಸ್‌ ಕಂಪನಿ ಸಿಇಒಗಳೆಂದು ಪರಿಚಯಿಸಿಕೊಂಡಿದ್ದರು. ಅಲ್ಲದೇ ರೈಸ್ ಪುಲ್ಲಿಂಗ್‌ ಚೊಂಬು ತೋರಿಸಿದ್ದರು. ರೈಸ್ ಪುಲ್ಲಿಂಗ್ ಚೊಂಬನ್ನು ನಾವೇ ಮಾರಾಟ ಮಾಡಿ ಹಣ ಕೊಡುತ್ತೇವೆ ಎಂದು ನಂಬಿಸಿದ್ದರು. ಅದುವರೆಗೂ ಸ್ಥಿರಾಸ್ತಿ ಬರೆದುಕೊಡುವಂತೆ ಹೇಳಿ ನಂಬಿಸಿದ್ದರು. ಕಾಂತರಾಜು ಅವರು ಆರೋಪಿಗಳ ಮಾತು ನಂಬಿ, ಕನಕಪುರ ತಾಲ್ಲೂಕಿನ ಅತ್ತಿಗುಪ್ಪೆ ಗ್ರಾಮದಲ್ಲಿ ತಮ್ಮ ಹೆಸರಿನಲ್ಲಿದ್ದ 4 ಎಕರೆ 18 ಗುಂಟೆ ಜಮೀನನ್ನು 2021ರ ಆಗಸ್ಟ್‌ 16ರಂದು ಸುಕುಮಾರ್‌ ಪತ್ನಿ ಸವಿತಾ ಹೆಸರಿಗೆ ವರ್ಗಾವಣೆ ಮಾಡಿದ್ದರು. ಆರೋಪಿಗಳು ಮೂರು ಚೆಕ್‌ ಮೂಲಕ ₹60 ಲಕ್ಷ ಕಾಂತರಾಜ್‌ ಅವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ನಂತರ, ಆಸ್ತಿ ವಾಪಸ್‌ ಬರೆದುಕೊಡುವುದಾಗಿ ಹೇಳಿ ಆ ಹಣವನ್ನು ವಾಪಸ್ ಪಡೆದಿದ್ದರು. ಅಲ್ಲದೇ ಮನೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ರೈಸ್‌ ಪುಲ್ಲಿಂಗ್‌ ಚೊಂಬು ಖರೀದಿಸಿರುವ ಕಂಪನಿಯಿಂದ ನಿಮ್ಮ ಮನೆಗೆ ₹100 ಕೋಟಿ ಹಾಗೂ ಬ್ಯಾಂಕ್‌ ಖಾತೆಗೆ ₹500 ಕೋಟಿ ಬರುತ್ತದೆ ಎಂದು ಹಂತ ಹಂತವಾಗಿ ರೈಸ್‌ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT