ಮಂಗಳವಾರ, ಜೂನ್ 28, 2022
28 °C
ಮೃತ ವ್ಯಕ್ತಿಯೊಬ್ಬರ ಸಂಬಂಧಿಕರಿಂದ ದಾಂಧಲೆ

ವಿಡಿಯೊ ಸುದ್ದಿ | ಜಯದೇವ ಆಸ್ಪತ್ರೆ ಗಾಜು ಪುಡಿಪುಡಿ, ಪೀಠೋಪಕರಣ ಚಿಲ್ಲಾಪಿಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Jayadeva Hospital

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅನ್ಸರ್ ಪಾಷಾ ಎಂಬುವರು ಮೃತಪಟ್ಟಿದ್ದರಿಂದಾಗಿ ಆಕ್ರೋಶಗೊಂಡ ಸಂಬಂಧಿಕರು, ಜಯದೇವ ಆಸ್ಪತ್ರೆಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಪೀಠೋಪಕರಣಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಿಲಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೂಳಿಸಿದ್ದಾರೆ.

‘ಅನ್ಸರ್ ಪಾಷಾ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಅವರು ಹಲವು ಬಾರಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಭಾನುವಾರ ಸಂಜೆ ಪುನಃ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ವೈದ್ಯರು ತಮ್ಮ ಪ್ರಯತ್ನ ಮಾಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅನ್ಸರ್ ಪಾಪಾ ಮೃತಪಟ್ಟಿದ್ದರು. ಅದರಿಂದ ಆಕ್ರೋಶಗೊಂಡ ಸಂಬಂಧಿಕರು, ‘ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಸತ್ತಿದ್ದಾರೆ’ ಎಂದು ಕೂಗಾಡಲಾರಂಭಿಸಿದ್ದರು.’

‘ಆಸ್ಪತ್ರೆಯೊಳಗೆ ನುಗ್ಗಿದ್ದ 40ಕ್ಕೂ ಹೆಚ್ಚು ಮಂದಿ, ತುರ್ತು ನಿಗಾ ಘಟಕದ ಬಾಗಿಲು ಹಾಗೂ ಕೆಲ ಕೊಠಡಿಗಳಿಗೆ ಅಳವಡಿಸಿದ್ದ ಗಾಜುಗಳನ್ನು ಒಡೆದು ಹಾಕಿದ್ದರು. ಕುರ್ಚಿ, ಟೇಬಲ್‌ಗಳನ್ನು ಎತ್ತಿ ಬಿಸಾಡಿದ್ದರು’ ಎಂದೂ ಹೇಳಿದರು.

‘ಠಾಣೆಗೆ ಮಾಹಿತಿ ಬರುತ್ತಿದ್ದಂತೆ ಆಸ್ಪತ್ರೆಗೆ ಹೋಗಿ ಸಂಬಂಧಿಕರನ್ನು ಹೊರಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲೂ ಸಂಬಂಧಿಕರು ಬ್ಯಾರಿಕೇಡ್‌ಗಳಿಗೆ ಒದ್ದು ಬೀಳಿಸಿದ್ದರು’ ಎಂದೂ ತಿಳಿಸಿದರು.

ರೋಗಿಗಳು ಇದ್ದಾಗಲೇ ಗಲಾಟೆ; ದೂರು

‘ರೋಗಿಯನ್ನು ಉಳಿಸಿಕೊಳ್ಳಲು ನಮ್ಮ ವೈದ್ಯರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಅಷ್ಟಾದರೂ ಸುಮಾರು 40 ಜನರಿದ್ದ ತಂಡ, ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದೆ. ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ತುರ್ತು ನಿಗಾ ಘಟಕಕ್ಕೂ ನುಗ್ಗಿ ಗಾಜುಗಳನ್ನು ಒಡೆದು ಹಾಕಿದೆ. ಆರೋಪಿಗಳ ವಿರುದ್ಧ ತಿಲಕನಗರ ಠಾಣೆಗೆ ದೂರು ನೀಡಲಾಗಿದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಜನರಿಗಾಗಿ ಕೆಲಸ ಮಾಡುವ ವೈದ್ಯರು ಹಾಗೂ ಆಸ್ಪತ್ರೆ ಮೇಲೆ ನಡೆಯುವ ಇಂಥ ಘಟನೆಗಳು ಖಂಡನೀಯ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು