ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ವಿರುದ್ಧ ಕೆಎಸ್‌ಪಿಸಿಬಿ ಸಮರ

ಹಣತೆ ಹಚ್ಚಿ ಪರಿಸರಸ್ನೇಹಿ ದೀಪಾವಳಿ ಹಬ್ಬ ಆಚರಿಸಲು ಕರೆ
Last Updated 11 ನವೆಂಬರ್ 2020, 20:31 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದಲ್ಲಿ ಉಂಟಾಗುವ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಪಟಾಕಿ ವಿರುದ್ಧ ಸಮರ ಸಾರಿದ್ದು, ಇದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಪರಿಸರಸ್ನೇಹಿ ದೀಪಾವಳಿ ಆಚರಣೆಯ ಅಭಿಯಾನ ಪ್ರಾರಂಭಿಸಿದೆ.

ಈ ಅಭಿಯಾನದ ಭಾಗವಾಗಿ ವಿವಿಧ ಕ್ಷೇತ್ರಗಳ ಗಣ್ಯರು, ಆರೋಗ್ಯ ತಜ್ಞರು ಹಾಗೂ ಧಾರ್ಮಿಕ ಮುಖಂಡರು ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕಾರಕ ಪಟಾಕಿಗಳನ್ನು ಬಳಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಣತೆಗಳನ್ನು ಬಳಸುವ ಮೂಲಕ ಈ ಬಾರಿ ದೀಪಾವಳಿಯನ್ನು ಆಚರಿಸಬೇಕು ಎಂದು ಮಂಡಳಿಯು ಕರೆ ನೀಡಿದೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ವಾಯುಮಾಲಿನ್ಯ ಹೊಸ ಸಾರ್ವಜನಿಕ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಧೂಮಪಾನವು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಆದರೆ, ಇತ್ತೀಚಿನ ಅಧ್ಯಯನಗಳಲ್ಲಿ ವಾಯುಮಾಲಿನ್ಯದಿಂದ ಕೂಡ ಹೃದಯಾಘಾತ ಸಂಭವಿಸುವ ಸಾಧ್ಯತೆಯಿದೆ ಎನ್ನುವುದು ದೃಢಪಟ್ಟಿದೆ. ಕೈಗಾರಿಕೆಗಳು ಹಾಗೂ ವಾಹನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯವಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಲಿದೆ. ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಸಾಂಪ್ರದಾಯಿಕ ದೀಪಗಳನ್ನು ಬೆಳಗುವ ಮೂಲಕ ಹಬ್ಬ
ಆಚರಿಸಬೇಕು’ ಎಂದು ತಿಳಿಸಿದ್ದಾರೆ.

ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ‘ದೀಪಾವಳಿ ಹಬ್ಬದ ಆಶಯವನ್ನು ಕೆಲವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಪಟಾಕಿ ಸಿಡಿಸುವ ಮೂಲಕ ಶಬ್ದ ಹಾಗೂ ವಾಯುಮಾಲಿನ್ಯವನ್ನು ಮಾಡಲಾಗುತ್ತಿದೆ. ಪಟಾಕಿ ಹೊರ ಸೂಸುವ ನೈಟ್ರಸ್ ಆಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್‌ನಿಂದಾಗಿ ವಾತಾವರಣದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಳವಾಗಲಿದೆ. ಕಣ್ಣು, ಕಿವಿಗೆ ಕೂಡ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಣ್ಣಿನ ಹಣತೆಯಲ್ಲಿ ದೀಪವನ್ನು ಹಚ್ಚುವ ಮೂಲಕ ಹಬ್ಬವನ್ನು ಆಚರಿಸಬೇಕು’ ಎಂದು ಹೇಳಿದ್ದಾರೆ.

ಕಣ್ಣಿಗೆ ಅಪಾಯ: ಮಿಂಟೊ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ‍‘ಪಟಾಕಿ ಹಚ್ಚಲೇಬಾರದು. ಪಟಾಕಿ ಸಿಡಿಸಿ, ಕಣ್ಣಿಗೆ ಹಾನಿಯಾದರೆ ಸ್ವಚ್ಛವಾದ ಕರವಸ್ತ್ರದಲ್ಲಿ ಕಣ್ಣನ್ನು ಮುಚ್ಚಿಕೊಳ್ಳಬೇಕು. ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದು
ಕೊಳ್ಳಬೇಕು. ಕಣ್ಣಿನ ದೃಷ್ಟಿ ಹೋದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ’ ಎಂದು ಕಿವಿಮಾತು ಹೇಳಿದ್ದಾರೆ.

ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು, ‘ಕೋವಿಡ್ ಸಮಯದಲ್ಲಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಪರೀಕ್ಷೆ ಮಾಡಲಾಗುತ್ತಿದೆ. ಅಂದರೇ, ನಾವು ಸೇವಿಸುವ ಗಾಳಿಯೇ ಜೀವಾಳ ಎನ್ನುವದನ್ನು ಅರ್ಥಮಾಡಿಕೊಳ್ಳಬೇಕು. ಗಣೇಶ ಹಬ್ಬದ ಸಂದಭ್ರದಲ್ಲಿ ಹಮ್ಮಿಕೊಂಡಿದ್ದ ಅರಿಶಿನ ಗಣಪ ಅಭಿಯಾನವು ಯಶಸ್ವಿಯಾಗಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಬ್ದ ಹಾಗೂ ವಾಯುಮಾಲಿನ್ಯದ ಬಗ್ಗೆ ನಿಗಾ ಇಡುತ್ತಿದ್ದೇವೆ’ ಎಂದು ತಿಳಿಸಿದರು.

‘ಹೊಸ ಬಟ್ಟೆ, ಒಳ್ಳೆಯ ಊಟ’

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ, ‘ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಬೇಕು. ಹಾಗಾಗಿ ಈ ವರ್ಷದ ದೀಪಾವಳಿಯಲ್ಲಿ ಪಟಾಕಿ ಸುಡುವುದನ್ನು ಕಡಿಮೆ ಮಾಡಬೇಕು. ನಿರಂತರವಾಗಿ ಜಾಗೃತಿ ಮೂಡಿಸಿದ ಪರಿಣಾಮ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಧೂಮಪಾನ ಮಾಡುವುದು ಕಡಿಮೆಯಾಗಿದೆ. ಹೊಸ ಬಟ್ಟೆ ತೊಟ್ಟು, ಒಳ್ಳೆಯ ಊಟ ಮಾಡುವ ಮೂಲಕ ಹಬ್ಬವನ್ನು ಆಚರಿಸಬೇಕು’ ಎಂದು ಹೇಳಿದ್ದಾರೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ‘ಪಟಾಕಿಯಿಂದ ಉಂಟಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯದಿಂದ ಮಕ್ಕಳು, ವೃದ್ಧರು, ರೋಗಿಗಳು ಹಾಗೂ ಪ್ರಾಣಿ–ಪಕ್ಷಿಗಳಿಗೆ ಹಾನಿಯಾಗಲಿದೆ. ಪರಿಸರವೂ ಹಾಳಾಗುತ್ತದೆ. ಹಾಗಾಗಿ ಪಟಾಕಿ ಸಿಡಿಸುವುದನ್ನು ಕೈಬಿಡಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT