ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳ ಜೊತೆಗೆ ಪೊಲೀಸರಿಗೂ ‘ಬಂಧನ’ದ ಬವಣೆ

ಕಬ್ಬಿಣದ ಕಂಬಿ ಕದ್ದ ಆರೋಪಿಗಳಿಬ್ಬರಿಗೆ ಕೊರೊನಾ *ಹೆಬ್ಬಗೋಡಿ ಠಾಣೆ , ಇನ್‌ಸ್ಪೆಕ್ಟರ್‌, ಎಸ್‌ಐ ಸೇರಿ 29 ಸಿಬ್ಬಂದಿಗೆ ಪ್ರತ್ಯೇಕವಾಸ
Last Updated 20 ಮೇ 2020, 17:56 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬಿಣ ಕದ್ದ ಆರೋಪಿಗಳನ್ನು ಬಂಧಿಸಿದ ತಪ್ಪಿಗೆ ಹೆಬ್ಬಗೋಡಿ ಠಾಣೆಯ ಪೊಲೀಸರು ‘ಬಂಧನ’ದ ಬವಣೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪೊಲೀಸರು ಬಂಧಿಸಿದ್ದ ಕಳವು ಆರೋಪಿಗಳಿಬ್ಬರಿಗೆ ಕೋವಿಡ್‌ 19 ಇರುವುದು ಧೃಡಪಟ್ಟಿದ್ದರಿಂದ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಕೆ.ಶೇಖರ್‌, ಎಸ್‌.ಐ ಶಂಕರ್‌ ಸೇರಿದಂತೆ 29 ಮಂದಿ ಪೊಲೀಸರು ಪ್ರತ್ಯೇಕವಾಸಕ್ಕೆ (ಕ್ವಾರಂಟೈನ್‌) ಒಳಪಡಬೇಕಾಗಿ ಬಂದಿದೆ.

‘ಆನೇಕಲ್‌ ತಾಲ್ಲೂಕಿನ ಹೆಬ್ಬಗೋಡಿ ಹುಲಿಮಂಗಲದ ಜಿ.ಎಂ.ಇನ್ಫಿನಿಟಿ ಸಂಸ್ಥೆ ಕಟ್ಟಡ ನಿರ್ಮಾಣ ಸಂಸ್ಥೆ ಬಳ್ಳಾರಿ ಜಿಲ್ಲೆಯಿಂದ ಕಬ್ಬಿಣದ ಕಂಬಿಗಳನ್ನು ತರಿಸಿಕೊಳ್ಳುತ್ತಿತ್ತು. ಅವರು ತರಿಸಿಕೊಳ್ಳುತ್ತಿದ್ದ ಕಬ್ಬಿಣದ ಲೋಡ್‌ ನಿಗದಿತ ಪ್ರಮಾಣಕ್ಕಿಂತ ಕಡಿಮೆ ತೂಕ ಇರುತ್ತಿತ್ತು. ಕಬ್ಬಿಣವನ್ನು ಪೂರೈಸುವವರೇ ತೂಕದಲ್ಲಿ ಮೋಸ ಮಾಡುವ ಸಂದೇಹವಿತ್ತು. ಈ ಬಗ್ಗೆ ಸಂಸ್ಥೆ ದೂರು ನೀಡಿತ್ತು’ ಎಂದುಎಂದು ಠಾಣೆಯ ಪೊಲೀಸ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಲಾರಿಯಲ್ಲಿ ತರಿಸಿದ್ದ ಕಬ್ಬಿಣವನ್ನು ತೂಕ ಮಾಡಿಸಿದಾಗ ಅದರಲ್ಲಿ 4 ಟನ್‌ ಕಡಿಮೆ ಇರುವುದು ಶನಿವಾರ ಗೊತ್ತಾಗಿತ್ತು. ತಕ್ಷಣವೇ ಸಂಸ್ಥೆಯವರು ಚಾಲಕನನ್ನು ಹಿಡಿದಿಟ್ಟುಕೊಂಡು ಠಾಣೆಗೆ ಮಾಹಿತಿ ನೀಡಿದರು. ನಾವು ಸ್ಥಳಕ್ಕೆ ಹೋಗಿ ಕಬ್ಬಿಣ ಪೂರೈಸುತ್ತಿದ್ದ ಇನ್ನಿಬ್ಬರನ್ನು ಸ್ಥಳಕ್ಕೆ ಕರೆಸಿಕೊಂಡೆವು. ಮೂವರು ಆರೋಪಿಗಳನ್ನು ಬಂಧಿಸಿ, ಅವರು ಬೆಂಗಳೂರಿನಲ್ಲಿ ಈ ಹಿಂದೆ ಅಕ್ರಮವಾಗಿ ಮಾರಾಟ ಮಾಡಿದ್ದ 10 ಟನ್‌ ಕಬ್ಬಿಣವನ್ನು ವಶಪಡಿಸಿಕೊಂಡಿದ್ದೇವೆ’ ಎಂದರು.

‘ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದೆವು. ಅವರು ಸೂಚಿಸಿದ್ದರಿಂದ ಮೂವರು ಆರೋಪಿಗಳ ಗಂಟಲ ದ್ರವವನ್ನುಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಇಬ್ಬರಿಗೆ ಕೋವಿಡ್‌–19 ಇರುವುದು ಭಾನುವಾರ ಸಂಜೆ ದೃಢಪಟ್ಟಿದೆ’ ಎಂದು ಅವರು ಮಾಹಿತಿ ನೀಡಿದರು.

ಸೋಂಕಿತರ ಮನೆ ಈ ಹಿಂದೆ ಕಂಟೈನ್‌ಮೆಂಟ್‌ ಪ್ರದೇಶವಾಗಿದ್ದ ಜನಗಜೀವನರಾಂನಗರ ಬಳಿ ಇದೆ. ಅದುಪಾದರಾಯನಪುರದ ಪಕ್ಕದ ವಾರ್ಡ್‌ ಎಂಬುದು ತಿಳಿದ ಬಳಿಕ ಕರ್ತವ್ಯಕ್ಕೆ ಹಾಜರಾಗಲು ಠಾಣೆಯ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದರು. ಆರೋಪಿಗಳಿಬ್ಬರಿಗೆ ಕೋವಿಡ್‌ ಇರುವುದು ದೃಢಪಟ್ಟ ಬಳಿಕವಂತೂ ಸಿಬ್ಬಂದಿಯೆಲ್ಲ ಕಂಗಾಲಾಗಿದ್ದಾರೆ. ರಾಣೆಯ 52 ಮಂದಿ ಸಿಬ್ಬಂದಿ ಪೈಕಿ 29 ಮಂದಿ ಪ್ರತ್ಯೇಕವಾಸ ಅನುಭವಿಸಬೇಕಾಗಿರುವುದರಿಂದ ಸಿಬ್ಬಂದಿ ಕೊರತೆಯೂ ಎದುರಾಗಿದೆ.

‘ಆರೋಪಿಗಳನ್ನು ಬಂಧಿಸುವಾಗ ಸಾಧ್ಯವಾದ ಎಲ್ಲ ರೀತಿಯ ಮುನ್ನೆಚ್ಚರಿಕೆಯನ್ನೂ ವಹಿಸಿದ್ದೆವು. ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು ಇತರ ಸಿಬ್ಬಂದಿ ಜೊತೆಗೆ ಅಂತರ ಕಾಪಾಡಿದ್ದರು. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ನಾವೂ ಪ್ರತ್ಯೇಕವಾಸ ಅನುಭವಿಸುತ್ತಿದ್ದೇವೆ’ ಎಂದು ಠಾಣೆಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ತವ್ಯಕ್ಕೆ ಹಾಜರಾಗಲು ಸಿಬ್ಬಂದಿ ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಠಾಣೆಯ ಶೌಚಾಲಯ ಹಾಗೂ ಕೆಲವೊಂದು ಪರಿಕರಗಳನ್ನು ಎಲ್ಲ ಸಿಬ್ಬಂದಿಯೂ ಬಳಸುತ್ತಾರೆ. ಹಾಗಾಗಿ ಆತಂಕ ಸಹಜ’ ಎಂದರು.

‘ಪ್ರಕರಣ ಗಂಭೀರವಾಗಿದ್ದು, ತೀರಾ ಅನಿವಾರ್ಯವಾದರೆ ಮಾತ್ರ ಆರೋಪಿಗಳನ್ನು ಬಂಧಿಸಬೇಕು ಎಂದು ಪೊಲೀಸ್‌ ಇಲಾಖೆ ನಿರ್ದೇಶನ ನೀಡಿತ್ತು. ಹಾಗಿದ್ದರೂ ಕಳವು ಆರೋಪಿಗಳನ್ನು ಬಂಧಿಸಿದ ಬಗ್ಗೆ ಠಾಣೆಯ ಸಿಬ್ಬಂದಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೋಪಿಗೆ ಕೋವಿಡ್‌ 19 ಪತ್ತೆಯಾದ ಬಳಿಕ ಇಡೀ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಇಬ್ಬರು ಮೂವರು ಸಿಬ್ಬಂದಿ ಮಾತ್ರ ಠಾಣೆಯ ಪ್ರಾಂಗಣದಲ್ಲಿ ಮೇಜು ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ

ದೂರು ನೀಡುವ ಸಲುವಾಗಿ ಠಾಣೆಗೆ ಹೋಗುವುದಕ್ಕೂ ಸರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಭಾನುವಾರ ಒಂದು ದೂರೂ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

–0–

ಬಾಕ್ಸ್‌

ನ್ಯಾಯಾಧೀಶರಿಗೂ ಪ್ರತ್ಯೇಕವಾಸ

ಆರೋಪಿಯನ್ನು ಪೊಲೀಸರು ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು. ಆತನ ವಿಚಾರಣೆ ನಡೆಸಿದ ನ್ಯಾಯಾಧೀಶರೂ ಪ್ರತ್ಯೇಕ ವಾಸ ಅನುಭವಿಸುತ್ತಿದ್ದಾರೆ.

‘ಸೋಂಕಿತರಿಬ್ಬರ ಮನೆ ಇದ್ದ ಕಟ್ಟಡದಲ್ಲಿ ಎಂಟು ಮಂದಿ ಹಾಗೂ ಅವರ ಜೊತೆ ನೇರ ಸಂಪರ್ಕ ಹೊಂದಿದ್ದ ಮೂವರು ಸ್ಥಳೀಯರನ್ನು ಪ್ರತ್ಯೇಕವಾಸಕ್ಕೆ ಒಳಪಡಿಸಲಾಗುತ್ತಿದೆ’ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT