ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ವಿರೋಧಿಗಳನ್ನು ಕಿತ್ತು ಎಸೆಯಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಎರಡು ದಿನಗಳ ರಾಷ್ಟ್ರೀಯ ಏಕತಾ ಸಮಾವೇಶಕ್ಕೆ ಚಾಲನೆ
Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಿರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಶನಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಅಪಪ್ರಚಾರ ನಡೆಯುತ್ತಿದೆ. ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ’ ಎಂದು ಎಚ್ಚರಿಸಿದರು.

‘ಸಂವಿಧಾನ ದಲಿತರ ಉದ್ಧಾರಕ್ಕೆ ಮಾತ್ರವೇ ಇದೆ; ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸ್ಪಷ್ಟವಾಗಿ ಹೇಳುವುದರಿಂದ ಇದರ ವಿರುದ್ಧ ಇರುವವರು ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಸಮಾನತೆ, ಮಾನವ ಸಮಾಜ ನಿರ್ಮಾಣದ ಪರವಾಗಿರುವವರ ಕೈಯಲ್ಲಿ ಸಂವಿಧಾನವಿದ್ದರೆ ಅದು ಯಶಸ್ವಿಯಾಗುತ್ತದೆ. ಅದಕ್ಕೆ ವಿರುದ್ಧವಾಗಿದ್ದವರ ಕೈಯಲ್ಲಿದ್ದರೆ ಸಂವಿಧಾನಕ್ಕೆ ಉಳಿಗಾಲವಿಲ್ಲ’ ಎಂದು ಹೇಳಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಮಾತನಾಡಿ, ‘ಸಂವಿಧಾನ ಜಾರಿಯಾದ ಮೇಲೆ ದೇಶದಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ಆದರೂ, ದೇಶವು ಆತಂಕದಲ್ಲಿದೆ. ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಬಡತನ, ಅನಕ್ಷರತೆ, ನಿರುದ್ಯೋಗ, ಭಯೋತ್ಪಾದನೆ, ಮೂಲಭೂತವಾದ, ಅಪರಾಧೀಕರಣ, ಭ್ರಷ್ಟಾಚಾರ, ಸಾಂಸ್ಕೃತಿಕ ದಿವಾಳಿತನ ನಮ್ಮ ಮುಂದಿರುವ ಸವಾಲುಗಳು. ಈ ಸವಾಲುಗಳಿಗೆ ಸಂವಿಧಾನವೇ ಕಾರಣ ಎಂದು ಕೆಲವರು ದೂರುತ್ತಿದ್ದಾರೆ. ಜಂತರ್‌ ಮಂತರ್‌ನಲ್ಲಿ ಸಂವಿಧಾನದ ಪ್ರತಿಯನ್ನೇ ಸುಟ್ಟು ಹಾಕಿದ್ದರು. ಸಂವಿಧಾನದ ಅರಿವಿಲ್ಲದ ಕೆಲವರಷ್ಟೇ ಅಪವ್ಯಾಖ್ಯಾನ ಮಾಡುತ್ತಿದ್ದಾರೆ’ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ಸಂವಿಧಾನದ ಆಶಯಗಳ ಗುರಿಮುಟ್ಟಲು ಇನ್ನೂ ಪ್ರಯತ್ನ ಅಗತ್ಯವಿದೆ. ಜ.26ರಿಂದ ಆರಂಭವಾಗಿದ್ದ ಸಂವಿಧಾನ ಜಾಗೃತಿ ಜಾಥಾ ರಾಜ್ಯದ 5,600 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿದೆ’ ಎಂದು ವಿವರಿಸಿದರು.

‘ಎಲ್ಲರಿಗೂ ಆರ್ಥಿಕ ನ್ಯಾಯ ಸಿಕ್ಕಿಲ್ಲ. ಸಮಸಮಾಜ ನಿರ್ಮಾಣವಾಗಿಲ್ಲ. ಅಲ್ಪಸಂಖ್ಯಾತರು, ಕೃಷಿಕರು ಬದುಕಿಗಾಗಿ ಆಕಾಶ ನೋಡುವ ಸ್ಥಿತಿಯಿದೆ’ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣವನ್ನು ನೀಡದಿರುವುದೂ ಸಂವಿಧಾನ ವಿರೋಧಿ ಕೆಲಸ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು’ ಎಂದು ವಿಶ್ಲೇಷಿಸಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂವಿಧಾನ ಪೀಠಿಕೆ ಓದಿದರು.

ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದವರು ಸಂವಿಧಾನ ಪೀಠಿಕೆ ವಾಚನ ಮಾಡಿದರು. – ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದವರು ಸಂವಿಧಾನ ಪೀಠಿಕೆ ವಾಚನ ಮಾಡಿದರು. – ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌

ಪೋರನ ಸಂವಿಧಾನದ ಜ್ಞಾನ

ಸಮಾವೇಶದಲ್ಲಿ ಚಾಮರಾಜನಗರ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ 2ನೇ ತರಗತಿ ವಿದ್ಯಾರ್ಥಿ ತೇಜಸ್‌ ಚಕ್ರವರ್ತಿ ಸಂವಿಧಾನದ ಹಲವು ವಿಧಿಗಳು ಹಾಗೂ ಅವುಗಳ ವಿವರಣೆಯನ್ನು ನಿರರ್ಗಳವಾಗಿ ಹೇಳಿ ಗಮನ ಸೆಳೆದ. ಸುಮಾರು 10 ನಿಮಿಷಗಳ ಕಾಲ ಸಂವಿಧಾನ ಕುರಿತು ಮಾತನಾಡಿದ ತೇಜಸ್‌ನ ಜ್ಞಾನಕ್ಕೆ ಪ್ರೇಕ್ಷಕರು ತಲೆಬಾಗಿದರು. ನಿವೃತ್ತ ನ್ಯಾಯಮೂರ್ತಿಗಳು ಸಚಿವರು ಅಭಿನಂದಿಸಿದರು. ಬಳಿಕ ಬಾಲಕನಿಗೆ ಬಹುಮಾನ ನೀಡಲಾಯಿತು.

ಸಂವಿಧಾನ ರದ್ದುಪಡಿಸುತ್ತೇವೆ ಎಂದು ಹೇಳಿದವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು.
–ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ
ಸಂವಿಧಾನದ ಅಪವ್ಯಾಖ್ಯಾನ ಹಾಗೂ ವಿಧಿಗಳ ಅಪ್ರಸ್ತುತಗೊಳಿಸುವ ಕೆಲಸಗಳು ನಿಲ್ಲಬೇಕು. ಅಪಪ್ರಚಾರ ನಿಲ್ಲದಿದ್ದರೆ ಜನರೇ ಉತ್ತರ ಕೊಡಲಿದ್ದಾರೆ.
–ಎಚ್‌.ಎನ್‌.ನಾಗಮೋಹನದಾಸ್‌, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ
ಇಂದಿನ ರಾಜಕೀಯ ವ್ಯವಸ್ಥೆಯು ಧರ್ಮ ಹಾಗೂ ಜಾತಿಯನ್ನು ಮುಂದಿಟ್ಟುಕೊಂಡು ಸಮಾಜ ಒಡೆಯುವ ಕೆಲಸ ನಡೆಸುತ್ತಿದೆ.
–ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT