ಭಾನುವಾರ, ಜೂನ್ 13, 2021
23 °C
ಗೊಂದಲ ಹುಟ್ಟಿಸಿದ ಬಿಬಿಎಂಪಿ ಆದೇಶ * ಹೊಸ ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘನೆ?

ಮುಖ್ಯ ಎಂಜಿನಿಯರ್‌ ವರ್ಗಾವಣೆ – ಪಾಲಿಕೆಗೆ ಅಧಿಕಾರ ಇದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಮುಖ್ಯ ಎಂಜಿನಿಯರ್‌ ಹಾಗೂ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳನ್ನು ಬಿಬಿಎಂಪಿ ವರ್ಗ ಮಾಡಿರುವುದು ಗೊಂಂದಲ ಮೂಡಿಸಿದೆ.

ಈ ಹಿಂದೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಿಂದ ಹಿಡಿದು ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರ ಪಾಲಿಕೆ ಆಯುಕ್ತರ ಬಳಿಯೇ ಇತ್ತು. ಕರ್ನಾಟಕ ಸರ್ಕಾರಿ ಸೇವಾ ನಿಯಮ, ನಡತೆ ನಿಯಮ, ಹುದ್ದೆ ವರ್ಗೀಕರಣ ನಿಯಮಗಳು ಬಿಬಿಎಂಪಿಗೆ ಅನ್ವಯವಾಗುತ್ತಿರಲಿಲ್ಲ. ರಾಜ್ಯದ ಇತರ ಪಾಲಿಕೆಗಳಿಗೆ ಹಾಗೂ ಬಿಬಿಎಂಪಿ ನಡುವೆ ಅನೇಕ ವಿಚಾರಗಳಲ್ಲಿ ತಾರತಮ್ಯಗಳಿದ್ದವು. ಹಾಗಾಗಿ, 1971ರಲ್ಲಿ ರೂಪಿಸಲಾಗಿದ್ದ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸರ್ಕಾರ 2020ರ ಮಾರ್ಚ್‌ನಲ್ಲಿ ಪರಿಷ್ಕರಿಸಿತ್ತು. ‘ಬಿಬಿಎಂಪಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ– 2020’ಅನ್ನು ಸರ್ಕಾರ ಜಾರಿಗೆ ತಂದಿತ್ತು.

ಹೊಸ ನಿಯಮದ ಪ್ರಕಾರ ಎ ಗುಂಪಿನ ಅಧಿಕಾರಿಗಳ ಹಾಗೂ ₹ 74 ಸಾವಿರಕ್ಕಿಂತ ಹೆಚ್ಚು ಮೂಲವೇತನ ಹೊಂದಿರುವ ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದ ಅಧಿಕಾರವನ್ನು ಸರ್ಕಾರ ಬಿಬಿಎಂಪಿಯಿಂದ ಕಿತ್ತುಕೊಂಡು ತನ್ನ ತೆಕ್ಕೆಯಲ್ಲೇ ಇಟ್ಟುಕೊಂಡಿತ್ತು. ಬಿ ಮತ್ತು ಸಿ ಗುಂಪಿನ ಅಧಿಕಾರಿಗಳನ್ನು ಹಾಗೂ ಡಿ ಗುಂಪಿನ ಸಿಬ್ಬಂದಿಯನ್ನು ಮಾತ್ರ ಆಯುಕ್ತರು ಅಥವಾ ಅವರು ಸೂಚಿಸಿದ ಅಧಿಕಾರಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ, ಬಿಬಿಎಂಪಿಯು ಮುಖ್ಯ ಎಂಜಿನಿಯರ್ (ಯೋಜನೆ– ಕೇಂದ್ರ) ಎನ್‌.ರಮೇಶ್‌ ಅವರನ್ನು ಮುಖ್ಯ ಎಂಜಿನಿಯರ್‌ (ಒಎಫ್‌ಸಿ) ಹುದ್ದೆಗೆ ಬುಧವಾರ (ಮೇ 19) ವರ್ಗಾಯಿಸಿದೆ. ಮುಖ್ಯ ಎಂಜಿನಿಯರ್‌ (ಒಎಫ್‌ಸಿ) ಹುದ್ದೆಯಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರಸರಾಮರಾವ್‌ ಅವರನ್ನು ಸೂಪರಿಂಡೆಂಟಿಂಗ್‌ ಎಂಜಿನಿಯರ್‌ (ದಕ್ಷಿಣ) ಹುದ್ದೆಯಲ್ಲಿ ಮುಂದುವರಿಸಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಆದೇಶ ಹೊರಡಿಸಿದ್ದಾರೆ.

ಸೂಪರಿಂಡೆಂಟಿಂಗ್‌ ಎಂಜಿನಿಯರ್‌ (ಯೋಜನೆ –ಕೇಂದ್ರ) ಎಂ.ಲೋಕೇಶ್‌ ಅವರಿಗೆ ಮುಖ್ಯ ಎಂಜಿನಿಯರ್‌ ಆಗಿ ಬಡ್ತಿ ನೀಡಲಾಗಿದೆ. ರಸ್ತೆ ಮೂಲಸೌಕರ್ಯ ವಿಭಾಗದಲ್ಲಿ ಪ್ರಭಾರ ಸೂಪರಿಂಡೆಂಟಿಂಗ್‌ ಎಂಜಿನಿಯರ್‌ ಆಗಿದ್ದ ಎಸ್‌.ವಿ.ರಾಜೇಶ್‌ ಅವರಿಗೆ ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಿದೆ. ಪಶ್ಚಿಮ ವಲಯದಲ್ಲಿ ಪ್ರಭಾರ ಮುಖ್ಯ ಎಂಜಿನಿಯರ್‌ ಆಗಿದ್ದ ದೊಡ್ಡಯ್ಯ ಅವರನ್ನು ಮುಖ್ಯ ಎಂಜಿನಿಯರ್‌ ( ಜಾಗೃತಿ ಮತ್ತು ಪಿಪಿಇಡಿ) ಆಗಿ ಮುಂದುವರಿಸಿದೆ.

‘ಮುಖ್ಯ ಎಂಜಿನಿಯರ್‌ಗಳ ವರ್ಗಾವಣೆಯನ್ನು ಬಿಬಿಎಂಪಿ ಹಂತದಲ್ಲೇ ಮಾಡಿದರೂ ಅದಕ್ಕೆ ಸರ್ಕಾರದಿಂದ ಘಟನೋತ್ತರ ಅನುಮೋದನೆ ಪಡೆದುಕೊಳ್ಳಲು ಅವಕಾಶವಿದೆ’ ಎಂದು ಬಿಬಿಎಂಪಿಯ ಆಡಳಿತ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನಿಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು