ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನ: ಅಂತಿಮ ದಿನ ಕಿಕ್ಕಿರಿದ ಜನ

2,99,176 ಜನರ ವೀಕ್ಷಣೆ, ₹90.50 ಲಕ್ಷ ಸಂಗ್ರಹ
Last Updated 15 ಆಗಸ್ಟ್ 2022, 22:04 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯೋತ್ಸವದ ನಿಮಿತ್ತ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವನ್ನು ಅಂತಿಮ ದಿನವಾದ ಸೋಮವಾರ 2,99,176 ಜನ ವೀಕ್ಷಿಸಿದರು. ₹90.50 ಲಕ್ಷ ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ ಮಾಹಿತಿ ನೀಡಿದರು.

ಶಾಲೆ–ಕಾಲೇಜು, ಕಚೇರಿಗಳಿಗೆ ರಜೆ ಇದ್ದಿದ್ದರಿಂದ ಬೆಳಿಗ್ಗೆಯಿಂದಲೇ ಸಾರ್ವಜನಿಕರು ತಂಡೋಪತಂಡವಾಗಿ ಬಂದರು.ಸಂಜೆ ವೇಳೆ ಎತ್ತ ನೋಡಿದರೂ ಜನ ಜಾತ್ರೆ. ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನಸಂದಣಿ ಹೆಚ್ಚಿತ್ತು. ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉದ್ಯಾನದಲ್ಲಿ ಎಲ್ಲಿ ನೋಡಿದರೂ ತ್ರಿವರ್ಣ ಧ್ವಜಗಳೇ ಕಾಣುತ್ತಿದ್ದವು. ವಿದ್ಯಾರ್ಥಿಗಳು, ಯುವಕರು ‘ಭಾರತ್‌ ಮಾತಾ ಕೀ ಜೈ, ಒಂದೇ ಮಾತರಂ’ ಎಂಬ ಜಯಘೋಷ ಕೂಗುತ್ತಿದ್ದರು.

ಲಾಲ್‌ಬಾಗ್ ಮುಖ್ಯ ಗೇಟಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ, ಬೀದಿ ವ್ಯಾಪಾರಿಗಳ ಹಾವಳಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್‌ ಖರೀದಿಗೆ ಪ್ರಯಾಣಿಕರು ಹರಸಾಹಸ ಪಡುತ್ತಿದ್ದರು.

‘ಕಂಡು ಕೇಳರಿಯದಷ್ಟು ಜನಸಾಗರ’
‘ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಹಿಂದೆಂದೂ ಕಂಡು ಕೇಳರಿಯದಷ್ಟು ಜನರು ಭೇಟಿ ನೀಡಿದ್ದರು’ ಎಂದು ಲಾಲ್‌ಬಾಗ್‌ ಉದ್ಯಾನದ ಉಪನಿರ್ದೇಶಕಿ ಕುಸುಮಾ ಹೇಳಿದರು.

‘ನೂಕು ನುಗ್ಗುಲಿನಲ್ಲಿ ಕಿಲೋ ಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗಾಜಿನ ಮನೆಯ ಒಳಗೆ ಹೊಕ್ಕು ಪ್ರದರ್ಶನ ನೋಡಿಯೇ ಹೋಗಬೇಕೆಂಬ ಹಟ ಪ್ರತಿಯೊಬ್ಬರಲ್ಲಿ ಸಾಮಾನ್ಯವಾಗಿತ್ತು. ಆಸೆ, ಕಾತುರ, ಉತ್ಸುಕತೆ ಪ್ರತಿಯೊಬ್ಬರಲ್ಲೂ ಎದ್ದು ಕಾಣುತ್ತಿತ್ತು. ಇದು ಡಾ. ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರ ಮೇಲಿರುವ ಜನರ ಅಭಿಮಾನ ಮತ್ತು ಪ್ರೀತಿಗೆ ಸಾಕ್ಷಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT