ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಸಂಚಾರ ಸದಾ ಕಿರಿಕಿರಿ: ದಂಡದ ಮೊತ್ತ ಹೆಚ್ಚಳ; ಭ್ರಷ್ಟಾಚಾರ ನಿಚ್ಚಳ

ಪೊಲೀಸರ ‘ಕೈ ಬಿಸಿ’ ಮಾಡಿದರೆ ವಾಹನ ಬಿಡುಗಡೆ l ಟೋಯಿಂಗ್ ಸಿಬ್ಬಂದಿಯೇ ಮಧ್ಯವರ್ತಿಗಳು
Last Updated 8 ಆಗಸ್ಟ್ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆ ದಂಡದ ಮೊತ್ತವನ್ನು 2019ರ ಸೆಪ್ಟೆಂಬರ್‌ನಲ್ಲಿ ಹೆಚ್ಚಳ ಮಾಡಲಾಗಿದ್ದು, ಇದು ಕೆಲ ಪೊಲೀಸರ ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಟ್ಟಿರುವ ಆರೋಪಗಳು ವ್ಯಕ್ತವಾಗುತ್ತಿವೆ.

ನಗರದ ಪ್ರತಿ ಸಂಚಾರ ಠಾಣೆಯಲ್ಲೂ ಸರದಿ ಪ್ರಕಾರ ಪಿಎಸ್‌ಐ ಹಾಗೂ ಎಎಸ್‌ಐ ನೇತೃತ್ವದ ತಂಡಗಳನ್ನು ದಂಡ ಸಂಗ್ರಹ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಪ್ರಮುಖ ರಸ್ತೆ, ವೃತ್ತ ಹಾಗೂ ಇತರೆಡೆ ಕಾದು ನಿಲ್ಲುವ ತಂಡ, ಸಾರ್ವಜನಿಕರ ವಾಹನಗಳನ್ನು ತಡೆದು ಪರಿಶೀಲಿಸುತ್ತಿವೆ.

ಈ ಪೈಕಿ ಕೆಲವರು, ನಿಗದಿತ ದಂಡ ವಸೂಲಿ ಮಾಡದೇ ಲಂಚ ಪಡೆದು ಸಾರ್ವಜನಿಕರನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಪೊಲೀಸರ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆ ಆಗುತ್ತಿದೆ.

’ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ’ ಎಂಬುದು ರಸ್ತೆ ಸುರಕ್ಷತಾ ಸಮಿತಿ ಅಧ್ಯಯನದಿಂದ ಗೊತ್ತಾಗಿತ್ತು. ಜನರಲ್ಲಿ ನಿಯಮಗಳ ಜಾಗೃತಿ ಮೂಡಿದರೆ ಅಪಘಾತಗಳು ಕಡಿಮೆಯಾಗಬಹುದೆಂಬ ಕಾರಣಕ್ಕೆ ದಂಡದ ಮೊತ್ತವನ್ನು ಸರ್ಕಾರ ಹೆಚ್ಚಿ
ಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪೊಲೀಸರು, ‘ದಂಡದ ಮೊತ್ತ ಹೆಚ್ಚಿದೆ. ಇದ್ದಷ್ಟು ಕೊಟ್ಟು ರಶೀದಿ ಕೇಳದೇ ಸ್ಥಳದಿಂದ ಹೋಗಿ’ ಎಂದು ನೇರವಾಗಿ ಹೇಳಿ ಜನರಿಂದ ಹಣ ಪಡೆಯುತ್ತಿದ್ದಾರೆ. ಈ ಸಂಬಂಧ ಹಲವರು ಪೊಲೀಸ್ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.

‘ದಂಡ ಹೆಚ್ಚಳ ಮಾಡಿರುವುದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ’ ಎಂದು ಹೆಣ್ಣೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮುನಿರಾಜು ದೂರಿದರು.

ಖಾಸಗಿ ಕಂಪನಿ ಉದ್ಯೋಗಿ ಭರತ್, ‘ಇಂದಿರಾನಗರ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿದ್ದೆ. ಅಲ್ಲಿ ಯಾವುದೇ ನೋ ಪಾರ್ಕಿಂಗ್ ಫಲಕವಿರಲಿಲ್ಲ. ಪೊಲೀಸರು ನನ್ನ ಬೈಕ್ ಟೋಯಿಂಗ್ ಮಾಡಿಕೊಂಡು ಹೋಗಿದ್ದರು. ಬೈಕ್ ನಿಲ್ಲಿಸಿದ್ದ ಜಾಗಕ್ಕೆ ಹೋದಾಗ ಪೊಲೀಸರು, ‘ಪಾರ್ಕಿಂಗ್ ಫಲ
ಕವಿರುವ ಜಾಗದಲ್ಲಿ ಮಾತ್ರ ವಾಹನ ನಿಲ್ಲಿಸಬೇಕು. ಉಳಿದೆಲ್ಲ ಕಡೆ ನೋ ಪಾರ್ಕಿಂಗ್’ ಎಂದಿದ್ದರು. ₹1,650 ದಂಡ ಕಟ್ಟುವಂತೆ ಹೇಳಿದ್ದರು. ಅಷ್ಟು ಹಣವಿಲ್ಲವೆಂದು ತಿಳಿಸಿದ್ದೆ. ₹ 500 ಕೊಟ್ಟು ಹೋಗುವಂತೆ ಹೇಳಿದ್ದರು’ ಎಂದರು.

ಪೊಲೀಸರಿಗೆ ಅನುಕೂಲ ಮಾಡಿಕೊಟ್ಟ ಲಾಕ್‌ಡೌನ್; ಯಶವಂತಪುರದ ನಿವಾಸಿ ಎಂ. ರಾಜಶೇಖರ್, ‘ಲಾಕ್‌ಡೌನ್‌ ಸಮಯದಲ್ಲಿ ಎಲ್ಲರ ದುಡಿಮೆ ಕಡಿಮೆಯಾಗಿದೆ. ಯಾರ ಬಳಿಯೂ ಹಣವಿಲ್ಲ. ದುಬಾರಿ ದಂಡ ಕಟ್ಟುವ ಸ್ಥಿತಿಯಲ್ಲೂ ಇಲ್ಲ. ದೊಡ್ಡ ಮೊತ್ತ ಪಾವತಿಸಲಾಗದ ಜನ, ಕೈಲಾದಷ್ಟು ಕೊಡುತ್ತಿದ್ದಾರೆ. ಇದು ಪೊಲೀಸರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ’ ಎಂದರು.

ರಾಜಾಜಿನಗರದ ವ್ಯಾಪಾರಿ ಶೇಖರ್, ‘ವಾಹನ ಪರಿಶೀಲನೆ ನೆಪದಲ್ಲಿ ಜನರನ್ನು ಅಡ್ಡಗಟ್ಟುತ್ತಿರುವ ಕೆಲ ಪೊಲೀಸರು, ಹಳೇ ಪ್ರಕರಣಗಳಿರುವುದಾಗಿ ಹೇಳಿ ದಂಡ ಕೇಳುತ್ತಿದ್ದಾರೆ. ದಂಡದ ಮೊತ್ತ ಹೆಚ್ಚಿದ್ದರೆ, ಎಷ್ಟು ಸಾಧ್ಯವೂ ಅಷ್ಟು ಕೊಟ್ಟು ಹೋಗಿ ಎನ್ನುತ್ತಿದ್ದಾರೆ’ ಎಂದರು.

‘ದಂಡ ವಸೂಲಿ ವ್ಯವಸ್ಥೆಯಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಕೆಲ ಪೊಲೀಸರು ತಮ್ಮಲ್ಲಿಯೇ ಹಣ ಹಂಚಿಕೊಂಡು ಭ್ರಷ್ಟಾಚಾರ ಮುಂದುವರಿಸಿದ್ದಾರೆ. ಇಂಥವರ ಮೇಲೆ ಹಿರಿಯ ಅಧಿಕಾರಿಗಳು ಕಣ್ಣಿಟ್ಟು, ಶಿಸ್ತುಕ್ರಮ ಜರುಗಿಸಬೇಕು’ ಎಂದೂ ಆಗ್ರಹಿಸಿದರು.

ಟೋಯಿಂಗ್ ಸಿಬ್ಬಂದಿಯೇ ಮಧ್ಯವರ್ತಿಗಳು: ‘ನನ್ನ ಮಗನ ಸ್ನೇಹಿತನ ದ್ವಿಚಕ್ರ ವಾಹನವನ್ನು ಪೊಲೀಸರು ಟೋಯಿಂಗ್ ಮಾಡಿದ್ದರು. ₹ 1,650 ದಂಡ ಪಾವತಿಸುವಂತೆ ಹೇಳಿದ್ದರು. ಅಷ್ಟು ಹಣವಿಲ್ಲವೆಂದು ಹೇಳಿದ್ದಕ್ಕೆ ₹ 650ಕ್ಕೆ ವ್ಯವಹಾರ ಕುದುರಿಸಿ ವಾಹನ ಬಿಟ್ಟು ಕಳುಹಿಸಿದ್ದಾರೆ’ ಎಂದು ಇಂದಿರಾನಗರದ ಜೆಸುನಾ ಹೇಳಿದರು.

‘ಪೊಲೀಸರಿಗಿಂತಲೂ ಟೋಯಿಂಗ್ ವಾಹನದ ಸಿಬ್ಬಂದಿಯೇ ನೇರವಾಗಿ ಹಣ ಕೇಳುತ್ತಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕಮಿಷನರ್ ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.

ಕ್ರಮ ಕೈಗೊಂಡರೂ ದುರ್ವರ್ತನೆ ಮುಂದುವರಿಕೆ

ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಯವರಿಗೆ ವಹಿಸಲಾಗಿದೆ. ‘ಟೈಗರ್’ ವಾಹನಗಳಿಗೆ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಇದರ ನಡುವೆಯೂ ಸಿಬ್ಬಂದಿ ದುರ್ವತನೆ ತೋರುತ್ತಿದ್ದಾರೆ ಎಂದು ವಾಹನ ಸವಾರರು ದೂರಿದ್ದಾರೆ.

ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಸೂಚನೆ ನೀಡಿದ್ದಾರೆ. ದುರ್ವರ್ತನೆ ತೋರಿದ್ದ ಕೆಲವರ ವಿರುದ್ಧ ಕ್ರಮವನ್ನೂ ಕೈಗೊಂಡಿದ್ದಾರೆ. ಅಷ್ಟಾದರೂ ಸಿಬ್ಬಂದಿಗಳ ವರ್ತನೆಗೆ ಕಡಿವಾಣ ಬಿದ್ದಿಲ್ಲ.

ನಿಯಮಗಳನ್ನು ಪಾಲಿಸದೇ ವಾಹನಗಳ ಟೋಯಿಂಗ್ ಮಾಡುವ ಸಿಬ್ಬಂದಿ, ವಾಹನ ನಿಲುಗಡೆ ಸ್ಥಳದಲ್ಲೂ ಜನರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ತಾಳ್ಮೆ ಕಳೆದುಕೊಂಡ ಜನ, ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆಗಳು ರಾಜಾಜಿನಗರ ಹಾಗೂ ಯಲಹಂಕದಲ್ಲಿ ಇತ್ತೀಚೆಗೆ ನಡೆದಿವೆ.

ಬಾಡಿವೋರ್ನ್ ಕ್ಯಾಮೆರಾ ಎಲ್ಲಿ?

‘ದಂಡ ಸಂಗ್ರಹ ಹಾಗೂ ಕರ್ತವ್ಯ ನಿರ್ವಹಣೆ ವೇಳೆ ಧರಿಸಲೆಂದು ಸಂಚಾರ ಪೊಲೀಸರಿಗೆ ಬಾಡಿವೋರ್ನ್‌ ಕ್ಯಾಮೆರಾಗಳನ್ನು ನೀಡಲಾಗಿದೆ. ಬಹುತೇಕರು ತಮ್ಮ ಅಕ್ರಮಗಳು ಬಯಲಾಗುತ್ತವೆಂಬ ಕಾರಣಕ್ಕೆ ಕ್ಯಾಮೆರಾಗಳನ್ನೇ ಧರಿಸುತ್ತಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದರು.

‘ದಂಡ ಸಂಗ್ರಹಿಸಲು ನಿಲ್ಲುವ ಕೆಲ ಎಎಸ್‌ಐ, ಪಿಎಸ್ಐ ಬಳಿ ಯಾವುದೇ ಬಾಡಿವೋರ್ನ್ ಕ್ಯಾಮೆರಾ ಇರುವುದಿಲ್ಲ. ಹೀಗಾಗಿ, ಅವರೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಾಡಿವೋರ್ನ್ ಕ್ಯಾಮೆರಾ ಧರಿಸುವುದನ್ನು ಮೊದಲು ಕಡ್ಡಾಯ ಮಾಡಬೇಕು. ಅದರಲ್ಲಿ ದೃಶ್ಯ ಸೆರೆಯಾಗುವ ರೀತಿಯಲ್ಲೇ ವಾಹನಗಳನ್ನು ನಿಲ್ಲಿಸಿ ದಂಡ ಸಂಗ್ರಹಿಸಬೇಕು’ ಎಂದೂ ಒತ್ತಾಯಿಸಿದರು.

‘ಕಮಿಷನರ್ ಆದೇಶಕ್ಕೂ ಕಿಮ್ಮತ್ತಿಲ್ಲ’

‘ಕಣ್ಣಿಗೆ ಕಾಣುವ ನಿಯಮಗಳ ಉಲ್ಲಂಘನೆಯಾದರೆ ಮಾತ್ರ ವಾಹನಗಳನ್ನು ಅಡ್ಡಗಟ್ಟಿ. ವಿನಾಕಾರಣ ವಾಹನ ನಿಲ್ಲಿಸಿ ಕಿರಿಕಿರಿ ಉಂಟು ಮಾಡಬೇಡಿ’ ಎಂದು ಕಮಿಷನರ್‌ ಪದೇ ಪದೇ ಹೇಳುತ್ತಿದ್ದಾರೆ. ಇದಕ್ಕೆಲ್ಲ ಸಂಚಾರ ಪೊಲೀಸರು ಕಿಮ್ಮತ್ತು ನೀಡುತ್ತಿಲ್ಲ.

ಎಎಸ್‌ಐ ನೇತೃತ್ವದ ತಂಡಗಳು ದಂಡ ಸಂಗ್ರಹ ಕೆಲಸ ಮಾಡುತ್ತಿವೆ. ಅದರಲ್ಲಿ ಕಾನ್‌ಸ್ಟೆಬಲ್‌ಗಳೂ ಇದ್ದಾರೆ. ಕಮಿಷನರ್ ಆದೇಶ ನಮಗೆ ಸಂಬಂಧವಿಲ್ಲದಂತೆ ಅವರೆಲ್ಲ ವರ್ತಿಸುತ್ತಿದ್ದಾರೆ. ‘ನಿತ್ಯವೂ ಇಷ್ಟೇ ಪ್ರಕರಣ ದಾಖಲಿಸಬೇಕು’ ಎಂಬ ಗುರಿ ನೀಡಿರುವುದರಿಂದಲೇ ಸಿಬ್ಬಂದಿ, ಸಿಕ್ಕ ಸಿಕ್ಕ ವಾಹನಗಳನ್ನು ಅಡ್ಡಗಟ್ಟಿ ದಂಡ ಸಂಗ್ರಹಿಸುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಕಮಿಷನರ್ ಆಗಿದ್ದ ಇಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್, ‘ವಿನಾಕಾರಣ ವಾಹನ ಅಡ್ಡಗಟ್ಟಬೇಡಿ’ ಎಂದಿದ್ದರು. ನಂತರ ಬಂದ ಕಮಿಷನರ್‌ ಸುನೀಲ್‌ಕುಮಾರ್ ಹಾಗೂ ಈಗಿನ ಕಮಲ್ ಪಂತ್ ಅವರು ಸಹ ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅದು ಪಾಲನೆಯಾಗುತ್ತಿಲ್ಲವೆಂಬ ಆರೋಪವಿದೆ. ‘ಕಮಿಷನರ್ ಮಾತು ಕೇಳದ ಸಂಚಾರ ಪೊಲೀಸರು, ಯಾರ ಮಾತು ಕೇಳುತ್ತಾರೆ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

‘ಆನ್‌ಲೈನ್‌ನಲ್ಲಿ ದಂಡದ ರಶೀದಿ ಸಿಗಲಿ’

‘ಸ್ಥಳದಲ್ಲಿ ದಂಡ ಪಾವತಿ ಮಾಡಿದರೂ ಕೆಲ ಪೊಲೀಸರು ದಂಡದ ರಶೀದಿ ನೀಡುತ್ತಿಲ್ಲ. ನಾವು ಪಾವತಿಸುವ ಹಣ ಸರ್ಕಾರಕ್ಕೆ ಹೋಗುತ್ತದೆಯೋ ಅಥವಾ ಪೊಲೀಸರ ಜೇಬಿಗೂ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ, ನಾವು ಕಟ್ಟಿದ ದಂಡದ ರಶೀದಿ ಆನ್‌ಲೈನ್‌ನಲ್ಲಿ ಸಿಗುವ ವ್ಯವಸ್ಥೆ ಮಾಡಬೇಕು’ ಎಂದು ಮಲ್ಲೇಶ್ವರದ ಸಚಿನ್‌ ಆಗ್ರಹಿಸಿದ್ದಾರೆ.

‘ಕಾನೂನು ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೊಲೀಸರ ಬಗ್ಗೆ ಗೌರವ ಹೆಚ್ಚಿದೆ. ಯಾವುದೇ ಇಲಾಖೆಗೆ ಸಂಬಂಧಪಟ್ಟ ಘಟನೆಗಳು ನಡೆದಾಗ ಪೊಲೀಸರೇ ಮೊದಲಿಗೆ ಜನರ ಸಮಸ್ಯೆ ಆಲಿಸುತ್ತಾರೆ. ಇಂಥ ಪೊಲೀಸರು, ದಂಡ ಸಂಗ್ರಹ ವ್ಯವಸ್ಥೆಯಲ್ಲೂ ಪಾರದರ್ಶಕತೆ ಕಾಪಾಡಿಕೊಂಡು ಗೌರವ ಉಳಿಸಿಕೊಳ್ಳಬೇಕು’ ಎಂದಿದ್ಧಾರೆ.

‘ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದವರಿಗೆ ದಂಡ ವಿಧಿಸಬೇಕು. ಅದರ ರಶೀದಿ ಸಂಬಂಧಪಟ್ಟ ವ್ಯಕ್ತಿಗೆ ಆನ್‌ಲೈನ್‌ ಮೂಲಕ ಸಿಗುವಂತಾಗಬೇಕು. ರಶೀದಿ ಸಿಗದಿದ್ದರೆ, ಅಂಥ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT