ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆ ಸೇರಿರುವ 2,404 ಬಸ್‌ಗಳು: 5 ವರ್ಷಗಳಿಂದ ಕೆಎಸ್‌ಆರ್‌ಟಿಸಿಗೆ ಖರೀದಿಯೇ ನಡೆದಿಲ್ಲ

ಐದು ವರ್ಷಗಳಿಂದ ಕೆಎಸ್‌ಆರ್‌ಟಿಸಿಗೆ ಬಸ್‌ ಖರೀದಿಯೇ ನಡೆದಿಲ್ಲ
Published 19 ಜೂನ್ 2023, 20:01 IST
Last Updated 19 ಜೂನ್ 2023, 20:01 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 23,978 ಬಸ್‌ಗಳಿದ್ದು, ಅವುಗಳ ಪೈಕಿ ತಾಂತ್ರಿಕ ತೊಂದರೆ, ಸಿಬ್ಬಂದಿ ಕೊರತೆ ಮತ್ತಿತರ ಕಾರಣಗಳಿಂದ 2,404 ಬಸ್‌ಗಳು ಸಂಚರಿಸುತ್ತಿಲ್ಲ.

‘ಶಕ್ತಿ’ ಯೋಜನೆ ಜಾರಿಯಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಮೇಲೆ ಇಷ್ಟು ಬಸ್‌ಗಳು ಓಡಾಡದೇ ನಿಂತಿರುವುದು ಗಮನಕ್ಕೆ ಬಂದಿದೆ.

ಪ್ರತಿ ವರ್ಷ 1000 ಬಸ್‌ ಖರೀದಿಸಬೇಕು ಎಂಬ ನಿಯಮ ಇದೆ. ಕಳೆದ ಐದು ವರ್ಷಗಳಿಂದ ಖರೀದಿ ನಡೆದೇ ಇಲ್ಲ. ಹಿಂದೆ ರಾಜ್ಯದಲ್ಲಿ ಸಾರಿಗೆ ಬಸ್‌ನಲ್ಲಿ ದಿನಕ್ಕೆ 84.5 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ಮೇಲೆ ನಿತ್ಯ ₹ 1.12 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಈ  ಪ್ರಮಾಣಕ್ಕೆ ಅನುಗುಣವಾಗಿ 3,000 ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ. ಇಷ್ಟು ಬಸ್‌ಗಳನ್ನು ಖರೀದಿಸಿದರೆ ಅವುಗಳ ನಿರ್ವಹಣೆಗೆ ಬೇಕಾದ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಬೇಕಾಗುತ್ತದೆ.

ಎರಡು ತಿಂಗಳಲ್ಲಿ ಸಹಜ ಸ್ಥಿತಿಗೆ: ‘ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಸದ್ಯ ಸ್ವಲ್ಪ ಸಮಸ್ಯೆಯಾಗಿದೆ. ಎರಡು ತಿಂಗಳಲ್ಲಿ ಸಹಜ ಸ್ಥಿತಿಗೆ ಮರಳಲಿದೆ. ಆಗ ಎಷ್ಟು ಜನ ಪ್ರಯಾಣಿಸುತ್ತಾರೆ ಎಂದು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

ಎಲ್ಲ ಮಾರ್ಗಗಳಲ್ಲಿ ಜನಸಂದಣಿ ಇಲ್ಲ. ಧರ್ಮಸ್ಥಳ ಸಹಿತ ಕೆಲವು ಪ್ರದೇಶಗಳಿಗೆ ಹೋಗುವ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಎಲ್ಲವನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಬಸ್‌ ಖರೀದಿ ಅಗತ್ಯ: ‘ಬಿಎಂಟಿಸಿಗೆ ಬಸ್‌ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿಗೆ ಬಸ್ ಖರೀದಿ ಆಗಲಿದೆ. ‘ಶಕ್ತಿ’ ಯೋಜನೆ ಜಾರಿಯಾದ ಮೇಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚುವರಿ ಬಸ್‌ ಅಗತ್ಯ ಇರುವುದು ನಿಜ. ಎಷ್ಟು ಬೇಕು ಎಂಬುದನ್ನು ಈಗಲೇ ತೀರ್ಮಾನಿಸಲು ಆಗುವುದಿಲ್ಲ. ಯಾವ ಮಾರ್ಗದಲ್ಲಿ ಯಾವ ಹೊತ್ತಿನಲ್ಲಿ ಜನಸಂದಣಿ ಹೆಚ್ಚಿರುತ್ತದೆ ಎಂಬುದನ್ನು ಪರಿಶೀಲಿಸಬೇಕು. ಈಗ ಕಾಲೇಜುಗಳು ಆರಂಭಗೊಂಡಿಲ್ಲ. ಕಾಲೇಜು ಆರಂಭಗೊಂಡಾಗ ಪ್ರಯಾಣಿಕರು ಎಷ್ಟು ಹೆಚ್ಚಾಗಬಹುದು? ಈಗ ಸಂಚರಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಮುಂದೆ ಕಡಿಮೆ ಆಗಲಿದೆ. ಅದರ ಪ್ರಮಾಣ ಎಷ್ಟು? ಎಂಬುದನ್ನು ನೋಡಿಕೊಂಡು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್‌ ವಿವರ ನೀಡಿದರು.

8500: ಖಾಲಿ ಇರುವ ಚಾಲಕ ನಿರ್ವಾಹಕರ ಹುದ್ದೆ

200: ಮೆಕ್ಯಾನಿಕ್‌ಗಳ ಹುದ್ದೆ

1,04,450: ನಾಲ್ಕು ನಿಗಮಗಳ ಒಟ್ಟು ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT