ಗುರುವಾರ , ಆಗಸ್ಟ್ 18, 2022
25 °C

ಲಾಲ್‌ಬಾಗ್‌ನಲ್ಲಿ ಲಪುಷ್ಪ ಪ್ರದರ್ಶನ: ರಾಜ್‌ಕುಮಾರ್‌, ಪುನೀತ್ ನೆನಪಿನ ಘಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಲ್‌ಬಾಗ್‌ನ ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ‘ಗೊಂಬೆ ಹೇಳುತೈತೆ ನೀನೇ ರಾಜ್‌ಕುಮಾರ..’ ಹಾಡು. ಲಕ್ಷಾಂತರ ಪುಷ್ಪಗಳಲ್ಲಿ ಮೈದಳೆದ ಗಾಜನೂರಿನ ಮನೆ ಮುಂದೆ ಮಯೂರ ಚಿತ್ರದ ಡಾ.ರಾಜ್, ಪುನೀತ್‌ ರಾಜ್‌ಕುಮಾರ್ ಅವರ ನಗು ಮುಖದ ಪ್ರತಿಮೆಗಳು. ಪುನೀತ್ ಅಗಲಿಕೆಯ ನೋವಿನ ತಂತಿಯನ್ನು ಇವು ಮೀಟುತ್ತವೆ. ನೋಡುಗರು ಸಹಜವಾಗಿಯೇ ಭಾವುಕರಾಗುತ್ತಾರೆ.

‌ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘವು ಸ್ವಾತಂತ್ರ್ಯೋತ್ಸದ ಪ್ರಯುಕ್ತ ಹಮ್ಮಿಕೊಂಡಿರುವ 212ನೇ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಚಾಲನೆ ನೀಡಿದರು.

ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಇದಾಗಿದೆ. 

ಮನಸೂರೆಗೊಳ್ಳುವ ಪ್ರತಿಮಾ ಲೋಕದ ಅನಾವರಣ: ‘ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಎತ್ತ ನೋಡಿದರತ್ತ ಡಾ.ರಾಜ್, ಪುನೀತ್‌ರಾಜ್‌ ಕುಮಾರ್ ಬಿಂಬಗಳೇ. ಅವರು ನಟಿಸಿದ ಪಾತ್ರಗಳ
ಪ್ರತಿಮೆಗಳು ಜೀವನದ ಸಂದೇಶಗಳನ್ನು ಸಾರುತ್ತಿವೆ. ಗಾಜನೂರು ಮನೆಯ ಹಿಂಭಾಗದಲ್ಲಿ ಡಾ.ರಾಜ್
ಆಲದ ಮರದ ಕೆಳಗೆ ಕುಳಿತು ಧ್ಯಾನ ಮಾಡುವಂತಿರುವ ಪ್ರತಿಮೆಗೆ ಹೂವಿನ ಮೂಲಕ ಜೀವಕಳೆ ತರಲಾಗಿದೆ. ಅದರ ಎಡಭಾಗದಲ್ಲಿ ರಾಜ್‌ ಅವರ ಆರಾಧ್ಯ ದೈವ ರಾಘವೇಂದ್ರಸ್ವಾಮಿ ಪಾತ್ರದ ಪ್ರತಿಕೃತಿ ನೋಡುಗರನ್ನು ಮೋಡಿ ಮಾಡುವಂತಿದೆ. ರಾಜ ಗಾಂಭೀರ್ಯದಲ್ಲಿ ಸಿಂಹಾಸನಾರೂಢ ರಣಧೀರ ಕಂಠೀರವ ಪ್ರತಿಮೆಯ ಮುಂದೆ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಸಿದರು.

ಗಾಜಿನ ಮನೆಯ ಹಿಂಭಾಗದ ಹೂ ರಾಶಿಯಲ್ಲಿ ಡಾ.ರಾಜ್‌ ಹಾಗೂ ಬಾಲನಟನಾಗಿ ಪುನೀತ್‌ ಅಭಿನಯಿಸಿದ್ದ ‘ಭಕ್ತ ಪ್ರಹ್ಲಾದ’ ದೃಶ್ಯವನ್ನು ಚಿಕ್ಕಮಕ್ಕಳು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅದರ ಮುಂಭಾಗದಲ್ಲಿ ಡಾ.ರಾಜ್‌, ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್‌ಕುಮಾರ್ ಪ್ರತಿಮೆಗಳ ಮುಂದೆ ಹಿರಿಯರು–ಕಿರಿಯರು ಎನ್ನದೇ ಎಲ್ಲರೂ ಮೊಬೈಲ್ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. 

‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಅಣ್ಣಾವ್ರು ಶಿವನಿಗೆ ಕಣ್ಣು ನೀಡುತ್ತಿರುವ ದೃಶ್ಯವನ್ನೇ ‘ವರ್ಟಿಕಲ್ ಗಾರ್ಡನ್‌’ನಲ್ಲಿ ಮರು ಸೃಷ್ಟಿಸಿ, ನೇತ್ರದಾನದ ಮಹತ್ವ ಸಾರಲು ಬಳಲಾಗಿರುವುದು ಆಸಕ್ತಿಕರ.

ಅನಾಥ ಮಕ್ಕಳ ಬಾಳಿಗೆ ಬೆಳಕಾದ ಮೈಸೂರಿನ ‘ಶಕ್ತಿಧಾಮ’ದ ಪ್ರತಿಕೃತಿಯನ್ನು 1.6 ಲಕ್ಷ ಗುಲಾಬಿ, ಸೇವಂತಿಗೆ ಮೊದಲಾದ 40 ಸಾವಿರ ಹೂವುಗಳಿಂದ ಮೂಡಿಸಲಾಗಿದೆ.

‘ಅಪ್ಪು ವರ್ಣಿಸಲು ಪದಗಳಿಲ್ಲ’

ಅಪ್ಪ–ಅಮ್ಮ ಮತ್ತು ಅಪ್ಪು ನೆನಪು ಹೂವಿನಂತೆ ಸದಾ ತಾಜಾ. ಅಪ್ಪ ಮತ್ತು ಪುನೀತ್‌ ಅವರ ಜೀವನದ ಮಹತ್ವದ ಕ್ಷಣಗಳು ಹೂವಿನ ರೂಪದಲ್ಲಿ ಅದ್ಭುತವಾಗಿ ಮೂಡಿಬಂದಿವೆ. ತುಂಬಾ ನೋವಿನಿಂದ ಮಾತನಾಡುವ ಪರಿಸ್ಥಿತಿ ಎದುರಾಗಿದೆ ಎಂದು ಶಿವರಾಜ್‌ ಕುಮಾರ್‌ ಭಾವುಕರಾದರು.

ಅಪ್ಪು, ಅಪ್ಪನ ಜೀವನದೊಳಗೆ ಹೋಗಿ ಬಂದಂತೆ ಭಾಸವಾಯಿತು ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್, ಗೀತಾ ಶಿವರಾಜ್‌ ಕುಮಾರ್‌ ಇದ್ದರು.

ಪ್ರತಿಮೆಗೆ ಜೀವಕಳೆ

ವಿವಿಧ ತಳಿಯ ಸಾವಿರಾರು ಹೂಗಳಲ್ಲಿ ಅರಳಿದ ಶಾಲೆಯ ಮಧ್ಯಭಾಗದಲ್ಲಿ ಪುನೀತ್‌ ರಾಜ್‌ಕುಮಾರ್ ಅವರ ಪ್ರತಿಮೆಗೆ ಜೀವಕಳೆ ತುಂಬಿರುವುದನ್ನೂ ಶಾಲಾ ಮಕ್ಕಳು ಕಣ್ತುಂಬಿಕೊಳ್ಳುತ್ತಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು