ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಂತ್ರ ಸ್ಥಿತಿ’ಯಲ್ಲಿ ನಿವೇಶನದಾರರು: ಮನೆ ನಿರ್ಮಾಣಕ್ಕೆ ‘ಜೌಗು’ ಅಡ್ಡಿ

ದೊರೆಯದ ಬದಲಿ ನಿವೇಶನ
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಬ್ಲಾಕ್‌ 1 ಎಲ್‌ ಹಾಗೂ ಬ್ಲಾಕ್‌ 2 ಎ, ಬಿ ಹಾಗೂ ಎಚ್‌ ಸೆಕ್ಟರ್‌ನಲ್ಲಿ ನಿವೇಶನ ಖರೀದಿಸಿದ್ದ 700ಕ್ಕೂ ಹೆಚ್ಚು ಮಂದಿಗೆ ಮನೆ ನಿರ್ಮಿಸಲು ‘ಜೌಗು ಪ್ರದೇಶ’ ಅಡ್ಡಿಯಾಗಿದೆ.‌

ಏಳು ವರ್ಷಗಳ ಹಿಂದೆ ನಿವೇಶನ ಖರೀದಿಸಿದ್ದರೂ, ಆ ಬ್ಲಾಕ್‌ಗಳಲ್ಲಿ ಮನೆ ನಿರ್ಮಿಸಲು ಸಾಧ್ಯವಾಗದೇ ನಿವೇಶನದಾರರು ‘ಅತಂತ್ರ ಸ್ಥಿತಿ’ಗೆ ತಲುಪಿದ್ದಾರೆ. ಇತ್ತ ಬದಲಿ ನಿವೇಶನ ದೊರೆಯುತ್ತಿಲ್ಲ; ಅತ್ತ ಖರೀದಿಸಿದ ನಿವೇಶನಗಳ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

2016ರಲ್ಲಿ ಕೆಂಪೇಗೌಡ ಬಡಾವಣೆಯ ಕನ್ನಳ್ಳಿ ಬಳಿ, ಎರಡು ಕೆರೆಗಳ ನಡುವೆ 40 ಪ್ರದೇಶದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಿವಿಧ ಸೆಕ್ಟರ್‌ ವಿಂಗಡಿಸಿ ವಸತಿ ಪ್ರದೇಶ ನಿರ್ಮಿಸಿತ್ತು. ಅದೇ ವರ್ಷದಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ನಿವೇಶನ ಹಂಚಿಕೆಯಾದ ವರ್ಷ ಮಳೆ ಕಡಿಮೆಯಿತ್ತು. ನಿವೇಶನ ಖರೀದಿಗೂ ಪೈಪೋಟಿ ಏರ್ಪಟಿತ್ತು.

ಅದಾದ ಮರು ವರ್ಷವೇ ಹೆಚ್ಚು ಮಳೆ ಸುರಿದು ಸಮಸ್ಯೆ ಗೋಚರಿಸಿತು. ಈ ಬ್ಲಾಕ್‌ಗಳ 700 ನಿವೇಶನಗಳ ಬಹುತೇಕ ಸ್ಥಳಗಳಲ್ಲಿ ನೀರಿನ ಪಸೆ ಉಕ್ಕುತ್ತಿದ್ದು, ಈ ಭಾಗದಲ್ಲಿ ನಿವೇಶನ ದೊರೆತವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ಕಪಕ್ಕದ ಬ್ಲಾಕ್‌ಗಳಲ್ಲಿ ಕಟ್ಟಡಗಳು ತಲೆಯೆತ್ತಿದ್ದರೂ ಇವರಿಗೆ ಮಾತ್ರ ಮನೆ ನಿರ್ಮಾಣದ ಕನಸು ಮರೀಚಿಕೆಯಾಗಿದೆ.

‘ಕಳೆದ ವರ್ಷದ ಮುಂಗಾರು ಅವಧಿಯಲ್ಲಿ ಮಳೆ ಕಡಿಮೆ ಆಗಿತ್ತು. ತೇವಾಂಶ ಕಡಿಮೆ ಆಗಬಹುದು ಎಂದೇ ಭಾವಿಸಿದ್ದೆವು. ಆದರೆ, ಗುಂಡಿ ತೆಗೆದರೆ ತೇವಾಂಶ ಇರುವುದು ಕಂಡುಬರುತ್ತಿದೆ. ಅಲ್ಲಲ್ಲಿ ನೀರು ಉಕ್ಕಿ ಹರಿಯುತ್ತಿದೆ’ ಎಂದು ನಿವೇಶನದಾರರು ಅಳಲು ತೋಡಿಕೊಳ್ಳುತ್ತಾರೆ.

ಮೆಟಲಿಂಗ್‌ ತಂತ್ರಜ್ಞಾನವೂ ಆಗಿಲ್ಲ: ‘ಬಿಡಿಎ ಎಂಜಿನಿಯರಿಂಗ್‌ ತಂಡ, ಆಸ್ಟ್ರೇಲಿಯಾದ ಕಂಪನಿಯನ್ನು ಸಂಪರ್ಕಿಸಿ ಜೌಗು ತಡೆಗೆ ಶೀಟ್‌ ಮೆಟಲಿಂಗ್ ತಂತ್ರಜ್ಞಾನ ಮಾದರಿ ಮಾಹಿತಿ ಪಡೆದುಕೊಂಡಿತ್ತು. ತಂತ್ರಜ್ಞಾನದ ಮೂಲಕ ಎರಡು ಕೆರೆಯ ಏರಿಗೆ ಸಮಾನವಾಗಿ 30 ಅಡಿ ಆಳಕ್ಕೆ ಗುಂಡಿ ತೆಗೆದು ಗೋಡೆ ನಿರ್ಮಿಸಲು ಚಿಂತಿಸಲಾಗಿತ್ತು. ಅದು ಸಹ ನನೆಗುದಿಗೆ ಬಿದ್ದಿದೆ’ ಎಂದು ಮೂಲಗಳು ಹೇಳುತ್ತವೆ.

ಬದಲಿ ನಿವೇಶನವೂ ಮರೀಚಿಕೆ: ‘ಎಸ್‌.ಆರ್‌.ವಿಶ್ವನಾಥ್‌ ಅವರು ಬಿಡಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಸಭೆಯಲ್ಲಿ ಈ ಬ್ಲಾಕ್‌ಗಳಲ್ಲಿ ಮನೆ ನಿರ್ಮಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಆ ಪ್ರದೇಶವನ್ನು ಉದ್ಯಾನ ಅಥವಾ ಆಟದ ಮೈದಾನಕ್ಕೆ ಬಳಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು. ಜೊತೆಗೆ ಬದಲಿ ನಿವೇಶನ ನೀಡುವ ಭರವಸೆ ನೀಡಲಾಗಿತ್ತು. ಬಡಾವಣೆ ನಿರ್ಮಾಣಕ್ಕೆ ಬಿಡಿಎ ₹60 ಕೋಟಿಗೂ ಅಧಿಕ ಹಣ ವ್ಯಯಿಸಿದ್ದರಿಂದ 2020–21ರಲ್ಲೇ ಬದಲಿ ನಿವೇಶನ ನೀಡುವ ಪ್ರಕ್ರಿಯೆ ಕೈಬಿಡಲಾಗಿದೆ’ ಎಂದು ಮೂಲಗಳ ಹೇಳಿವೆ.

Quote - ₹54 ಲಕ್ಷ ನೀಡಿ ನಿವೇಶನ ಖರೀದಿಸಿದ್ದೆ. ಬ್ಯಾಂಕ್‌ನಿಂದ ಸಾಲ ಮಾಡಿ ಖರೀದಿಸಿದ್ದ ನಿವೇಶನದಲ್ಲಿ ಇದುವರೆಗೂ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಬ್ಯಾಂಕ್‌ನಲ್ಲಿ ಬಡ್ಡಿ ಬೆಳೆಯುತ್ತಿದೆ. ಅಭಿಷೇಕ್‌ ಬ್ಲಾಕ್‌ ‘ಎ’ ಸೆಕ್ಟರ್‌

‘ತಜ್ಞರ ವರದಿ ಆಧರಿಸಿ ಕ್ರಮ’

ಮೇಲ್ಭಾಗದಲ್ಲೇ ಕಲ್ಲು ಸಿಗುತ್ತಿದ್ದು ನೀರು ಕೆಳಕ್ಕೆ ಇಳಿಯುತ್ತಿಲ್ಲ. ಕೆರೆಗಳ ಬಳಿ ತಡೆಗೋಡೆ ನಿರ್ಮಾಣ ಸಹ ಅಷ್ಟು ಪರಿಣಾಮಕಾರಿ ಆಗುವುದಿಲ್ಲ. ಆಳವಾದ ಚರಂಡಿ ತೆಗೆದು ನೀರು ಹರಿಯುವಂತೆ ಮಾಡಿದರೆ ತೇವಾಂಶ ಕಡಿಮೆ ಆಗಬಹುದು. ಐಐಎಸ್‌ಸಿ ತಜ್ಞರು ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ತಿಂಗಳು ತಜ್ಞರ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ಬಿಡಿಎ ಎಂಜಿನಿಯರ್‌ ಸದಸ್ಯ ಶಾಂತರಾಜನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಅವೈಜ್ಞಾನಿಕ ಯೋಜನೆ’‌

‘ಎರಡು ಕೆರೆಯ ನಡುವೆ ಖಾಲಿಯಿದ್ದ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಬಡಾವಣೆ ನಿರ್ಮಿಸಲಾಗಿದೆ. ರೈತರಿಂದ ಭತ್ತದ ಗದ್ದೆ ಖರೀದಿಸಿ ನಿವೇಶನ ಹಂಚಿಕೆ ಮಾಡಿದ್ದೇ ಸಮಸ್ಯೆಗೆ ಕಾರಣವಾಗಿದೆ. ಬಿಡಿಎ ಕಡೆಯಿಂದ ಸಮರ್ಪಕ ಉತ್ತರ ಲಭಿಸುತ್ತಿಲ್ಲ’ ಎಂದು ಬ್ಲಾಕ್‌ 2 ‘ಎ’ ಸೆಕ್ಟರ್‌ನಲ್ಲಿ ನಿವೇಶನ ಖರೀದಿಸಿರುವ ಅನಿತಾ ದೂರುತ್ತಾರೆ. ‘2017ರಲ್ಲಿ ನಿವೇಶನದ ಮೇಲೆ ಸಾಲ ಪಡೆದಿದ್ದೇವೆ. ಮನೆ ಕಟ್ಟಲು ಸಾಧ್ಯವಾಗದ್ದರಿಂದ ‘ಗೃಹ ಸಾಲ’ ವೈಯಕ್ತಿಕ ಸಾಲವಾಗಿ ಬದಲಾಗಿದೆ. ಬಡ್ಡಿ ದರ ಹೆಚ್ಚುತ್ತಿದೆ’ ಎಂದು ಹೇಳಿದರು.

ವೇಶನದಾರರ ಅಳಲು ಏನು?

* 2017ರಲ್ಲೇ ಬಡಾವಣೆ ಸಮಸ್ಯೆ ಬಗ್ಗೆ ಬಿಡಿಎ ಗಮನಕ್ಕೆ ಬಂದಿದ್ದರೂ ಇತ್ಯರ್ಥವಾಗಿಲ್ಲ.

* ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಮಾರ್ಗದರ್ಶನ ಪಡೆದು ಹಲವು ತಿಂಗಳು ಕಳೆದರೂ ಪರಿಹಾರ ಕಾಮಗಾರಿ ಆರಂಭಿಸಿಲ್ಲ.

* ಅರ್ಜಿ ಸಮಿತಿ ಸ್ಥಳಕ್ಕೆ ಭೇಟಿ ನೀಡಿದಾಗ ಅಧಿಕಾರಿಗಳು ನೀಡಿದ್ದ ಆಶ್ವಾಸನೆಯೂ ಈಡೇರಿಲ್ಲ.

* ಕೆಂಪೇಗೌಡ ಬಡಾವಣೆಯ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ತೀರಾ ಸಡಿಲವಾದ ಮಣ್ಣಿದೆ.

* ನಿವೇಶನಗಳಲ್ಲಿ 4 ಅಡಿ ಮಣ್ಣು ತೆಗೆದರೂ ನೀರು ಬರುತ್ತಿದ್ದು ರಸ್ತೆ ವಿದ್ಯುತ್‌ ಸಂಪರ್ಕ ಮೂಲಸೌಕರ್ಯ ಕಲ್ಪಿಸಲು ತೊಡಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT