ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕ: ಮೂರು ಹಂತದ ಸಮಿತಿಗೆ ಶಿಫಾರಸು

Published 22 ಜನವರಿ 2024, 16:13 IST
Last Updated 22 ಜನವರಿ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿಯಲ್ಲಿ ಅಕ್ರಮ ತಡೆಗಟ್ಟಲು, ಮುಕ್ತ ಮತ್ತು ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲು ಮೂರು ಹಂತದ ಮೇಲುಸ್ತುವಾರಿ ಸಮಿತಿಗಳನ್ನು ರಚಿಸುವಂತೆ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಚಾರಣಾ ಆಯೋಗ ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ 545 ಪಿಎಸ್‌ಐ ನೇಮಕಾತಿಗೆ ನಡೆದಿದ್ದ ಪ್ರಕ್ರಿಯೆಯಲ್ಲಿನ ಅಕ್ರಮ ಕುರಿತು ವಿಚಾರಣೆ ಪೂರ್ಣಗೊಳಿಸಿರುವ ಆಯೋಗದ ಅಧ್ಯಕ್ಷ ವೀರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ವರದಿ ಸಲ್ಲಿಸಿದರು.

‘ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ಇಲ್ಲದಂತಹ ಬಿಗಿಯಾದ ವ್ಯವಸ್ಥೆಯನ್ನು ರೂಪಿಸಬೇಕು. ಇದಕ್ಕಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲುಸ್ತುವಾರಿ ಸಮಿತಿ ಮತ್ತು ಪರೀಕ್ಷಾ ಮೇಲುಸ್ತುವಾರಿಗೆ ಪ್ರತ್ಯೇಕ ಸಮಿತಿ ರಚಿಸಬೇಕು. ಪರೀಕ್ಷಾ ಉಸ್ತುವಾರಿಯನ್ನು ಈ ಸಮಿತಿಗಳಿಗೆ ವಹಿಸಬೇಕು’ ಎಂಬ ಶಿಫಾರಸು ವರದಿಯಲ್ಲಿದೆ ಎಂದು ಗೊತ್ತಾಗಿದೆ.

ಈ ಹಗರಣದ ಕುರಿತು ಆರೋಪ– ಪ್ರತ್ಯಾರೋಪ ಮಾಡಿದ್ದ ಶಾಸಕರಾದ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಎಚ್‌.ಡಿ. ಕುಮಾರಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ, ಬಸವರಾಜ ದಢೇಸೂಗೂರು ಮತ್ತಿತರರಿಗೆ ಆಯೋಗವು ಸಮನ್ಸ್‌ ಜಾರಿಗೊಳಿಸಿತ್ತು. ಕೆಲವರಷ್ಟೇ ಆಯೋಗದ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.

ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ರಾಜಕಾರಣಿಗಳ ನಡವಳಿಕೆ ಕುರಿತು ಆಯೋಗವು ತನ್ನ ವರದಿಯಲ್ಲಿ ಅಭಿಪ್ರಾಯ ನೀಡಿದೆ. ಬಹಿರಂಗವಾಗಿ ಮಾಡಿದ್ದ ಆರೋಪಗಳ ಕುರಿತು ವಿಚಾರಣೆಗೆ ಹಾಜರಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಪ್ರಕರಣಗಳಲ್ಲಿ ರಾಜಕಾರಣಿಗಳು ಹೇಗೆ ವರ್ತಿಸಬೇಕೆಂಬ ಸಲಹೆಗಳನ್ನೂ ವರದಿಯಲ್ಲಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳ ಪಾತ್ರದ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿದೆ. ಪಿಎಸ್‌ಐ ನೇಮಕಾತಿಯಂತಹ ಪ್ರಕರಣಗಳಲ್ಲಿ ರಾಜಕಾರಣಿಗಳು ಪ್ರಬಲ ಸಾಕ್ಷ್ಯಾಧಾರವಿಲ್ಲದೇ ನೀಡುವ ಹೇಳಿಕೆಗಳಿಗೆ ಮಾಧ್ಯಮಗಳು ಹೆಚ್ಚು ಮಹತ್ವ ನೀಡಬಾರದು. ಅಕ್ರಮಗಳ ಕುರಿತು ಆಳಕ್ಕಿಳಿದು ವರದಿ ಮಾಡುವುದಕ್ಕೆ ಪ್ರಯತ್ನಿಸಬೇಕು ಎಂಬ ಸಲಹೆಯೂ ವರದಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

545 ಪಿಎಸ್‌ಐ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು 2021ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್‌ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಕೆಲವು ದಿನಗಳ ಬಳಿಕ ಬಹಿರಂಗವಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಪೊಲೀಸ್‌ ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮ್ರಿತ್‌ ಪಾಲ್‌ ಸೇರಿದಂತೆ 110 ಮಂದಿಯನ್ನು ಬಂಧಿಸಿದ್ದರು.

2023ರ ಮೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರವು ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ವಿಚಾರಣೆಗಾಗಿ ನ್ಯಾ.ಬಿ. ವೀರಪ್ಪ ನೇತೃತ್ವದ ಆಯೋಗವನ್ನು ನೇಮಿಸಿ ಜುಲೈನಲ್ಲಿ ಆದೇಶ ಹೊರಡಿಸಿತ್ತು. 28 ಸಾಕ್ಷಿಗಳ ಹೇಳಿಕೆ ಹಾಗೂ 324 ದಾಖಲೆಗಳೊಂದಿಗೆ 471 ಪುಟಗಳ ವರದಿಯನ್ನು ಆಯೋಗವು ಮುಖ್ಯಮಂತ್ರಿಯವರಿಗೆ ಸಲ್ಲಿಸಿದೆ.

ನ್ಯಾ. ವೀರಪ್ಪ ನೇತೃತ್ವದ ಆಯೋಗದ ವರದಿ ರಾಜಕಾರಣಿಗಳ ನಡೆ ಬಗ್ಗೆ ಅಸಮಾಧಾನ ಆಳಕ್ಕಿಳಿದು ವರದಿ; ಮಾಧ್ಯಮಗಳಿಗೆ ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT