ಬೆಂಗಳೂರು: ರಾಜ್ಯ ಸರ್ಕಾರವು ದೇವನಹಳ್ಳಿ ಸುತ್ತಮುತ್ತ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಮೂಲಕ ರೈತಪರ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ದೆಹಲಿಯಲ್ಲಿ ಮಾಡಿದ್ದ ಹೋರಾಟದ ಮಾದರಿಯಲ್ಲಿ ಇಲ್ಲಿಯೂ ಚಳವಳಿ ಕೈಗೊಳ್ಳಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾದ (ಎಸ್ಕೆಎಂ) ರಾಷ್ಟ್ರೀಯ ನಾಯಕರು ಎಚ್ಚರಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, ‘ಬಹಳಷ್ಟು ಚಳವಳಿಗಳಲ್ಲಿ ರೈತರು ಸರ್ಕಾರದ ಜೊತೆಗೆ ಮಾತುಕತೆಗೆ ಕೂರುತ್ತಾರೆ. ನಮಗೆ ಮಾತುಕತೆಯೇ ಬೇಕಾಗಿಲ್ಲ ಎಂದು ರೈತರೇ ಪಟ್ಟುಹಿಡಿದಿರುವ ವಿಶಿಷ್ಟ ಚಳವಳಿ ಇದು. ಜಮೀನು ಕೊಡುವುದಿಲ್ಲ ಎಂದು ರೈತರೇ ಹೇಳಿದ ಮೇಲೆ ಜಮೀನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ’ ಎಂದು ತಿಳಿಸಿದರು.

‘ಎಸ್ಕೆಎಂ ಕಾರ್ಯಸೂಚಿಯಲ್ಲಿ ಈ ಹೋರಾಟದ ವಿಚಾರವಿದೆ. ಮುಖ್ಯಮಂತ್ರಿ ಕರೆದಿರುವ ಸಭೆಯಲ್ಲಿ ರೈತಪರ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಇಲ್ಲಿನ ರೈತರು, ಸಂಘಟನೆಗಳೊಂದಿಗೆ ನಾವಿರುತ್ತೇವೆ’ ಎಂದರು.

1200 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟ ಮಾದರಿಯಾದುದು. ಜುಲೈ 9ರಂದು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಕರೆಯಂತೆ ನಡೆಯುವ ಭಾರತ ಮುಷ್ಕರಕ್ಕೆ ಎಸ್ಕೆಎಂ ಬೆಂಬಲ ನೀಡಲಿದೆ. ಭೂಸ್ವಾಧೀನದ ವಿರುದ್ಧವೂ ಹೋರಾಟ ನಡೆಯಲಿದೆ ಎಂದು ದರ್ಶನ್ ಪಾಲ್ ತಿಳಿಸಿದರು.

ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾಗ ಅವರ ಮೇಲೆ ದಬ್ಬಾಳಿಕೆ ನಡೆಸಿದ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಕರಾಳ ಕಾಯ್ದೆಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನದೇ ಪಕ್ಷ ಅಧಿಕಾರ ಇರುವ ಕರ್ನಾಟಕದಲ್ಲಿ ರೈತರಿಗೆ ನ್ಯಾಯದ ಖಾತ್ರಿ ನೀಡಬೇಕು ಎಂದು ಸುನಿಲಮ್ ಆಗ್ರಹಿಸಿದರು.

ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸುವುದಾಗಿ ಭರವಸೆ ನೀಡಿ ರೈತರ ಮತ ಪಡೆದು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ. ಚಳವಳಿಯಿಂದಲೇ ಬಂದಿರುವ ಸಿದ್ದರಾಮಯ್ಯ ಅವರು ಮಾತು ಉಳಿಸಿಕೊಳ್ಳಬೇಕು ಎಂದು ಯುಧ್ವೀರ್ಸಿಂಗ್ ಒತ್ತಾಯಿಸಿದರು.

ಕೇಂದ್ರದಲ್ಲಿ ರೈತ ಹೋರಾಟಗಾರರನ್ನು ಪ್ರಧಾನಮಂತ್ರಿ ಕಡೆಗಣಿಸಿ ಮೂರು ಕರಾಳ ಕಾಯ್ದೆಗಳನ್ನು ಜಾರಿಗೆ ತಂದರು. ರೈತರು ಬಿಸಿಲು, ಮಳೆ, ಚಳಿ ಇದ್ದರೂ, ಪ್ರಾಣಗಳನ್ನು ಕಳೆದುಕೊಂಡರೂ 380 ದಿನ ಹೋರಾಟ ಮಾಡಿ ಸರ್ಕಾರವನ್ನು ಮಣಿಸಿದ್ದರು. ದೇವನಹಳ್ಳಿಯಲ್ಲಿಯೂ ಅಂಥದ್ದೇ ಹೋರಾಟ ಮಾಡಲಾಗುವುದು ಎಂದು ವಿಜು ಕೃಷ್ಣನ್ ತಿಳಿಸಿದರು.

ಸಂಯುಕ್ತ ಹೋರಾಟ ಕರ್ನಾಟಕದ ಪ್ರತಿನಿಧಿಗಳಾದ ಎಚ್.ಎಂ. ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಟಿ. ಯಶವಂತ್, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಉಪಸ್ಥಿತರಿದ್ದರು.

ರವಿಕುಮಾರ್ ಈಚಲಮರ ಬರೆದಿರುವ ದೇವನಹಳ್ಳಿಯ ರೈತ ಹೋರಾಟದ ಪರಿಚಯ ನೀಡುವ ʼಪ್ರಾಣ ಹೋದರೂ ಭೂಮಿ ಕೊಡೆವುʼ ಕಿರುಪುಸ್ತಕ ಬಿಡುಗಡೆ ಮಾಡಲಾಯಿತು.

ರೈತರಿಗೆ ಸೂಕ್ತ ಪರಿಹಾರ ಸಿಗಬೇಕು: ಎಂ.ಬಿ. ಪಾಟೀಲ

‘ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ 10 ಗ್ರಾಮಗಳ ವ್ಯಾಪ್ತಿಗೆ ಸೇರಿರುವ 1282 ಎಕರೆ ಭೂಮಿ ಅಗತ್ಯವಿದೆ. ಆದರೆ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಡುತ್ತಿದ್ದಾರೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೈಗಾರಿಕೆಗಳಿಗೆ ಜಮೀನು ಬೇಕಾಗುತ್ತದೆ. ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಹೊಸ ಕಾಯ್ದೆಯನ್ವಯ ಸೂಕ್ತ ಪರಿಹಾರ ನೀಡಲಾಗುವುದು’ ಎಂದರು.

‘ಕೈಗಾರಿಕಾ ರಂಗದಲ್ಲಿ ತಮಿಳುನಾಡು ಗುಜರಾತ್ ಒಡಿಶಾ ಅಸ್ಸಾಂ ಮತ್ತಿತರ ರಾಜ್ಯಗಳಿಂದ ನಮಗೆ ತೀವ್ರ ಸ್ಪರ್ಧೆಯಿದೆ. ಅಲ್ಲೆಲ್ಲ ಉದ್ಯಮಿಗಳಿಗೆ ಏನು ಸೌಲಭ್ಯ ಕೊಡಲಾಗುತ್ತಿದೆ ಕೈಗಾರಿಕಾ ನೀತಿಗಳು ಹೇಗಿವೆ ಎನ್ನುವುದರ ಅರಿವು ನನಗಿದೆ. ಕೈಗಾರಿಕೆ ಮತ್ತು ಕೃಷಿ ಎರಡೂ ಮುಖ್ಯವಾಗಿದ್ದು ಸರಿದೂಗಿಸಿಕೊಂಡು ಹೋಗುವ ಕೆಲಸ ಅಗತ್ಯ’ ಎಂದು ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ಮೇಧಾ ಪಾಟ್ಕರ್ ಪತ್ರ

ದೇವನಹಳ್ಳಿಯಲ್ಲಿ ಹಿಂದೆ 6000 ಎಕರೆ ಭೂಮಿಯನ್ನು ಕಳೆದುಕೊಂಡವರು ಇಂದಿಗೂ ನರಕಯಾತನೆ ಅನುಭವಿಸುತ್ತಿದ್ದಾರೆ. ಅನೇಕರಿಗೆ ಪರಿಹಾರ ಅಥವಾ ಪುನರ್ವಸತಿ ಪಡೆಯಲು ಸಾಧ್ಯವಾಗಿಲ್ಲ. ಮತ್ತೆ ದೇವನಹಳ್ಳಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ನಿಮ್ಮ ನೇತೃತ್ವದ ಸರ್ಕಾರವು ಪ್ರಜಾಪ್ರಭುತ್ವ ಮಾದರಿಯನ್ನು ಬದಿಗೆ ಸರಿಸಿ ಈ ರೀತಿ ದಮನಕಾರಿ ನೀತಿ ಅಳವಡಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಿಮ್ಮ ಸಂಪುಟದ ಸಚಿವರನ್ನು ಮನವೊಲಿಸಿ ರೈತರ ಪರ ನಿರ್ಧಾರ ಕೈಗೊಳ್ಳಿ ಎಂದು ಸುದೀರ್ಘ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ.

ಸಿ.ಎಂ ನೇತೃತ್ವದಲ್ಲಿ ಸಭೆ ಇಂದು

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಕುರಿತು ರೈತರು ಮತ್ತು ಹೋರಾಟಗಾರರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜುಲೈ 4) ಬೆಳಿಗ್ಗೆ 11.30ಕ್ಕೆ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಈ ಸಭೆ ನಡೆಯಲಿದೆ.

ಈ ಸಭೆಗೂ ಪೂರ್ವಭಾವಿಯಾಗಿ ರೈತರ ಹೋರಾಟ ಮತ್ತು ಬೇಡಿಕೆಗಳ ಕುರಿತಂತೆ ತಮ್ಮ ನಿವಾಸ ‘ಕಾವೇರಿ’ಯಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಜೊತೆ ಗುರುವಾರ ಸಂಜೆ ಮುಖ್ಯಮಂತ್ರಿ ಸಭೆ ನಡೆಸಿದರು. ಈ ಸಭೆಯಲ್ಲಿ ಸಾಧಕ– ಬಾಧಕಗಳ ಬಗ್ಗೆ ಚರ್ಚೆ ನಡೆಯಿತು. ಆದರೆ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ ಎಂದು ಗೊತ್ತಾಗಿದೆ.

ರೈತ ಹೋರಾಟಗಾರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಮುಖ್ಯಮಂತ್ರಿ 10 ದಿನಗಳ ಸಮಯಾವಕಾಶ ಕೋರಿದ್ದಾರೆ. ಅಲ್ಲದೆ ಸಭೆಯಲ್ಲಿ ರೈತರ ಪರವಾಗಿ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಕಾನೂನು ಸಚಿವ ಎಚ್.ಕೆ. ಪಾಟೀಲ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.