ಮಂಗಳವಾರ, ಸೆಪ್ಟೆಂಬರ್ 17, 2019
21 °C
ಬಿಬಿಎಂಪಿ ಸಹಕಾರ

ಗೋಡೆಯಲ್ಲಿ ವಿಜ್ಞಾನ ಜಾಗೃತಿ: ‘ಅಗ್ಲಿ ಇಂಡಿಯನ್‌’ ಸಂಘಟನೆಯ ಸದಸ್ಯರ ಕಾರ್ಯ

Published:
Updated:
Prajavani

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿನ ಗೋಡೆಗಳ ಮೇಲೆ ಸಿನಿಮಾ ಪೋಸ್ಟರ್‌ಗಳು, ಹೋರಾಟದ ಘೋಷವಾಕ್ಯಗಳು ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ, ಸಿ.ಎನ್.ಆರ್‌. ರಾವ್ ಅಂಡರ್‌ಪಾಸ್‌ನ ಗೋಡೆಗಳು ನಿಮಗೆ ವಿಭಿನ್ನ ಅನುಭವ ನೀಡಲಿವೆ. ರಸಾಯನ, ಭೌತ, ಬಾಹ್ಯಾಕಾಶ ವಿಜ್ಞಾನ ಪರಿಕಲ್ಪನೆಗಳ ಸಂಕೇತಗಳು, ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಕೊಡುಗೆಗಳನ್ನು ಬಿಂಬಿಸುವ ಚಿತ್ರಗಳು ನಿಮ್ಮನ್ನು ಸ್ವಾಗತಿಸಲಿವೆ. 

‘ದಿ ಅಗ್ಲಿ ಇಂಡಿಯನ್‌’ ಸಂಘಟನೆಯ ಕಾರ್ಯಕರ್ತರು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಅಂಡರ್‌ಪಾಸ್‌ನ ಎರಡೂ ಬದಿಯ ಗೋಡೆಯ ಮೇಲೆ ವಿಜ್ಞಾನ ಪರಿಕಲ್ಪನೆಯ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. 

ನಗರದ ಹತ್ತು ಅಂಡರ್‌ಪಾಸ್‌ಗಳನ್ನು ಅಂದಗೊಳಿಸುವ ಕಾರ್ಯಕ್ಕೆ ಬಿಬಿಎಂಪಿ ಜೊತೆಗೆ ಈ ಸಂಘಟನೆ ಕೈಜೋಡಿಸಿದೆ. ಮೇಖ್ರಿ ವೃತ್ತ, ವಿಂಡ್ಸರ್‌ ಮ್ಯಾನರ್, ಅರಮನೆ ರಸ್ತೆ, ಕದಿರೇನಹಳ್ಳಿ ಮತ್ತು ಜೆ.ಪಿ. ನಗರದ ಜಿ.ಆರ್. ವಿಶ್ವನಾಥ್‌ ಅಂಡರ್‌ಪಾಸ್‌ ಇವುಗಳಲ್ಲಿ ಪ್ರಮುಖವಾದವು. 

ಅಂಡರ್‌ಪಾಸ್‌ಗಳಿಗೆ ಬಣ್ಣ ಹಚ್ಚುವ ಕಾರ್ಯವನ್ನು ಬಿಬಿಎಂಪಿ ಈಗಾಗಲೇ ಪೂರ್ಣಗೊಳಿಸಿದ್ದು, ನೀಲಿ ಮತ್ತು ಬಿಳಿ ಬಣ್ಣಗಳ ಮೇಲೆ ಸಂಘಟನೆಯ ಕಾರ್ಯಕರ್ತರು ಚಿತ್ರ ಬಿಡಿಸಲಿದ್ದಾರೆ. ವಿಜ್ಞಾನದ ಬಗೆಗೆ ಆಸಕ್ತಿ ಹೊಂದಿರುವ ಸ್ಥಳೀಯರು ಕೂಡ ಈ ಕಾರ್ಯಕ್ಕೆ ಕೈಜೋಡಿಸಬಹುದಾಗಿದೆ. 

‘ಮಹಾನ್‌ ವಿಜ್ಞಾನಿಗಳು ಜಗತ್ತಿಗೆ ನೀಡಿರುವ ಕೊಡುಗೆಗಳ ಕುರಿತು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚನ್ನು ಗೋಡೆಗಳ ಮೇಲೆ ಬಿಡಿಸುತ್ತಿದ್ದೇವೆ’ ಎಂದು ಸಂಘಟನೆಯ ಕಾರ್ಯಕರ್ತರು ಹೇಳಿದರು.

‘ಸಿ.ಎನ್‌.ಆರ್‌. ರಾವ್‌ ಅಂಡರ್‌ಪಾಸ್‌ನಲ್ಲಿ ವಾಹನಗಳು ತುಂಬಾ ವೇಗವಾಗಿ ಸಂಚರಿಸುತ್ತವೆ. ದಟ್ಟಣೆ ಇರದ ಕಾರಣ ವೇಗ ಇನ್ನೂ ಹೆಚ್ಚಾಗಿರುತ್ತದೆ. ಚಿತ್ರಗಳನ್ನು ನೋಡಲು ಆಗುವುದೇ ಇಲ್ಲ. ಅಲ್ಲದೆ, ಈ ಅಂಡರ್‌ಪಾಸ್‌ನಲ್ಲಿ ಸಾರ್ವಜನಿಕರು ಕೂಡ ಓಡಾಡುವುದಿಲ್ಲ. ಗೋಡೆ ಹಾಳಾಗಬಾರದೆಂಬ ಉದ್ದೇಶಕ್ಕೆ ಚಿತ್ರಗಳನ್ನು ಬಿಡಿಸಬಹುದೇ ವಿನಾ ವಿಜ್ಞಾನ ಕುರಿತು ಅರಿವು ಮೂಡಿಸುವ ಉದ್ದೇಶ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಲಾರದು’ ಎಂದು ವಾಹನ ಸವಾರ ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು. 

Post Comments (+)