ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌: ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತರು

ಬಿಡಿಎ ಕಾರ್ಯವೈಖರಿಗೆ ಟೀಕೆಗಳ ಸುರಿಮಳೆ
Last Updated 23 ಸೆಪ್ಟೆಂಬರ್ 2020, 23:56 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಿರ್ಮಿಸಲಿರುವ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಚರ್ಚಿಸಲು ಆನ್‌ಲೈನ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದದಲ್ಲಿ ಈ ಯೋಜನೆಯ ಲೋಪಗಳನ್ನು ಸಂತ್ರಸ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಎಳೆಎಳೆಯಾಗಿ ಬಿಚ್ಚಿಟ್ಟರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಏರ್ಪಡಿಸಿದ್ದ ಈ ಸಂವಾದದಲ್ಲಿ 180 ಮಂದಿ ಭಾಗವಹಿಸಿದರು. ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 14 ವರ್ಷಗಳಾದರೂ ಭೂಪರಿಹಾರ ನೀಡುವಲ್ಲಿ ವಿಫಲವಾಗಿರುವ ಬಿಡಿಎ ಕಾರ್ಯವೈಖರಿಗೆ ರೈತರಿಂದ ಹಾಗೂ ಭೂಮಾಲೀಕರರಿಂದ ಸಾಕಷ್ಟು ಟೀಕೆಯೂ ವ್ಯಕ್ತವಾಯಿತು.

ಈ ಯೋಜನೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶಕ್ಕೂ ಧಕ್ಕೆ ಆಗಲಿದೆ. ಇದರಿಂದಾಗಿ ಈ ಪರಿಸರದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುವುದನ್ನು ತಪ್ಪಿಸಲು ಬಿಡಿಎ ಏನು ಪರಿಹಾರೋಪಾಯಗಳನ್ನು ಹೊಂದಿದೆ ಎಂದು ಅನ್ನಪೂರ್ಣಾ ಹಾಗೂ ಶ್ರೇಯಾ ದಾಸ್‌ ಗುಪ್ತ ಪ್ರಶ್ನಿಸಿದರು. ಜಾರಕಬಂಡೆ ಕಾವಲ್‌ ಮೀಲಸು ಅರಣ್ಯದೊಳಗೆ ಈ ಕಾರಿಡಾರ್‌ ಹಾದುಹೋಗುವ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದರು.

ಭೂಮಾಲೀಕ ಭರತರಾಮ್‌, ‘ಸೋಲದೇವನಹಳ್ಳಿಯ ಎಸ್‌ಬಿಐ ಬಡಾವಣೆಯ ಕೆಲವು ಪ್ರದೇಶವನ್ನು ಪಿಆರ್‌ಆರ್‌ಗೆ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು 2006ರ ಪ್ರಾಥಮಿಕ ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಇದಾಗಿ 14 ವರ್ಷಗಳ ಬಳಿಕವೂ ಇನ್ನೂ ನಮಗೆ ನೋಟಿಸ್‌ ತಲುಪಿಲ್ಲ’ ಎಂದರು.

ಪಿಆರ್‌ಆರ್‌ ಹಾದುಹೋಗುವ ಮಾರ್ಗವನ್ನೇ ಖಚಿತವಾಗಿ ತಿಳಿಸದೆಯೇ ಸಾರ್ವಜನಿಕ ಸಂವಾದ ಏರ್ಪಡಿಸುವ ಔಚಿತ್ಯವಾದರೂ ಏನು ಎಂದು ಎನ್ವಿರಾನ್‌ಮೆಂಟ್‌ ಸಪೋರ್ಟ್ ಗ್ರೂಪ್‌ನ ಲಿಯೊ ಸಲ್ಡಾನ, ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ತಾರಾ ಕೃಷ್ಣಸ್ವಾಮಿ ಪ್ರಶ್ನಿಸಿದರು.

ಕೆಲವರು ಈ ಯೋಜನೆಯ ಅಗತ್ಯವನ್ನೂ ಪ್ರತಿಪಾದಿಸುವ ಮೂಲಕ ಬಿಡಿಎಗೆ ಬೆಂಬಲವನ್ನೂ ವ್ಯಕ್ತಪಡಿಸಿದರು.

ಯಶವಂತಪುರದ ತೇಜಸ್ವಿ, ‘ಇಡೀ ಜಗತ್ತು ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನದ ಕೇಂದ್ರವನ್ನಾಗಿ ನೋಡುತ್ತಿದೆ. ಹಾಗಾಗಿ ಈ ನಗರದ ಮೂಲಸೌಕರ್ಯದ ಅಗತ್ಯಗಳನ್ನೂ ಪೂರೈಸಬೇಕಿದೆ. ಸಂಘಟನೆಗಳ ಮಾತಿಗೆ ಕಿವಿಗೊಡಬೇಡಿ. ಸಂಚಾರ ದಟ್ಟಣೆಯ ಬಿಕ್ಕಟ್ಟಿನಿಂದ ಜನರನ್ನು ಸಂರಕ್ಷಿಸಿ’ ಎಂದು ಮನವಿ ಮಾಡಿದರು.

ಶಿಲ್ಪಾ ರಾವ್‌, ‘ಪರಿಸರ ಕಾರ್ಯಕರ್ತರು ಈ ಯೋಜನೆಯನ್ನು ಸಾರಾಸಗಟಾಗಿ ವಿರೋಧಿಸುತ್ತಿಲ್ಲ. ಆದರೆ ಕ್ರಮಬದ್ಧವಾಗಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂಬುದೇ ನಮ್ಮ ಒತ್ತಾಯ’ ಎಂದು ಸ್ಪಷ್ಟಪಡಿಸಿದರು.

‘ಅಲೆದಲೆದು ಅಪ್ಪ ಹಾಸಿಗೆ ಹಿಡಿದರು’
‘ಈ ಯೋಜನೆಯ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವಾಗ ನಾನು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದೆ. ನಾವು ಈ ಜಾಗವನ್ನು ಅಭಿವೃದ್ಧಿಪಡಿಸಲೂ ಆಗಿಲ್ಲ. ನಮಗೆ ಸಿಗಬೇಕಾದ ಪರಿಹಾರವೂ ಸಿಕ್ಕಿಲ್ಲ. ಭೂ ಪರಿಹಾರಕ್ಕಾಗಿ ನಮ್ಮ ತಂದೆ ಕಚೇರಿಯಿಂದ ಕಚೇರಿಗೆ ಅಲೆದು ಈಗ ಹಾಸಿಗೆ ಹಿಡಿದಿದ್ದಾರೆ. ನಮ್ಮನ್ನೂ ಈ ಸ್ಥಿತಿಗೆ ತಳ್ಳಬೇಡಿ. ಒಂದೋ ಪಿಆರ್‌ಆರ್‌ ನಿರ್ಮಿಸಿ. ಇಲ್ಲ ಈ ಯೋಜನೆಯನ್ನೇ ಕೈಬಿಡಿ’ ಎಂದು ರೈತರೊಬ್ಬರ ಮಗ ನಾಗೇಶ್‌ ಯಾದವ್‌ ಮನವಿ ಮಾಡಿದರು.

ಜೂಮ್‌ ಸಭೆ ಆಧರಿಸಿ ನಿರ್ಧಾರ ಬೇಢ
ಬೆಂಗಳೂರು:
ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್‌) ಯೋಜನೆ ಸಂಬಂಧ ಪರಿಸರ ಪರಿಣಾಮದ ಮೌಲ್ಯಮಾಪನಕ್ಕಾಗಿ (ಇಐಎ) ಸಾರ್ವಜನಿಕರೊಂದಿಗೆ ನಡೆಸಿರುವ ವರ್ಚುವಲ್‌ (ಜೂಮ್ ಪ್ಲಾಟ್‌ಫಾರ್ಮ್ ಮೂಲಕ) ಸಭೆ ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮೂವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಮಧ್ಯಂತರ ಆದೇಶ ನೀಡಿತು.

ತುಮಕೂರು ರಸ್ತೆಯನ್ನು ಹೊಸೂರು ರಸ್ತೆಯೊಂದಿಗೆ ಸಂಪರ್ಕಿಸುವ 8 ಪಥದ ಪಿಆರ್‌ಆರ್‌ ಯೋಜನೆಯ 1ನೇ ಹಂತದ ಸಾರ್ವಜನಿಕ ಸಭೆಗಳು ಬುಧವಾರದಿಂದ ಆರಂಭವಾಗಿವೆ.

‘ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಯೋಜನೆ ಹಾದು ಹೋಗುವ ಸ್ಥಳದ ಸುತ್ತಮುತ್ತಲಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಆದರೆ, ಅಧಿಕಾರಿಗಳು ಜೂಮ್‌ ಸಭೆ ನಡೆಸುತ್ತಿದ್ದಾರೆ’ ಎಂದು ಅರ್ಜಿದಾರರು ದೂರಿದರು.

‘ಈಗಾಗಲೇ ಆರಂಭವಾಗಿರುವ ಜೂಮ್ ಸಭೆಗಳನ್ನು ನಿಲ್ಲಿಸುವಂತೆ ಆದೇಶ ನೀಡಲು ಆಗುವುದಿಲ್ಲ’ ಎಂದು ಪೀಠ ಹೇಳಿತು.
‘ಅಲೆದಲೆದು ಅಪ್ಪ ಹಾಸಿಗೆ ಹಿಡಿದರು’

‘ಈ ಯೋಜನೆಯ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವಾಗ ನಾನು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದೆ. ನಾವು ಈ ಜಾಗವನ್ನು ಅಭಿವೃದ್ಧಿಪಡಿಸಲೂ ಆಗಿಲ್ಲ. ನಮಗೆ ಸಿಗಬೇಕಾದ ಪರಿಹಾರವೂ ಸಿಕ್ಕಿಲ್ಲ. ಭೂ ಪರಿಹಾರಕ್ಕಾಗಿ ನಮ್ಮ ತಂದೆ ಕಚೇರಿಯಿಂದ ಕಚೇರಿಗೆ ಅಲೆದು ಈಗ ಹಾಸಿಗೆ ಹಿಡಿದಿದ್ದಾರೆ. ನಮ್ಮನ್ನೂ ಈ ಸ್ಥಿತಿಗೆ ತಳ್ಳಬೇಡಿ. ಒಂದೋ ಪಿಆರ್‌ಆರ್‌ ನಿರ್ಮಿಸಿ. ಇಲ್ಲ ಈ ಯೋಜನೆಯನ್ನೇ ಕೈಬಿಡಿ’ ಎಂದು ರೈತರೊಬ್ಬರ ಮಗ ನಾಗೇಶ್‌ ಯಾದವ್‌ ಮನವಿ ಮಾಡಿದರು.

ಅಂಕಿ ಅಂಶ

65.5 ಕಿ.ಮೀ: ಪೆರಿಫೆರಲ್‌ ವರ್ತುಲ ರಸ್ತೆಯ ಉದ್ದ

₹ 15,111 ಕೋಟಿ: ಪಿಆರ್‌ಆರ್‌ ಯೋಜನೆಯ ಅಂದಾಜು ವೆಚ್ಚ

400 ಎಕರೆ: ಯೋಜನೆಗಾಗಿ ಬಿಡಿಎ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿ

33,838: ಈ ಯೋಜನೆಗಾಗಿ ತೆರವುಗೊಳಿಸಬೇಕಾದ ಮರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT