ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುನಿರತ್ನ ಹೇಳಿಕೆ ಖಂಡಿಸಿ ಪ್ರತಿಭಟನೆ

30ರೊಳಗೆ ಬಿಜೆಪಿಯಿಂದ ಉಚ್ಚಾಟನೆ ಮಾಡಿ, ಆಸ್ತಿ ಮುಟ್ಟುಗೋಲಿಗೆ ಆಗ್ರಹ
Published : 1 ಅಕ್ಟೋಬರ್ 2024, 16:00 IST
Last Updated : 1 ಅಕ್ಟೋಬರ್ 2024, 16:00 IST
ಫಾಲೋ ಮಾಡಿ
Comments

ಬೆಂಗಳೂರು: ದಲಿತ, ಒಕ್ಕಲಿಗ ಸಮುದಾಯಗಳು ಹಾಗೂ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಒಕ್ಕೂಟ–ಕರ್ನಾಟಕದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಕೇಂದ್ರದಲ್ಲಿ ಭಾರತ ಮಾತಾ ಕೀ ಜೈ ಎನ್ನುವ ಪಕ್ಷ ಆಡಳಿತ ನಡೆಸುತ್ತಿದೆ. ಆದರೆ, ದೇಶದಲ್ಲಿ ಭಾರತ ಮಾತೆಯ ಸ್ಥಿತಿ ಚಿಂತಾಜನಕವಾಗಿದೆ. ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿ ಮುನಿರತ್ನ ಅವರಿಂದ ರಾಜೀನಾಮೆ ಪಡೆದುಕೊಳ್ಳುತ್ತಿಲ್ಲ’ ಎಂದು ಟೀಕಿಸಿದರು.

‘ನಮ್ಮ ದುಡ್ಡು, ನಮ್ಮ ಬಂಗಲೆ, ನಮ್ಮ ಸಂಬಳ, ಪಡೆಯುವ ರಾಜ್ಯಪಾಲರು ಇಂತಹ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಟಿಸ್‌ ನೀಡಬೇಕಿತ್ತು. ಆದರೆ, ಅವರು ಒಂದು ಪಕ್ಷದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮಹಿಳೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದವನನ್ನು ಕೇಶವಕೃಪಾ, ನಾಗ್ಪುರ ಹೇಗೆ ಸಹಿಸಿಕೊಳ್ಳುತ್ತಿದೆ? ನಾಗ್ಪುರದ ಕಾರ್ಖಾನೆ ಇಂತಹವರನ್ನು ತಯಾರಿಸುತ್ತಿದೆಯೆ’ ಎಂದು ಪ್ರಶ್ನಿಸಿದರು.

‘ಮುನಿರತ್ನ ಅವರನ್ನು ಇದೇ 30ರೊಳಗೆ ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು. ಸರ್ಕಾರ ಇವರನ್ನು ರಾಜ್ಯದಿಂದ ಗಡೀಪಾರು ಮಾಡಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ಡಾ. ರಂಗನಾಥ್, ಶ್ರೀನಿವಾಸ್, ವಿಧಾನ ಪರಿಷತ್ತಿನ ಸದಸ್ಯರಾದ ಸುಧಾಮ ದಾಸ್, ಎಸ್. ರವಿ, ಒಕ್ಕೂಟದ ಮಾವಳ್ಳಿ ಶಂಕರ್, ಬಿ. ಗೋಪಾಲ್, ಹೆಣ್ಣೂರು ಶ್ರೀನಿವಾಸ್, ಬಸವರಾಜ್ ಕೌತಾಳ್, ಚಿತ್ರನಟ ಶ್ರೀನಗರ ಕಿಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಕೇಂದ್ರ ಸಚಿವರ ವಿರದ್ಧ ಕಪ್ಪು ಬಾವುಟ ಪ್ರದರ್ಶನ’

‘ಒಬ್ಬ ತುಚ್ಛ ವ್ಯಕ್ತಿಯ ಬಗ್ಗೆ ಹೆಚ್ಚು ಮಾತನಾಡಿದರೆ ಅವನನ್ನು ವೈಭವೀಕರಿಸಿದಂತೆ ಆಗುತ್ತದೆ. ಮುನಿರತ್ನನ ವಿರುದ್ಧ ಬಿಜೆಪಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಬರುವ ಕೇಂದ್ರ ಸಚಿವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುತ್ತದೆ. ವಿಧಾನಸಭೆಯಲ್ಲಿ ಈ ಕುರಿತು ಧ್ವನಿ ಎತ್ತಲಾಗುವುದು’ ಎಂದು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಹೇಳಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ನಡೆದ ಗಣೇಶ ಮೂರ್ತಿಗೆ ಸಂಬಂಧಿಸಿದ ಘಟನೆಯನ್ನು ಹರಿಯಾಣ ಚುನಾವಣೆಯಲ್ಲಿ ಪ್ರಸ್ತಾಪಿಸಿದರು. ಆದರೆ ಸ್ವಪಕ್ಷದ ಮುಖಂಡರೊಬ್ಬರು ಮಹಿಳೆಯರು ಮತ್ತು ಸಮುದಾಯಗಳ ಬಗ್ಗೆ ನೀಡಿದ ಕೀಳು ಮಟ್ಟದ ಹೇಳಿಕೆಯನ್ನು ಖಂಡಿಸುತ್ತಿಲ್ಲ’ ಎಂದು ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT