ಸೋಮವಾರ, ಜೂನ್ 21, 2021
21 °C
ಪಿಆರ್‌ಆರ್‌ಗಾಗಿ ಮರಗಳ ತೆರವು: 13,642 ಮರಗಳು ನೀಲಗಿರಿ ಜಾತಿಯವು * 11,417 ತೋಟಗಾರಿಕಾ ಸಸ್ಯಗಳು– ಬಿಡಿಎ ಸ್ಪಷ್ಟನೆ

ಪೆರಿಫೆರಲ್‌ ವರ್ತುಲ ರಸ್ತೆ: ಕಾಡು ಜಾತಿಯ 8,622 ಮರಗಳಷ್ಟೇ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಗೆ 33,838 ಮರಗಳನ್ನು ತೆರವುಗೊಳಿಸುವ ಬಗ್ಗೆ ಪರಿಸರ ಕಾರ್ಯಕರ್ತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪರಸರ ವಾದಿಗಳ ಆಕ್ರೋಶ ತಣ್ಣಗಾಗಿಸುವ ಪ್ರಯತ್ನ ನಡೆಸಿದೆ. ತೆರವಾಗುವ ಮರಗಳಲ್ಲಿ 8,622 ಮರಗಳು ಮಾತ್ರ ಕಾಡು ಜಾತಿಯವು ಎಂದು ಬಿಡಿಎ ಸ್ಪಷ್ಟೀಕರಣ ನೀಡಿದೆ.

ತೆರವಾಗುವ ಮರಗಳಲ್ಲಿ 13,642 ನೀಲಗಿರಿ ಮರಗಳು. ಉಳಿದ 157 ಮರಗಳು ಅಕೇಶಿಯಾ, ಬಾಗೆ, ಕುಕ್‌ಪೈನ್‌, ಸರ್ವೆ ಮತ್ತು ನುಗ್ಗೆ ಜಾತಿಯವರು, 11,417 ಮರಗಳು ತೆಂಗು, ಮಾವು, ಸಪೋಟ, ಸೀಬೆ, ಸೀತಾಫಲ, ಗೇರು, ಬಸವನಪಾದ, ಅಡಕೆ ಈಚಲು ಜಾತಿಯವು. ಉಳಿದವು ಮಾತ್ರ ಅರಳಿ, ಆಲ, ಪೀಲ, ಕದಂಬ, ಹತ್ತಿ, ಹುಣಸೆ, ಹಲಸು, ಹಿಪ್ಪೆ, ನೇರಳೆ, ಬೇವು ಮುಂತಾದ ಕಾಡು ಜಾತಿಯವು ಎಂದು ಬಿಡಿಎ ವಿವರಿಸಿದೆ. 

‘ಕಡಿಯುವ ಪ್ರತಿಯೊಂದು ಮರಕ್ಕೆ ಹತ್ತು ಮರಗಳ ಅನುಪಾತದಂತೆ ಒಟ್ಟು 3.38 ಲಕ್ಷ ಮರಗಳನ್ನು ನೆಟ್ಟು ಹಸಿರು ಪಟ್ಟಿ ಅಭಿವೃದ್ದಿಪಡಿಸಲಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ 5 ಮೀ. ವ್ಯಾಪ್ತಿಯನ್ನು ಮರಗಳನ್ನು ನೆಡುವುದಕ್ಕೆ ಮೀಸಲಿಟ್ಟಿದ್ದು, ಇಲ್ಲಿ 50,173 ಮರಗಳನ್ನು ನೆಡಬಹುದು. 2,077 ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ಉಳಿದ 2.88 ಲಕ್ಷ ಮರಗಳನ್ನು ಅರಣ್ಯ ಇಲಾಖೆಯ ಸಲಹೆಯಂತೆ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಹಾಗೂ ಹೊರಗಡೆ ನೆಡಲಾಗುತ್ತದೆ. ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೇ ₹9.37 ಕೋಟಿಯಷ್ಟು ಹಣ ವ್ಯಯಿಸಲಾಗುತ್ತದೆ. ರಸ್ತೆಯ ಇಕ್ಕೆಗಳಲ್ಲಿರುವ 5,861 ಸಂಖ್ಯೆಯ ಮರಗಳು ದಾಖಲಾಗಿದ್ದು, ನೀಲಗಿರಿಯನ್ನು ಹೊರತುಪಡಿಸಿ ಉಳಿದ ಸ್ಥಳೀಯ ಜಾತಿ ಮರಗಳನ್ನು ಉಳಿಸಿಕೊಳ್ಳಲು ಸಹ ಪ್ರಯತ್ನಿಸಲಾಗುವುದು’ ಎಂದು ಬಿಡಿಎ ತಿಳಿಸಿದೆ.

ಈ ಯೋಜನೆ ಕುರಿತು ಪರಿಸರವಾದಿಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಈ ಯೋಜನೆಯ ಸಮಗ್ರ ಮಾಹಿತಿಯನ್ನು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಎಚ್‌.ಆರ್‌.ಶಾಂತಾರಾಜಣ್ಣ ಬಿಡುಗಡೆ ಮಾಡಿದ್ದಾರೆ.

‘ರಸ್ತೆ ಕಾಮಗಾರಿಗೆ ಮುನ್ನ ಮರಗಳನ್ನು ಉಳಿಸಿಕೊಳ್ಳಲು, ಸ್ಥಳಾಂತರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ತಜ್ಞರ ಸಮಿತಿ ರಚಿಸಿ ಸಲಹೆ ಪಡೆಯಲಾಗುವುದು. ಯೋಜನೆಗೆ ಜಾರಕ ಬಂಡೆಕಾವಲ್ ಮೀಸಲು ಅರಣ್ಯದಲ್ಲಿ 10.12 ಹೆಕ್ಟೇರ್ ಬಳಸಲಾಗುತ್ತದೆ. ಅದಕ್ಕೆ ಪರ್ಯಾಯವಾಗಿ ಜಿಗಣಿ ಹೋಬಳಿಯ ಮಂಟಪ ಗ್ರಾಮದಲ್ಲಿ 14.60 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗುತ್ತದೆ. ಪರಿಸರದ ಮೇಲಿನ ದುಷ್ಪರಿಣಾಮ ತಗ್ಗಿಸಲು ಪರಿಸರ ನಿರ್ವಹಣಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದೂ ಬಿಡಿಎ ಸ್ಪಷ್ಟಪಡಿಸಿದೆ.

ಪಿಆರ್‌ಆರ್‌ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ‘ಪ್ರಜಾವಾಣಿ’ ಸರಣಿ ವರದಿಗಳ ಮೂಲಕ ಗಮನ ಸೆಳೆದಿತ್ತು.

‘ಆರು ಕೆರೆಗಳ ಬಳಿ ಮೇಲ್ಸೇತುವೆ’
ಈ ಯೋಜನೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಆರು ಕಡೆ ಕೆರೆಗಳಿದ್ದು, ಅವುಗಳಿಗೆ ಹಾನಿ ಆಗುವುದನ್ನು ತಪ್ಪಿಸಲು ಮೊದಲೇ ಎರಕ ಹೊಯ್ದ ರಚನೆಗಳನ್ನು ಬಳಸಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು’ ಎಂದು ಬಿಡಿಎ ತಿಳಿಸಿದೆ.

‘ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ 10.5 ಮೀ ಅಗಲದ ಸರ್ವಿಸ್‌ ರಸ್ತೆಯನ್ನು ನಿರ್ಮಿಸಲಾಗುವುದು. ಅಗತ್ಯ ಇರುವ ಕಡೆ ಕೆಳಸೇತುವೆಗಳನ್ನು ನಿರ್ಮಿಸಲಾಗುವುದು. ದನ, ವಾಹನಗಳು ಮತ್ತು ಪಾದಚಾರಿಗಳು ಹಾದು ಹೋಗಲು 14 ಸ್ಥಳಗಳಲ್ಲಿ ಕೆಳಸೇತುವೆ (ವಿಯುಪಿ) ನಿರ್ಮಿಸಲಾಗುತ್ತದೆ. ಕಾರ್ಯಾಚರಣೆಯ ಹಂತದಲ್ಲಿ ಪ್ರಾಣಿಗಳಿಗೆ ಹಾಗೂ ಜಾನುವಾರು ಸುರಕ್ಷಿತವಾಗಿ ಸಾಗಲು 7.5 ಮೀ ಅಗಲ ಮತ್ತು  1.5 ಮೀ ಅಗಲದ ಪಾದಚಾರಿ ಮಾರ್ಗವನ್ನು ಮುಚ್ಚಲ್ಪಟ್ಟ ಚರಂಡಿಯೊಂದಿಗೆ ನಿರ್ಮಿಸಲಾಗುತ್ತದೆ’ ಎಂದೂ ಹೇಳಿದೆ.

ಬಿಡಿಎ ವಾದ ಒಪ್ಪದ ಪರಿಸರ ಕಾರ್ಯಕರ್ತರು
ಬಿಡಿಎ ಬಿಡುಗಡೆ ಮಾಡಿರುವ ಮಾಹಿತಿಗೆ ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.

‘ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಹೊಸ ಅಧ್ಯಯನದ (ಇಐಎ) ಪ್ರಕಾರ ಪಿಆರ್‌ಆರ್‌ ಮಾರ್ಗದಲ್ಲಿ ಬದಲಾವಣೆಗಳಾಗಿವೆ. ಹಾಗಾಗಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯ ಸೆಕ್ಷನ್‌ 14ರ ಪ್ರಕಾರ ಈ ಇಐಎ ಅನೂರ್ಜಿತ.  ಕೆಆರ್‌ಡಿಸಿಎಲ್‌ ಕೈಗೆತ್ತಿಕೊಂಡ ರಸ್ತೆ ವಿಸ್ತರಣಾ ಕಾಮಗಾರಿಗಳು, ನಮ್ಮ ಮೆಟ್ರೊ ಯೋಜನೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ಗಳಿಂದ ಪಿಆರ್‌ಆರ್‌ ಮೇಲಾಗುವ ಪರಿಣಾಮಗಳ ಬಗ್ಗೆಯೂ ವಿಶ್ಲೇಷಣೆ ನಡೆಸಬೇಕಿತ್ತು’ ಎಂದು ಸಿಎಫ್‌ಬಿಯ ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆಯನ್ನು ವರ್ತುಲ ರಸ್ತೆ ಎಂದು ಬಿಡಿಎ ಹೇಳಿಕೊಂಡಿದೆ. ಆದರೆ, ಇಐಎ ವರದಿಯಲ್ಲಿ ಮಾದನಾಯಕನಹಳ್ಳಿ ಮತ್ತು ದೊಡ್ಡತೋಗೂರು ಮುಂತಾದ ಪ್ರದೇಶದಲ್ಲಿ ಭೂಸ್ವಾಧೀನ ನಡೆಸಿಲ್ಲ’ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು