ಭಾನುವಾರ, ಆಗಸ್ಟ್ 18, 2019
22 °C

ಕೆಎಸ್‌ಆರ್‌ಟಿಸಿ ಸಿಬ್ಬಂದಿ ರಜೆಗೆ ಆನ್‌ಲೈನ್ ವ್ಯವಸ್ಥೆ

Published:
Updated:

ಬೆಂಗಳೂರು: ಚಾಲಕ ಮತ್ತು ನಿರ್ವಾಹಕರು ಇನ್ನು ಮುಂದೆ ಆನ್‌ಲೈನ್‌ನಲ್ಲೇ ರಜೆ ಪಡೆದುಕೊಳ್ಳುವ ತಂತ್ರಾಂಶವನ್ನು ಕೆಎಸ್‌ಆರ್‌ಟಿಸಿ ಅಭಿವೃದ್ಧಿಪಡಿಸಿದೆ.

ಈ ಹಿಂದೆ ಕಿಯೋಸ್ಕ್‌ನಲ್ಲಿ ರಜೆ ಅರ್ಜಿ ಸಲ್ಲಿಸುವ ಅವಕಾಶ ಇತ್ತು. ಈಗ ಪ್ರತಿಯೊಬ್ಬ ಚಾಲಕ ಮತ್ತು ನಿರ್ವಾಹಕರಿಗೆ ಪ್ರತ್ಯೇಕ ಲಾಗಿನ್ ಐ.ಡಿ ನೀಡಲಾಗುತ್ತದೆ. ಮೊಬೈಲ್‌ ಫೋನ್‌ನಲ್ಲೂ ಈ ತಂತ್ರಾಂಶದ ಮೂಲಕ ಬೆಳಿಗ್ಗೆ 5ರಿಂದ ರಾತ್ರಿ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ರಜೆ ಮಂಜೂರಾದರೆ ಅದರ ಸಂದೇಶವೂ ಮೊಬೈಲ್‌ಗೆ ಬರಲಿದೆ.

ಒಟ್ಟು ಸಿಬ್ಬಂದಿಯಲ್ಲಿ ರಜೆ ಪಡೆಯುವವರ ಸಂಖ್ಯೆ ಶೇ 10ರಷ್ಟನ್ನು ಮೀರುವಂತಿಲ್ಲ. ಈ ಪೈಕಿ ‌ಶೇ 7ರಷ್ಟು ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ರಜೆ ಪಡೆಯಬಹುದು. ಉಳಿದ ಶೇ3ರಷ್ಟು ಸಿಬ್ಬಂದಿ ರಜೆಯನ್ನು ಅವಶ್ಯಕತೆ ಮತ್ತು ತುರ್ತು ಪರಿಸ್ಥಿತಿ ಪರಿಗಣಿಸಿ ಮಂಜೂರು ಮಾಡುವ ಅಧಿಕಾರವನ್ನು ಘಟಕದ ವ್ಯವಸ್ಥಾಪಕರು ಹೊಂದಿರುತ್ತಾರೆ. ಒಬ್ಬ ಸಿಬ್ಬಂದಿ ಒಂದು ತಿಂಗಳಲ್ಲಿ ಈ ವ್ಯವಸ್ಥೆಯಡಿ ಮೂರು ದಿನ ರಜೆ ಪಡೆಯಲು ಅವಕಾಶ ಇದೆ.

ಮುಷ್ಕರ ಅಥವಾ ಬಂದ್ ಸಂದರ್ಭದಲ್ಲಿ ಹೊರಡಿಸುವ ‘ಕೆಲಸವಿಲ್ಲದ ಅವಧಿಗೆ ಸಂಬಳವಿಲ್ಲ’ ಎಂಬ ಆದೇಶದನ್ವಯ ರಜೆ ರದ್ದುಪಡಿಸುವ ಅಧಿಕಾರ ಘಟಕ ವ್ಯವಸ್ಥಾಪಕರಿಗೆ ಇರುತ್ತದೆ.

ಈ ಆನ್‌ಲೈನ್ ವ್ಯವಸ್ಥೆಯನ್ನು ಎಲ್ಲಾ ಘಟಕಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಸೋಮವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Post Comments (+)