ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್-ಇನ್: ಬೆಂಗಳೂರಿನಲ್ಲಿ ನೀರು ಪೂರೈಕೆ; ಗ್ರಾಹಕರ ಅಳಲು, ಭರವಸೆಯ ಆಶಾಕಿರಣ

Last Updated 3 ಮಾರ್ಚ್ 2023, 4:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕಡಿಮೆ ನೀರು ಬಳಸುತ್ತೇವೆ. ಬಿಲ್‌ ಮಾತ್ರ ಜಾಸ್ತಿ ಬರುತ್ತಿದೆ. ಒಂದು ತಿಂಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಗುಂಡಿ ತೆಗೆದಿದ್ದರೂ ಮುಚ್ಚಿಲ್ಲ....’

ಇಂತಹ ಹಲವಾರು ಪ್ರಶ್ನೆಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್‌ಎಸ್‌ಬಿ) ಅಧ್ಯಕ್ಷ ಎನ್‌.ಜಯರಾಂ ಸಮಾಧಾನದಿಂದ ಉತ್ತರಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ನಗರದ ವಿವಿಧೆಡೆಯಿಂದ ದೂರವಾಣಿ ಕರೆ ಮಾಡಿದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಭರವಸೆ ನೀಡಿದರು. ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ನೀರು ಸರಿಯಾಗಿ ಬರುತ್ತಿಲ್ಲ. ಈಗ ಪೂರೈಸುತ್ತಿರುವ ನೀರು ಸಾಕಾಗುವುದಿಲ್ಲ. ಒಂದೇ ಗಂಟೆ ನೀರು ಪೂರೈಕೆಯಾಗುತ್ತದೆ. ಕೆಲವು ಪ್ರದೇಶಗಳಿಗೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಸುತ್ತಾರೆ. ನಿಯಮಿತವಾಗಿ ನೀರು ಪೂರೈಸುತ್ತಿಲ್ಲ. ಕೆಲವೆಡೆ ನೀರು ನಿಧಾನವಾಗಿ ಬರುತ್ತದೆ ಎನ್ನುವ ದೂರುಗಳನ್ನು ನಾಗರಿಕರು ಸಲ್ಲಿಸಿದರು.

ನಾಗರಿಕರ ಪ್ರಶ್ನೆಗಳಿಗೆ ಎನ್‌. ಜಯರಾಂ ಅವರು ನೀಡಿರುವ ಉತ್ತರಗಳ ವಿವರ ಇಲ್ಲಿದೆ.

*ಪ್ರತಿ ತಿಂಗಳು ₹3–4 ಸಾವಿರ ಬಿಲ್‌ ಬರು‌ತ್ತಿದೆ. ಮನೆಯಲ್ಲಿ ಇಬ್ಬರೇ ಇರುವುದರಿಂದ ಬಳಕೆ ಕಡಿಮೆ.
ಆದರೆ, ನೀರಿನ್‌ ಬಿಲ್‌ ಮಾತ್ರ ದುಬಾರಿ. ಹೊಸ ಮೀಟರ್‌ ಸಹ ಅಳವಡಿಸಲಾಗಿದೆ.

ಚೇತನ್‌, ಜ್ಞಾನಭಾರತಿ

ಬಿಲ್‌ ಜಾಸ್ತಿ ಇದ್ದರೆ ಪರಿಶೀಲಿಸುತ್ತೇವೆ. ಬಿಲ್‌ಗಳಿಗೆ ಸಂಬಂಧಿಸಿದಂತೆ ರಚಿಸಿರುವ ಸಮಿತಿ ಮುಂದೆ ಅರ್ಜಿ ಸಲ್ಲಿಸಿ. ಬಿಲ್‌ನಲ್ಲಿ ತಪ್ಪಾಗಿದ್ದರೆ ಸರಿಪಡಿಸಲಾಗುವುದು.

*ಹಳೆಯ ಪೈಪ್‌ಗಳನ್ನು ಬದಲಾಯಿಸಲು ಮನೆಯ ಮುಂದೆಯೇ ಗುಂಡಿ ತೆಗೆದಿದ್ದಾರೆ. ಮನೆಯಲ್ಲಿ ಎರಡು ವರ್ಷದ ಮಗು ಇರುವುದರಿಂದ ಆತಂಕವಾಗಿದೆ. ₹1,600 ದುಡ್ಡು ಸಹ ಪಡೆದಿದ್ದಾರೆ. ಪ್ರತಿ ಬಾರಿ ಇಲ್ಲಿಗೆ ಬಂದಾಗ ಹಣ ನೀಡಿದ್ದೇವೆ. ಜನವರಿಯಲ್ಲೇ ದೂರು ನೀಡಿದ್ದರೂ ಇದುವರೆಗೆ ಪೂರ್ಣಗೊಳಿಸಿಲ್ಲ.

ಆಶಾ, ಬಿಎಚ್‌ಇಎಲ್‌ ಲೇಔಟ್‌, ಆರ್‌.ಆರ್‌. ನಗರ.

ಯಾರಿಗೂ ಹಣ ನೀಡುವ ಅಗತ್ಯವಿಲ್ಲ. ಸಿಬ್ಬಂದಿ ಹಣ ಪಡೆದಿದ್ದರೆ ಕ್ರಮಕೈಗೊಳ್ಳುತ್ತೇವೆ. ಅಧಿಕಾರಿಗಳು ಸ್ಪಂದಿಸದಿದ್ದರೆ ತಿಳಿವಳಿಕೆ ಹೇಳುತ್ತೇವೆ. ಸಮಸ್ಯೆ ಬಗೆಹರಿಸಲು ಶೀಘ್ರ ಶಾಶ್ವತ ಕ್ರಮಕೈಗೊಳ್ಳುತ್ತೇವೆ.

*ಜಲಮಂಡಳಿ ಕೈಗೊಂಡಿರುವ ಪೈಪ್‌ಲೈನ್‌ ಕಾಮಗಾರಿ ವಿಳಂಬವಾಗುತ್ತಿದೆ. ಗುಂಡಿಗಳು ಇರುವುದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ತ್ವರಿತಗತಿಯಲ್ಲಿ ಸರಿಪಡಿಸಿ.

ಸದಾನಂದ, ಮೊದಲನೇ ಹಂತ, ಅನುಗ್ರಹ ಬಡಾವಣೆ,

ಮುಖ್ಯ ಎಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳುತ್ತಾರೆ.

*ನಮ್ಮ ಬಡಾವಣೆಗೆ ನೀರು ಪೂರೈಕೆಯಾಗುವುದಿಲ್ಲ. ಟ್ಯಾಂಕರ್‌ ಮೇಲೆ ಅವಲಂಬನೆಯಾಗಿದ್ದೇವೆ. ಈ ಹಿಂದೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿತ್ತು.

ಪಾರ್ವತಿ, ಕೆ.ಆರ್‌. ಪುರ, ಲಕ್ಷ್ಮಿಪುರ ಬಡಾವಣೆ.

ನೀರು ಪೂರೈಕೆಯಾಗದಿರುವ ಬಗ್ಗೆ ಪರಿಶೀಲಿಸುತ್ತೇವೆ. ಈಗ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಜನವಸತಿ ಪ್ರದೇಶವೂ ಹೆಚ್ಚಾಗಿದೆ. ಆದರೂ, ಜಲಮಂಡಳಿಯಿಂದ ಸಮರ್ಪಕವಾಗಿ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು.

*ನಾಗರಬಾವಿಯ ಅನ್ನಪೂರ್ಣೇಶ್ವರಿ ವೃತ್ತದ ಬಳಿ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದಾರೆ. ಇದರಿಂದ, ಅಪಾಯ ಸೃಷ್ಟಿಯಾಗಿದೆ.

ಬಿ. ನಾಗರಾಜ್‌, ನಾಗರಬಾವಿ,

ಬಿಡಿಎ ಕಾಂಪ್ಲೆಕ್ಸ್‌.

ಗುಂಡಿ ಮುಚ್ಚಲು ತಕ್ಷಣವೇ ಅಧಿಕಾರಿಗಳಿಗೆ ಸೂಚನೆ ನೀಡಿ, ಸರಿಪಡಿಸುತ್ತೇವೆ.

ಮೇ ಅಂತ್ಯಕ್ಕೆ 110 ಹಳ್ಳಿಗಳಿಗೆ ಕಾವೇರಿ ನೀರು

‘ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನೀರು ಪೂರೈಕೆಗೆ ಕೈಗೊಂಡಿರುವ ಕಾವೇರಿ 5ನೇ ಹಂತದ ಯೋಜನೆಯು ಅಂತಿಮ ಹಂತದಲ್ಲಿದೆ’ ಎಂದು ಎನ್‌. ಜಯರಾಂ ತಿಳಿಸಿದರು.

‘ಸದ್ಯ ಪ್ರಾಯೋಗಿಕವಾಗಿ ವಿವಿಧ ಸ್ಥಳಗಳಿಗೆ ನೀರು ಪೂರೈಸಲಾಗುತ್ತಿದೆ. ಶೆಟ್ಟಿಹಳ್ಳಿ ಸೇರಿದಂತೆ ಹಲವೆಡೆ ವಾರಕ್ಕೊಮ್ಮೆ ನೀರು ಪೂರೈಸುತ್ತಿದ್ದೇವೆ. ಈಗ ಸ್ಥಗಿತಗೊಂಡಿದ್ದರೆ ಮತ್ತೆ ಆರಂಭಿಸುತ್ತೇವೆ. ಕೋವಿಡ್‌ ಕಾರಣಕ್ಕೆ ಈ ಯೋಜನೆ ಸ್ವಲ್ಪ ವಿಳಂಬವಾಯಿತು.

ಮೇ ಅಂತ್ಯಕ್ಕೆ 110 ಹಳ್ಳಿಗಳಿಗೂ ನೀರು ಪೂರೈಸುವ ವಿಶ್ವಾಸವಿದೆ’ ಎಂದು ತಿಳಿಸಿದರು. ಶೆಟ್ಟಿಹಳ್ಳಿ, ಬಾಲಾಜಿ ಕೃಪಾ ಬಡಾವಣೆ, ಸರ್ಜಾಪುರ ರಸ್ತೆ ಸೇರಿದಂತೆ ಹಲವೆಡೆಯಿಂದ ಈ ಬಗ್ಗೆ ಗ್ರಾಹಕರು ದೂರವಾಣಿ ಕರೆ ಮಾಡಿದ್ದರು.

‘4 ವರ್ಷವಾದರೂ ಬಿಲ್‌ ಕೊಟ್ಟಿಲ್ಲ!’

‘2019ರಲ್ಲಿ ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದಿದ್ದೇವೆ. ಆದರೆ, ಇಲ್ಲಿಯವರೆಗೂ ಒಂದೇ ಬಿಲ್‌ ಮಾತ್ರ ಬಂದಿದೆ. ಅದು ಸಹ ವಾಣಿಜ್ಯ ಸಂಪರ್ಕದ ಬಿಲ್‌ ನೀಡಿದ್ದಾರೆ. ಬಿಲ್‌ ನೀಡಿ ಎಂದು ಎರಡು ಬಾರಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ಕಾಡುಗೋಡಿಯ ಛಲಪತಿ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಜಯರಾಂ ಅವರು, ‘48 ತಿಂಗಳಿಂದ ಬಿಲ್‌ ಕೊಟ್ಟಿಲ್ಲ. ವಾಣಿಜ್ಯ ಸಂಪರ್ಕ ಅನ್ನು ವಸತಿ ಸಂಪರ್ಕ ಎಂದು ಬದಲಾಯಿಸಿಕೊಡಲಾಗುವುದು. ನಾಲ್ಕು ವರ್ಷದ್ದು ಒಟ್ಟಿಗೆ ಬಿಲ್‌ ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿದ್ದರೆ ಸರಿಪಡಿಸಿ ಬಿಲ್‌ ನೀಡಲಾಗುವುದು ಎಂದು ತಿಳಿಸಿದರು.

ಹಳೆಯ ಪೈಪ್‌ಲೈನ್‌ಗಳು 60–70 ವರ್ಷಗಳಷ್ಟು ಹಳೆಯದಾಗಿವೆ. ಹೀಗಾಗಿ, ಸೋರುತ್ತಿವೆ. ಇವುಗಳನ್ನು ಬದಲಾಯಿಸಲು ದುಬಾರಿ ವೆಚ್ಚ ತಗಲುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಎನ್‌. ಜಯರಾಂ ತಿಳಿಸಿದರು.

ಉದಾಹರಣೆಗೆ, ವಿಜಯನಗರಲ್ಲಿ ಪೈಪ್‌ಗಳನ್ನು ಬದಲಾಯಿಸಲು ₹40 ಲಕ್ಷ ವೆಚ್ಚವಾಯಿತು. ಆದರೆ, ಅಲ್ಲಿ ರೈಲ್ವೆ ಇಲಾಖೆ ಸೇತುವೆ ಇದೆ. ಹೀಗಾಗಿ, ಪರವಾನಗಿ ಶುಲ್ಕವಾಗಿ ₹1 ಕೋಟಿ ಮೊತ್ತವನ್ನು ರೈಲ್ವೆ ಇಲಾಖೆಗೆ ಪಾವತಿಸಲಾಯಿತು. ಇದು ಜಲಮಂಡಳಿಗೆ ಹೆಚ್ಚುವರಿ ವೆಚ್ಚ. ಅಗತ್ಯಗಳಿಗೆ ತಕ್ಕಂತೆ ಹಳೆಯ ಪೈಪ್‌ಲೈನ್‌ಗಳನ್ನು ಬದಲಾಯಿಸಲಾಗುತ್ತಿದೆ ಎಂದು ವಿವರಿಸಿದರು.

ಬಿಲ್‌ ಅಕ್ರಮ: ₹1 ಕೋಟಿ ದುರುಪಯೋಗ

ನೀರಿನ ಬಿಲ್‌ ಅಕ್ರಮ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವೂ ಕಂಡುಬಂದಿದೆ. ಸುಮಾರು

₹1 ಕೋಟಿ ಮೊತ್ತದಷ್ಟು ದುರುಪಯೋಗವಾಗಿದೆ ಎಂದು ಜಯರಾಂ ತಿಳಿಸಿದರು.

ಇಬ್ಬರು ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣ ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT