ಗುರುವಾರ , ಜೂನ್ 24, 2021
22 °C
ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಆದೇಶ

ಹಾಸಿಗೆ ಬಿಟ್ಟು ಕೊಡದವರ ವಿರುದ್ಧ ಕ್ರಮ: ಅಧಿಕಾರಿಗಳಿಗೆ ಸಚಿವ ಆರ್‌.ಅಶೋಕ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗಾಗಿ ಸರ್ಕಾರಕ್ಕೆ ಬಿಟ್ಟುಕೊಡದಿದ್ದರೆ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು’ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ ಹಾಸಿಗೆ ಹಂಚಿಕೆ ಮತ್ತು ಲಭ್ಯತೆ ಕುರಿತು ಅವರು ಮಂಗಳವಾರ ವರ್ಚುವಲ್‌ ರೂಪದಲ್ಲಿ ಸಭೆ ನಡೆಸಿದರು.

‘ಬಿಬಿಎಂಪಿ ಅಧಿಕಾರಿಗಳು, ನೋಡಲ್‌ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವು ಶೀಘ್ರವೇ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ಹಾಸಿಗೆಗಳ ಲಭ್ಯತೆಯ ವಾಸ್ತವಾಂಶ ಪರಿಶೀಲಿಸಬೇಕು’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಆಸ್ಪತ್ರೆಗಳ ಸಹಕಾರ ಪಡೆದು ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಬೇಕು. ಅವುಗಳಲ್ಲಿ ಸದ್ಯ 960 ಹಾಸಿಗೆಗಳಿವೆ. ಈ ಸಾಮರ್ಥ್ಯವನ್ನು 5 ಸಾವಿರ ಹಾಸಿಗೆಗಳಿಗೆ ಹೆಚ್ಚಿಸಬೇಕು’ ಎಂದರು. 

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ‘ಎಲ್ಲ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ 75ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ ಮೀಸಲಿಡಬೇಕಿದೆ. ಇದರ ಉಸ್ತುವಾರಿಗೆ ವಲಯವಾರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ 9 ತಂಡಗಳನ್ನು ರಚಿಸಲಾಗಿದೆ. 50 ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಆಪ್ತಮಿತ್ರ ಸಿಬ್ಬಂದಿಯನ್ನೂ ನೇಮಿಸಲಾಗಿದೆ’ ಎಂದರು. 

ಬಿಬಿಎಂಪಿಯು ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಕೆಲ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಭೇಟಿ ಪರಿಶೀಲನೆ ನಡೆಸಿದ್ದೇವೆ. ನಿಯಮಾನುಸಾರ ನಡೆದುಕೊಳ್ಳದ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿಮಾಡಿದ್ದು, ಹಾಸಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಡಲ್ ಅಧಿಕಾರಿಗಳು ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಲಿದ್ದು, ಆ ಬಳಿಕ ಇನ್ನಷ್ಟು ಹಾಸಿಗೆಗಳು ಲಭ್ಯವಾಗುವ ನಿರೀಕ್ಷೆ ಇದೆ’ ಎಂದರು. 

ಆಸ್ಪತ್ರೆಗಳಲ್ಲಿ ಸಹಾಯ ಕೇಂದ್ರ
ನಗರದ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ರೋಗಿಗಳ ಆರೋಗ್ಯ ಸ್ಥಿತಿ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಲು ಸಹಾಯ ಕೇಂದ್ರ ಆರಂಭಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

ಪ್ರತಿ ಆಸ್ಪತ್ರೆಗೂ ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಆದೇಶ ಹೊರಡಿಸಿದ್ದಾರೆ. ಸಹಾಯಕೇಂದ್ರಗಳನ್ನು ಆರಂಭಿಸುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ.

ಸುವರ್ಣ ಆರೋಗ್ಯ ಟ್ರಸ್ಟ್‌ ಮೂಲಕ ಸರ್ಕಾರಿ ಕೋಟಾಕ್ಕೆ ಹಂಚಿಕೆ ಆಗಿರುವ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಸೂಚಿಸಿದ ರೋಗಿಗಳೇ ದಾಖಲಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಅವರಿಗೆ ಸರಿಯಾದ ಚಿಕಿತ್ಸೆ ದೊರಕುವಂತೆ ನೋಡಿಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದೂ ಮುಖ್ಯ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

‘ರೋಗಿ ಬಿಡುಗಡೆಯಾದ ತಕ್ಷಣವೇ ಮಾಹಿತಿ ನೀಡಿ’
ಕೋವಿಡ್‌ ಚಿಕಿತ್ಸೆಗಾಗಿ ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವವರು ಗುಣಮುಖರಾಗಿ ಬಿಡುಗಡೆಯಾದ ‌ಕೂಡಲೇ ಆ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಪೋರ್ಟಲ್‌ನಲ್ಲಿ ದಾಖಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮಂಗಳವಾರ ಆದೇಶ ಮಾಡಿದ್ದಾರೆ.

ಸರ್ಕಾರಿ ಕೋಟಾದಡಿ ದಾಖಲಾದ ರೋಗಿಗಳು ಕಾಯಿಲೆ ವಾಸಿಯಾಗಿ ಮನೆಗೆ ಮರಳಿದ ಬಳಿಕವೂ, ಬಿಬಿಎಂಪಿ ವ್ಯಾಪ್ತಿಯ ಕೆಲವು ಖಾಸಗಿ ಆಸ್ಪತ್ರೆಗಳು ಈ ಕುರಿತ ನಿಖರ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಆಯಾ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ಮತ್ತು ಆರೋಗ್ಯ ಮಿತ್ರ ಸಿಬ್ಬಂದಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ಆದೇಶದಲ್ಲಿ ತಿಳಿಸಿರುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು