ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು ಧಗೆ: ವ್ಯಾಪಾರಕ್ಕೆ ತಟ್ಟಿದ ಬಿಸಿ- ಶೇ 50–70 ವಹಿವಾಟು ಕುಸಿತ

Published 5 ಏಪ್ರಿಲ್ 2024, 19:44 IST
Last Updated 5 ಏಪ್ರಿಲ್ 2024, 19:44 IST
ಅಕ್ಷರ ಗಾತ್ರ

ಬೆಂಗಳೂರು: ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಧಗೆ. ಮನೆಯಿಂದ ಹೊರಗೆ ಬಾರದ ಜನ. ಗ್ರಾಹಕರು ಇಲ್ಲದೇ ಭಣಗುಡುತ್ತಿರುವ ಮಾರುಕಟ್ಟೆಗಳು. ವ್ಯಾಪಾರ ತಗ್ಗಿದ್ದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಮಳಿಗೆಗಳ ಮಾಲೀಕರು...

ನಗರದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಇದರಿಂದಾಗಿ ವ್ಯಾಪಾರ–ವಹಿವಾಟು ಶೇ 50 ರಿಂದ ಶೇ 70ರಷ್ಟು ಕುಸಿದಿದ್ದು, ವ್ಯಾಪಾರಿಗಳು ಗ್ರಾಹಕರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯಗಳು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿವೆ.

ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್ ರಸ್ತೆ, ಅವೆನ್ಯೂ ರಸ್ತೆ, ನಗರ್ತಪೇಟೆ, ಎಸ್‌.ಪಿ. ರಸ್ತೆ, ಜಯನಗರ, ಮಲ್ಲೇಶ್ವರ, ಗಾಂಧಿನಗರ, ಮೆಜೆಸ್ಟಿಕ್, ಕೋರಮಂಗಲ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಸಾಮಾನ್ಯ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಇದೀಗ ಬಿಸಿಲಿನ ಧಗೆ ಇರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾರುಕಟ್ಟೆಗಳಲ್ಲಿ ಗ್ರಾಹಕರ ಸಂಖ್ಯೆ ಕ್ಷೀಣಿಸಿದೆ. ಸಂಜೆ 6 ಗಂಟೆಯ ನಂತರ ಕೆಲವು ಗ್ರಾಹಕರು ಮಳಿಗೆಗಳಿಗೆ ಬರುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ವ್ಯಾಪಾರವಾಗುತ್ತಿಲ್ಲವೆಂದು ವ್ಯಾಪಾರಿಗಳು ಹೇಳಿದರು.

ಬಟ್ಟೆ ಅಂಗಡಿ, ಆಭರಣ ಮಳಿಗೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಅಲಂಕಾರಿಕ ವಸ್ತುಗಳು ಹಾಗೂ ಇತರೆ ಮಳಿಗೆಗಳಿಗೆ ಗ್ರಾಹಕರು ಭೇಟಿ ನೀಡುವ ಪ್ರಮಾಣ ಶೇ 90ರಷ್ಟು ಕಡಿಮಯಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿರುವ ಹೋಟೆಲ್‌, ಐಸ್‌ಕ್ರಿಮ್, ಜ್ಯೂಸ್ ಹಾಗೂ ತಂಪು ಪಾನೀಯ ಮಳಿಗೆಗಳಲ್ಲಿ ತಕ್ಕಮಟ್ಟಿಗೆ ವ್ಯಾಪಾರವಿದೆ.

‘ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಧಗೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಹಕರೇ ಕಾಣುತ್ತಿಲ್ಲ. ಗ್ರಾಹಕರು ಬರದಿರುವುದರಿಂದ, ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ’ ಎಂದು ಅವೆನ್ಯೂ ರಸ್ತೆಯ ವ್ಯಾಪಾರಿಗಳ ಒಕ್ಕೂಟದ ಉಪಾಧ್ಯಕ್ಷ ಕಿಶೋರ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವೆನ್ಯೂ ರಸ್ತೆ, ಚಿಕ್ಕಪೇಟೆ ಹಾಗೂ ಸುತ್ತಮುತ್ತ ಮಾರುಕಟ್ಟೆಗಳು ಹೆಚ್ಚಿವೆ. ಮಕ್ಕಳು, ವೃದ್ಧರು ಸಮೇತ ಮನೆ ಮಂದಿಯೆಲ್ಲ ಮಾರುಕಟ್ಟೆಗೆ ಬರುತ್ತಾರೆ. ಆದರೆ, ಬಿಸಿಲು ಇರುವುದರಿಂದ ಗ್ರಾಹಕರು ಕುಟುಂಬ ಸಮೇತ ಮಾರುಕಟ್ಟೆಯತ್ತ ಬರಲು ಮನಸ್ಸು ಮಾಡುತ್ತಿಲ್ಲ. ನಮ್ಮ ವ್ಯಾಪಾರ ಶೇ 70ರಷ್ಟು ಕುಸಿತವಾಗಿದೆ’ ಎಂದು ಹೇಳಿದರು.

ಹೊಸ ಬಟ್ಟೆ ಬಂದರೂ ಗ್ರಾಹಕರಿಲ್ಲ: ಯುಗಾದಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹೊಸ ಬಟ್ಟೆ ಹಾಗೂ ಇತರೆ ವಸ್ತುಗಳ ಖರೀದಿ ಜೋರಾಗುವ ಸಮಯವಿದು. ಆದರೆ, ಬಿಸಿಲಿನ ಧಗೆ ಹಬ್ಬದ ಖರೀದಿ ಮೇಲೂ ಪರಿಣಾಮ ಬೀರಿದೆ. ಚಿಕ್ಕಪೇಟೆ, ಶ್ರೀರಾಮಪುರದ ರಾಮಚಂದ್ರಾಪುರ, ಮಲ್ಲೇಶ್ವರ ಹಾಗೂ ಸುತ್ತಮುತ್ತಲಿನ ಬಟ್ಟೆ ಅಂಗಡಿಗಳಲ್ಲಿಯೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿದೆ.

‘ಹೊಸ ಶೈಲಿ ಹಾಗೂ ತರಹೇವಾರಿ ವಿನ್ಯಾಸದ ಬಟ್ಟೆಗಳು ಮಾರುಕಟ್ಟೆಗೆ ಬಂದಿವೆ. ಬೆಲೆಯಲ್ಲೂ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಗ್ರಾಹಕರು ಮಾತ್ರ ಅಂಗಡಿಗೆ ಬರುತ್ತಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದರೂ ಐವರು ಗ್ರಾಹಕರು ಬಂದರೆ ಹೆಚ್ಚು’ ಎಂದು ರಾಮಚಂದ್ರಾಪುರದ ಬಟ್ಟೆ ವ್ಯಾಪಾರಿ ಮದನ್ ಹೇಳಿದರು.

‘ಬಡವರು ಹಾಗೂ ಮಧ್ಯಮ ವರ್ಗದ ಜನರು ಬಟ್ಟೆ ಖರೀದಿಸಲು ಹೆಚ್ಚಾಗಿ ರಾಮಚಂದ್ರಾಪುರಕ್ಕೆ ಬರುತ್ತಾರೆ. ಆದರೆ, ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಅಂದುಕೊಂಡಷ್ಟು ವ್ಯಾಪಾರ ಆಗುತ್ತಿಲ್ಲ. ಮಳಿಗೆಗೆ ಬಾಡಿಗೆ ನೀಡುವಷ್ಟು ಹಣ ಸಹ ಬರುತ್ತಿಲ್ಲ’ ಎಂದು ತಿಳಿಸಿದರು.

ವ್ಯಾಪಾರಕ್ಕೆ ಹೊಡೆತ ಕೊಟ್ಟ ಚುನಾವಣೆ: ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ₹ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ದಾಖಲೆ ಇಲ್ಲದೇ ಕೊಂಡೊಯ್ಯದಂತೆ ಚುನಾವಣೆ ಆಯೋಗ ಮಿತಿ ಹೇರಿದೆ. ಇದರಿಂದಾಗಿಯೂ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ.

‘ಯುಗಾದಿ ಹಬ್ಬವಿರುವುದರಿಂದ ಮನೆ ಮಂದಿಯೆಲ್ಲ ಸಾಮೂಹಿಕವಾಗಿ ಬಟ್ಟೆ ಹಾಗೂ ಚಿನ್ನಾಭರಣ ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಬಹುತೇಕರು ನಗದು ತರುತ್ತಾರೆ. ಚುನಾವಣೆ ಇರುವುದರಿಂದ, ಅಧಿಕಾರಿಗಳು ನಗದು ಜಪ್ತಿ ಮಾಡಬಹುದು ? ನಾನಾ ಪ್ರಶ್ನೆಗಳನ್ನು ಕೇಳಿ ಕಿರಿಕಿರಿಯನ್ನುಂಟು ಮಾಡಬಹುದು ? ಎಂಬ ಕಾರಣಕ್ಕೆ ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ಬಿವಿಕೆ ಅಯ್ಯಂಗಾರ್ ರಸ್ತೆಯ ಚಿನ್ನಾಭರಣ ವ್ಯಾಪಾರಿ ಚರಣ್‌ ಹೇಳಿದರು.

ಅವೆನ್ಯೂ ರಸ್ತೆಯ ವ್ಯಾಪಾರಿಗಳ ಒಕ್ಕೂಟದ ಉಪಾಧ್ಯಕ್ಷ ಕಿಶೋರ್ ಕುಮಾರ್, ‘ಬಿಸಿಲು ಜೊತೆಯಲ್ಲಿ ಚುನಾವಣೆಯೂ ನಮ್ಮ ವ್ಯಾಪಾರಕ್ಕೆ ಹೊಡೆತ ನೀಡಿದೆ. ನಗದು ಮಿತಿ ಇರುವುದರಿಂದ ಮಾರುಕಟ್ಟೆಗೆ ಬರಲು ಜನರು ಹೆದರುತ್ತಿದ್ದಾರೆ’ ಎಂದರು.

ಬೀದಿ ಬದಿ ವ್ಯಾಪಾರಕ್ಕೂ ಬಿಸಿ: ನಗರದಲ್ಲಿ ಬೀದಿಬದಿ ವ್ಯಾಪಾರಕ್ಕೂ ಧಗೆಯ ಬಿಸಿ ತಟ್ಟಿದೆ. ದಿನದ ದುಡಿಮೆ ನಂಬಿ ಬದುಕುತ್ತಿರುವ ಬೀದಿಬದಿ ವ್ಯಾಪಾರಿಗಳು ಬಿಸಿಲಿನಲ್ಲಿ ಎಂದಿನಂತೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಗ್ರಾಹಕರು ಬರುತ್ತಿಲ್ಲ. ಇದರಿಂದಾಗಿ ದುಡಿಮೆಯೂ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ವಸತಿ ಪ್ರದೇಶ: ತಂಪು ಪಾನೀಯಕ್ಕೆ ಬೇಡಿಕೆ’

ನಗರದ ವಸತಿ ಪ್ರದೇಶಗಳಲ್ಲಿರುವ ಐಸ್‌ಕ್ರಿಮ್ ಜ್ಯೂಸ್ ಹಾಗೂ ತಂಪು ಪಾನೀಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿದೆ. ತಂಪು ಪಾನೀಯಗಳು ಎಳನೀರು ಕಲ್ಲಂಗಡಿ ಕರಬೂಜ ಹಾಗೂ ಇತರೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ‘ಬಿಸಿಲು ಹೆಚ್ಚಿರುವುದರಿಂದ ತಂಪು ಪದಾರ್ಥಗಳನ್ನು ಸೇವಿಸಲು ಜನರು ಇಷ್ಟಪಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಉತ್ತಮ ವ್ಯಾಪಾರ ಆಗುತ್ತಿದೆ. ಐಸ್‌ಕ್ರಿಮ್ ಹಾಗೂ ತಂಪು ಪಾನೀಯಗಳು ಹೆಚ್ಚು ಮಾರಾಟವಾಗುತ್ತಿವೆ’ ಎಂದು ನ್ಯೂ ಬಿಇಎಲ್ ರಸ್ತೆಯಲ್ಲಿರುವ ಮಳಿಗೆ ಮಾಲೀಕ ಮುನಿರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT