ಶುಕ್ರವಾರ, ಜುಲೈ 30, 2021
23 °C
ವೈದ್ಯರು, ಶುಶ್ರೂಷಕರ ಕೊರತೆ * ಕೊರೊನಾ ಸೋಂಕಿತರ ಪಡಿಪಾಟಲು

ಶವ ಸಾಗಿಸಿದ ಬೆಂಗಳೂರಿನ ಮಲ್ಲಸಂದ್ರ ವಾರ್ಡ್‌ ಸದಸ್ಯ ಎನ್. ಲೋಕೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ–ಮಲ್ಲಸಂದ್ರ ಪೈಪ್‌ಲೈನ್‌ ರಸ್ತೆಯಲ್ಲಿರುವ ಉದ್ಯಾನದಲ್ಲಿ ಸೋಮವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಪಾಲಿಕೆಯಿಂದ ಯಾರೂ ಆ ಶವವನ್ನು ಸಾಗಿಸಲು ಮುಂದೆ ಬಾರದಿದ್ದಾಗ, ಮಲ್ಲಸಂದ್ರ ವಾರ್ಡ್‌ ಸದಸ್ಯ ಎನ್. ಲೋಕೇಶ್‌ ಆಂಬುಲೆನ್ಸ್‌ವರೆಗೆ ಶವ ಸಾಗಿಸುವ ಮೂಲಕ ಮಾನವೀಯತೆ ಮೆರೆದರು. 

55 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಬೆಳಿಗ್ಗೆ 7.30ರ ವೇಳೆಗೆ ಉದ್ಯಾನದಲ್ಲಿ ಮೃತರಾಗಿದ್ದರು. ಸ್ಥಳೀಯರು ಬಿಬಿಎಂಪಿಗೆ ಕರೆ ಮಾಡಿ ಐದಾರು ತಾಸುಗಳಾದರೂ ಯಾರೂ ಬಂದಿರಲಿಲ್ಲ. ಕೊನೆಗೆ ಆಂಬುಲೆನ್ಸ್‌ ಬಂದರೂ ಅದರಲ್ಲಿ ಚಾಲಕ ಬಿಟ್ಟು ಬೇರೆ ಯಾರೂ ಇರಲಿಲ್ಲ. ಆಶಾ ಕಾರ್ಯಕರ್ತರಲ್ಲದೆ, ಆರೋಗ್ಯ ಕಾರ್ಯಕರ್ತರು, ಶುಶ್ರೂಷಕರು ಮಹಿಳೆಯರೇ ಆಗಿದ್ದರಿಂದ ಶವ ಸಾಗಿಸಲು ಸಾಧ್ಯವಾಗಲಿಲ್ಲ. ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರಬಹುದು ಎಂಬ ಕಾರಣದಿಂದ ಸ್ಥಳೀಯರು ಕೂಡ ಶವ ಮುಟ್ಟಲು ಮುಂದಾಗದಿದ್ದಾಗ, ಲೋಕೇಶ್‌ ಅವರೇ ಪಿಪಿಇ ಕಿಟ್‌ ಧರಿಸಿ, ಸುಮಾರು ಅರ್ಧ ಕಿ.ಮೀ.ವರೆಗೆ ಶವ ಸಾಗಿಸಿದ್ದಾರೆ. 

‘ನಮ್ಮ ವಾರ್ಡ್‌ನಲ್ಲಿ ಸೋಮವಾರವೂ ನಾಲ್ಕು ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಸ್ಥಳೀಯರು ಶವದ ಬಳಿ ಬಂದಿರಲಿಲ್ಲ. 12 ಗಂಟೆಯಾದರೂ ಯಾರೂ ಬಾರದಿದ್ದಾಗ  ಆಂಬುಲೆನ್ಸ್‌ ಚಾಲಕನೊಂದಿಗೆ ಸೇರಿ, ಪಿಪಿಇ ಕಿಟ್‌ ಧರಿಸಿ ಶವವನ್ನು ಸಾಗಿಸಿದೆ’ ಎಂದು ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ರೋಗಿ ಹಣೆಪಟ್ಟಿ ಬೇಡ’
ಕೊರೊನಾ ಸೋಂಕಿನಿಂದ ಗುಣಮುಖರಾದವರು, ಉಳಿದ ಸೋಂಕಿತರಿಗೆ ಸಲಹೆ–ಮಾರ್ಗದರ್ಶನ ನೀಡುವ ಜೊತೆಗೆ, ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. 

‘ಈಗ ದಿನಕ್ಕೆ ಸಾವಿರ ಪ್ರಕರಣಗಳು ಪತ್ತೆಯಾದರೆ, 500 ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ದಿನಕ್ಕೆ 500 ಪ್ರಕರಣಗಳು ಸೇರ್ಪಡೆಯಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ. ವೈದ್ಯರ, ಶುಶ್ರೂಷಕರ ಕೊರತೆ ಇದೆ. ಇಂತಹ ಸಂದರ್ಭದಲ್ಲಿ, ಕೋವಿಡ್‌–19ನಿಂದ ಗುಣಮುಖರಾದ 50 ವರ್ಷದ ಪತಿ–ಪತ್ನಿ ಇಬ್ಬರೂ ನಮ್ಮ ವಾರ್ಡ್‌ನಲ್ಲಿ ಸೋಂಕಿತರಿಗೆ ಸಲಹೆ, ಮಾರ್ಗದರ್ಶನ ನೀಡುತ್ತಿದ್ದಾರೆ. ಮನೆಯಲ್ಲಿದ್ದುಕೊಂಡೇ ಇಬ್ಬರು ಸೋಂಕಿತರು ಈಗ ಗುಣಮುಖರಾಗಿದ್ದಾರೆ’ ಎಂದು ಶಾಂತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರೇಣುಕಾಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೊರೊನಾ ಸೋಂಕಿತರನ್ನು ಕೀಳಾಗಿ ಕಾಣುವುದು ಅಥವಾ ಅವರಿಂದ ದೂರ ಓಡಿಹೋಗುವ ರೀತಿ ಮಾಡುವುದು ಬೇಡ ಎಂದು ನಿವಾಸಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಎಲ್ಲರಲ್ಲಿಯೂ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದೇವೆ’ ಎಂದರು. 

‘ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಿ, ಅವರನ್ನು ಹೋಂ ಕ್ವಾರಂಟೈನ್‌ ಮಾಡಲು ಸಹಕರಿಸಿ ಎಂದು ಬಿಬಿಎಂಪಿಯು, ಎಲ್ಲ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮನವಿ ಮಾಡಿದೆ. ನಾವು ಸಹಕಾರ ನೀಡುತ್ತಿದ್ದೇವೆ. ಆದರೆ, ಸಂಬಂಧಪಟ್ಟ ಮನೆ ಅಥವಾ ಕಟ್ಟಡವನ್ನು ಸ್ಯಾನಿಟೈಸ್‌ ಮಾಡಲು ಬಿಬಿಎಂಪಿ ಸಿಬ್ಬಂದಿ ನಾಲ್ಕು ದಿನ ಸಮಯ ತೆಗೆದುಕೊಳ್ಳುತ್ತಾರೆ’ ಎಂದು ಅವರು ದೂರಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು