ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ನಾಮಫಲಕಗಳಲ್ಲಿ ಕನ್ನಡ: ಫೆಬ್ರುವರಿ 28ರವರೆಗೆ ಗಡುವು

Published 24 ಡಿಸೆಂಬರ್ 2023, 14:45 IST
Last Updated 24 ಡಿಸೆಂಬರ್ 2023, 14:45 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸಬೇಕು. ಇದನ್ನು ಅನುಷ್ಠಾನ ನೀಡಲು ಫೆಬ್ರುವರಿ 28ರವರೆಗೆ ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

‘ಕನ್ನಡ ನಾಮಫಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಆದೇಶ ಹಾಗೂ ಪಾಲಿಕೆ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು’ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಅವರು ಮಾತನಾಡಿದರು.

ಪಾಲಿಕೆ ವ್ಯಾಪ್ತಿಯ ಅಂಗಡಿ, ಹೋಟೆಲ್‌, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ನಗರದಲ್ಲಿ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು 1,400 ಕಿ.ಮೀ ನಷ್ಟಿದ್ದು, ಈ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ನಂತರ ಕನ್ನಡ ಬಳಸದ ಮಳಿಗೆಗಳಿಗೆ ನೋಟೀಸ್ ನೀಡಲಾಗುವುದು. ಫೆಬ್ರುವರಿ 28ರವರೆಗೆ ಸಮಯಾವಕಾಶ ನೀಡಿ, ನಂತರ ಕ್ರಮ ಕೈಗೊಳ್ಳಬೇಕು. ಇದರ ಅನುಷ್ಠಾನದ ಬಗ್ಗೆ ಆಯಾ ವಲಯ ಆಯುಕ್ತರು ಅನುಪಾಲನೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ನಾಮಫಲಕಗಳಲ್ಲಿ ಕನ್ನಡ ಬಳಸದ ಅಂಗಡಿಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು,  ಪರವಾನಗಿ ರದ್ದುಗೊಳಿಸಲಾಗುವುದು. ಈ ಬಗ್ಗೆ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೂ ಶಿಸ್ತು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು  ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಗೌಡ ಹಾಗೂ ಸದಸ್ಯರು ಮನವಿ ಮಾಡಿದರು.

ಬಿಬಿಎಂಪಿ ಉಪ ಆಯುಕ್ತ ಮಂಜುನಾಥ ಸ್ವಾಮಿ, ಮುಖ್ಯ ಎಂಜಿನಿಯರ್‌ ಪ್ರವೀಣ್ ಲಿಂಗಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT