ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಸ್ವಾಗತದ ಫ್ಲೆಕ್ಸ್ ತೆರವಿಗೆ ಕಾಲಾವಕಾಶ

16 ಸಾವಿರ ಫ್ಲೆಕ್ಸ್ ತೆರವುಗೊಳಿಸಿದ ಬಿಬಿಎಂಪಿ l 1 ವಾರದಲ್ಲಿ ಫ್ಲೆಕ್ಸ್ ತೆಗೆಯದಿದ್ದರೆ ಪ್ರಕರಣ ದಾಖಲು
Last Updated 24 ಜೂನ್ 2022, 9:57 IST
ಅಕ್ಷರ ಗಾತ್ರ

ಬೆಂಗಳೂರು: ‍ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಲು ಹಾಕಿದ್ದ ಫ್ಲೆಕ್ಸ್‌ಗಳ ತೆರವಿಗೆ ಒಂದು ವಾರ ಕಾಲಾವಕಾಶವನ್ನು ಬಿಬಿಎಂಪಿ ನೀಡಿದೆ. ಅಲ್ಲದೇ 16 ಸಾವಿರ ಫ್ಲೆಕ್ಸ್‌ಗಳನ್ನು ಪಾಲಿಕೆಯೇ ತೆರವುಗೊಳಿಸಿದೆ.

ನಗರದಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿದ್ದು, ಅದಾದ ನಂತರ ಯಾವುದೇ ಫ್ಲೆಕ್ಸ್ ಅಳವಡಿಕೆಗೆ ಬಿಬಿಎಂಪಿ ಅನುಮತಿ ನೀಡುತ್ತಿಲ್ಲ. ಆದರೂ, ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ಅವರು ಸಂಚರಿಸಿದ ರಸ್ತೆಗಳಲ್ಲಿ ಸಾವಿರಾರು ಫ್ಲೆಕ್ಸ್‌, ಬಂಟಿಂಗ್‌ಗಳು ರಾರಾಜಿಸಿದವು.

ಯಾರ ವಿರುದ್ಧವೂ ಪ್ರಕರಣ ದಾಖಲಿಸದ ಬಿಬಿಎಂಪಿ ಈಗ, ಅವುಗಳ ತೆರವಿಗೆ ಒಂದು ವಾರ ಕಾಲಾವಕಾಶ ನೀಡಿದೆ. ‘ಹೈಕೋರ್ಟ್‌ ಆದೇಶದ ಪ್ರಕಾರ ಫ್ಲೆಕ್ಸ್ ಅಳವಡಿಕೆ ನಿಷೇಧ. ಅನಿವಾರ್ಯ ಸಂದರ್ಭದಲ್ಲಿ ವಿನಾಯಿತಿ ನೀಡಬೇಕಾಗುತ್ತದೆ. ತೆರವುಗೊಳಿ
ಸಬೇಕು ಎಂದು ಜೂನ್ 18ರಂದೇ ಆದೇಶ ಹೊರಡಿಸಿದ್ದೇವೆ. ಒಂದು ವಾರದಲ್ಲಿ ತೆರವುಗೊಳಿಸದಿದ್ದರೆ
ಪ್ರಕರಣ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

‘ಪ್ರಧಾನಿ ಬಂದಿದ್ದ ಕಾರ್ಯಕ್ರಮ ಎಂಬ ಕಾರಣಕ್ಕೆ ಫ್ಲೆಕ್ಸ್ ಹಾಕಲು ಪಾಲಿಕೆ ಯಾರಿಗೂ ಅನುಮತಿ ನೀಡಿಲ್ಲ, ನೀಡುವ ಪ್ರಶ್ನೆಯೂ ಇಲ್ಲ. ಏಕಾಏಕಿ ಪ್ರಕರಣ ದಾಖಲಿಸುವ ಬದಲು ಕಾಲಾವಕಾಶ ನೀಡುವುದು ಸೂಕ್ತ. ವಾರದಲ್ಲಿ ತೆರವುಗೊಳಿಸದಿದ್ದರೆ ಅದರಲ್ಲಿರುವ ಹೆಸರುಗಳನ್ನು ಆಧರಿಸಿ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದರು.

‘ಬೇರೆ ಪಕ್ಷದವರು ಫ್ಲೆಕ್ಸ್ ಹಾಕಿದರೆ ಒಂದು ವಾರ ಕಾಲಾವಕಾಶ ನೀಡಲಾಗುವುದೇ’ ಎಂಬ ಪ್ರಶ್ನೆಗೆ, ‘ಇಲ್ಲ, ಯಾರಿಗೂ ಅವಕಾಶ ನೀಡುವುದಿಲ್ಲ. ವಿಶೇಷ ಸಂದರ್ಭ ಆಗಿದ್ದರಿಂದ ವಿನಾಯಿತಿ ನೀಡಬೇಕಾಗುತ್ತದೆ’ ಎಂದರು.

ಪ್ರಧಾನಿ ಹಾದು ಹೋದ ರಸ್ತೆ: 3 ವರ್ಷ ವೈಟ್‌ಟಾಪಿಂಗ್ ಇಲ್ಲ

‘ಪ್ರಧಾನಿ ಅವರು ಹಾದು ಹೋದ 14 ಕಿಲೋ ಮೀಟರ್ ರಸ್ತೆಯಲ್ಲಿ ಮೂರು ವರ್ಷಗಳ ಕಾಲ ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.

‘ಪ್ರಧಾನಿ ಅವರು ಬರುವ ದಾರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ತುರ್ತು ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದ ರಸ್ತೆಗಳೂ ಇದರಲ್ಲಿವೆ. ವೈಟ್‌ಟಾಪಿಂಗ್ ಕಾಮಗಾರಿ ತುರ್ತಾಗಿ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಡಾಂಬರ್ ಹಾಕಲಾಗಿದೆ’ ಎಂದರು.

ಮಳೆಯ ನಡುವೆ ಕಾಮಗಾರಿ ನಿರ್ವಹಿಸಿದ್ದರಿಂದ ಒಂದು ಕಡೆ ಗುಣಮಟ್ಟ ಸರಿ ಇಲ್ಲ ಎಂಬ
ದೂರು ಇದೆ. ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT