ಶುಕ್ರವಾರ, ಮಾರ್ಚ್ 24, 2023
30 °C

‘ಪರಿಸರ ಸಂರಕ್ಷಣೆ ಆಧರಿತ ಅಭಿವೃದ್ಧಿ ಅಗತ್ಯ’: ಉಲ್ಲಾಸ ಕಾರಂತ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಲನದಿಂದ ಮಾತ್ರ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆ ಕೂಡ ಸಾಧ್ಯವಾಗುತ್ತದೆ’ ಎಂದು ವನ್ಯಜೀವಿ ವಿಜ್ಞಾನಿ ಉಲ್ಲಾಸ ಕಾರಂತ ತಿಳಿಸಿದರು.

ಅನಂತ ಕುಮಾರ್ ಪ್ರತಿಷ್ಠಾನವು ಆಯೋಜಿಸಿದ್ದ ‘ದೇಶ ಮೊದಲು’ ವೆಬಿನಾರ್ ಸಂವಾದದ ಎರಡನೇ ಸರಣಿ ಉದ್ಘಾಟಿಸಿದ ಅವರು, ‘ಅಭಿವೃದ್ಧಿ ಹಾಗೂ ಸಂರಕ್ಷಣೆಯಲ್ಲಿ ಸಮತೋಲನ–ನೀತಿ ನಿರೂಪಣೆಯಲ್ಲಿ ವೈಜ್ಞಾನಿಕ ವಿಧಾನದ ಬಳಕೆ’ ಎಂಬ ಕುರಿತು ಮಾತನಾಡಿದರು. 

‘ಅಭಿವೃದ್ಧಿ ಹಾಗೂ ಪರಿಸರ ಒಂದಕ್ಕೊಂದು ಪೂರಕವಾಗಿವೆ. ಅಭಿವೃದ್ಧಿಯೊಂದಿಗೆ ಪರಿಸರ  ಸಂರಕ್ಷಣೆಯೂ ಸಾಧ್ಯವಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಅಭಿವೃದ್ದಿ ಚಟುವಟಿಕೆಗಳು ಹಾಗೂ ಕೈಗಾರೀಕರಣ ಕಡಿಮೆ ಮಾಡುವುದರಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎನ್ನುವ ವಾದ ಸರಿಯಲ್ಲ’ ಎಂದರು. 

‘ಅರಣ್ಯ, ಪರಿಸರ ಸಂರಕ್ಷಣೆಯೆನ್ನುವುದು ಅಭಿವೃದ್ಧಿಗೆ ವಿರೋಧಿಯಲ್ಲ. ಸರಿಯಾದ ತರ್ಕ ಹಾಗೂ ವಿಜ್ಞಾನಗಳನ್ನು ಬಳಸಿ, ಸಕಾರಣವಾಗಿ ಯೋಜನೆಗಳನ್ನು ರೂಪಿಸಿದಾಗ ಮಾತ್ರ ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿದೆ. ಶೇ 2 ರಷ್ಟು ಭೂಪ್ರದೇಶದಲ್ಲಿ ಉಳಿದುಕೊಂಡಿರುವ ಜೀವವೈವಿಧ್ಯ ಪ್ರದೇಶಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶಪಡಿಸುವ ಹುನ್ನಾರವನ್ನು ಮಾತ್ರ ವಿರೋಧಿಸಬೇಕಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆಯನ್ನು ಪ್ರೋತ್ಸಾಹಿಸುವ ಬದಲು ಹೆಚ್ಚಿನ ನೈಸರ್ಗಿಕ ಸಂಪತ್ತು ಇಲ್ಲದಿರುವ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಿದರೆ ಪರಿಸರದ ಮೇಲೆ ಒತ್ತಡ ಬೀಳುವುದಿಲ್ಲ’ ಎಂದು ತಿಳಿಸಿದರು.

ನೈಸರ್ಗಿಕ ಸಂಪತ್ತು ನಾಶ: ವೈಲ್ಡ್ ಲೈಫ್ ಫಸ್ಟ್‌ನ ಸಹ ಸಂಸ್ಥಾಪಕ ಪ್ರವೀಣ್ ಭಾರ್ಗವ್‌, ‘ನೈಸರ್ಗಿಕ ಸಂರಕ್ಷಿತ ಪ್ರದೇಶಗಳಿಗೆ ಹೊಂದಿಕೊಂಡು ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಯೋಜನೆ ರೂಪಿಸುವ  ಅವಶ್ಯಕತೆಯಿದೆ. ಇಲ್ಲವಾದಲ್ಲಿ ನೈಸರ್ಗಿಕ ಸಂಪತ್ತು ನಾಶವಾಗಲಿದೆ. ಅರಣ್ಯೀಕರಣದ ಕಾರ್ಯಕ್ರಮಕ್ಕೆ ಸಿಗುತ್ತಿರುವ ಹೆಚ್ಚಿನ ಅನುದಾನದಿಂದ ದೇಶದಲ್ಲಿ ನೈಸರ್ಗಿಕ ಅರಣ್ಯ ಸಂಪತ್ತು ಹಾಳಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕುದುರೆಮುಖದ ದಟ್ಟ ಶೋಲಾ ಅರಣ್ಯಗಳನ್ನು ಕಡಿಮೆ ಗುಣಮಟ್ಟದ ಕಬ್ಬಿಣದ ಅದಿರಿಗಾಗಿ ಕಡಿದಿರುವುದು ಪ್ರಮಾದ. ಅಕೇಶಿಯಾ ಗಿಡಗಳನ್ನು ನೆಟ್ಟು ಹಸಿರೀಕರಣ ಮಾಡಿರುವುದಾಗಿ ತೋರ್ಪಡಿಸಿಕೊಳ್ಳುವುದು ಕೂಡ  ಹಾಸ್ಯಾಸ್ಪದ. ದಟ್ಟ ಮಳೆಗಾಡುಗಳನ್ನು ನಾಶಪಡಿಸಿ, ನೆಡುತೋಪುಗಳನ್ನು ಬೆಳೆಸುವುದರಿಂದ ಜೀವವೈವಿಧ್ಯವನ್ನು ಸೃಷ್ಟಿಸಲಾಗದು. ಅಭಿವೃದ್ದಿಯ ಜೊತೆಯಲ್ಲಿಯೇ ಸಂರಕ್ಷಣೆಯ ಯೋಜನೆಯನ್ನೂ  ಸಮರ್ಪಕವಾಗಿ ಅನುಷ್ಠಾನ ಮಾಡಬೇಕು’ ಎಂದರು.

***

ಅಭಿವೃದ್ಧಿ ಮತ್ತು ಪರಿಸರ ಎರಡೂ ಪರಸ್ಪರ ಪೂರಕವಾಗಿ<br/>ರಬೇಕು. ಇವೆರಡರ ಸಮ್ಮಿಲನದಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಹಾಗೂ ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಸಾಧ್ಯ

- ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು