ಮಂಗಳವಾರ, ಆಗಸ್ಟ್ 3, 2021
28 °C

ಮುಂಗಾರು ಚುರುಕು: ಬೆಂಗಳೂರಿನಲ್ಲಿ ಜೋರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಂಗಾರು ಬಿರುಸು ಪಡೆದಿರುವುದರಿಂದ ಹಾಗೂ ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ನಗರದ ಹಲವೆಡೆ ಬುಧವಾರ ಜೋರು ಮಳೆ ಸುರಿಯಿತು.

ನಸುಕಿನಿಂದಲೇ ನಗರದ ಹಲವು ಭಾಗಗಳಲ್ಲಿ ಜಿಟಿಜಿಟಿ ಮಳೆ ಶುರುವಾಗಿತ್ತು. ದಿನವಿಡೀ ಮೋಡ ಕವಿದ ವಾತಾವರಣದಲ್ಲೇ ಸುರಿಯುತ್ತಿದ್ದ ಮಳೆ ಆಗಾಗ ಬಿಡುವು ಪಡೆಯುತ್ತಿತ್ತು.

ಕೆಂಪೇಗೌಡ ಬಸ್‌ ನಿಲ್ದಾಣ, ಮಲ್ಲೇಶ್ವರ, ರಾಜಾಜಿನಗರ, ಗಾಂಧಿನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಪಟ್ಟೇಗಾರ ಪಾಳ್ಯ, ರಾಜಾಜಿನಗರ, ಸುಮನಹಳ್ಳಿ, ನಾಗರಬಾವಿ, ಜಾಲಹಳ್ಳಿ, ಹೆಸರಘಟ್ಟ, ರಾಜಾನುಕುಂಟೆ, ಯಶವಂತಪುರ, ಬಸವೇಶ್ವರ ನಗರ, ಹೆಬ್ಬಾಳ, ಹೊರಮಾವು, ಕೆ.ಆರ್.ಪುರ, ವರ್ತೂರು, ಬೆಳ್ಳಂದೂರು, ಬೊಮ್ಮನಹಳ್ಳಿ, ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ಸಾರಕ್ಕಿ, ಜ್ಞಾನಭಾರತಿ, ಕೊಡಿಗೇಹಳ್ಳಿ, ಮನೋರಾಯನಪಾಳ್ಯ, ಬಿಳೇಕಹಳ್ಳಿ, ಸಂಪಂಗಿರಾಮನಗರ ಸೇರಿದಂತೆ ಹಲವು ಭಾಗಗಳಲ್ಲಿ ಕೆಲ ಕಾಲ ಮಳೆ ಆರ್ಭಟಿಸಿತು. 

ವಿದ್ಯಾಪೀಠದಲ್ಲಿ 5 ಸೆಂ.ಮೀ ಮಳೆ ದಾಖಲಾಗಿದೆ. ರಾಜರಾಜೇಶ್ವರಿ ನಗರ, ಹಂಪಿ ನಗರ, ವರ್ತೂರು, ಕೆಂಗೇರಿ, ಎಚ್‌ಎಎಲ್ ವಿಮಾನ ನಿಲ್ದಾಣ ಸೇರಿದಂತೆ ಸರಾಸರಿ 2 ಸೆಂ.ಮೀ ಮಳೆ ದಾಖಲಾಗಿದೆ. ಸಂಜೆ 5ರಿಂದ 7ರವರೆಗೆ ಕೆಲವೆಡೆ ಜೋರು ಮಳೆಯಾಯಿತು.

ಶೇಷಾದ್ರಿಪುರದಲ್ಲಿ ಸುರಿದ ಮಳೆಯಿಂದಾಗಿ ಮರದ ಕೊಂಬೆಯೊಂದು ಆಟೊ ರಿಕ್ಷಾ ಮೇಲೆ ಉರುಳಿ, ಸ್ವಲ್ಪ ಹಾನಿಯಾಯಿತು. ಪೊಲೀಸರು ಸ್ಥಳೀಯರ ನೆರವಿನಿಂದ ಕೊಂಬೆ ತೆರವು ಮಾಡಿದರು. ತಾಜ್‌ ವೆಸ್ಟ್‌ಎಂಡ್ ಹೋಟೆಲ್‌ನ ತಡೆಗೋಡೆ ಬಳಿ ರಸ್ತೆ ಮೇಲೆ ಉರುಳಿದ್ದ ಮರದ ಕೊಂಬೆಯನ್ನು ಹೋಟೆಲ್ ಸಿಬ್ಬಂದಿ ತೆರವುಗೊಳಿಸಿದರು.

‘ನಗರದಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಸಹಿತ ಮಳೆ ಮುಂದುವರಿಯಲಿದೆ. ಕೆಲವೆಡೆ ಜೋರು ಮಳೆಯಾಗುವ ಸಾಧ್ಯತೆಯೂ ಇದೆ’ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು