ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕ ಪರೀಕ್ಷೆ ಜ. 23ಕ್ಕೆ ಮುಂದೂಡಿಕೆ– ಗೃಹ ಸಚಿವ ಜಿ. ಪರಮೇಶ್ವರ

Published 4 ಡಿಸೆಂಬರ್ 2023, 14:22 IST
Last Updated 4 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ವಿಧಾನಸಭೆ: 545 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ಭರ್ತಿಗೆ ಡಿಸೆಂಬರ್‌ 23ಕ್ಕೆ ನಿಗದಿಯಾಗಿರುವ ಲಿಖಿತ ಪರೀಕ್ಷೆಯನ್ನು ಜನವರಿ 23ಕ್ಕೆ ಮುಂದೂಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಪ್ರಕಟಿಸಿದರು.

ಸೋಮವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘545 ಪಿಎಸ್‌ಐ ಹುದ್ದೆಗಳ ಭರ್ತಿಗೆ ಹಿಂದೆ ಪರೀಕ್ಷೆ ನಡೆಸಲಾಗಿತ್ತು. ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈಗ ಡಿ.23ಕ್ಕೆ ಮರು ಲಿಖಿತ ಪರೀಕ್ಷೆ ನಿಗದಿ ಮಾಡಲಾಗಿದೆ. 54,000ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಪರೀಕ್ಷಾ ತಯಾರಿಗೆ ಅನುಕೂಲವಾಗುವಂತೆ ಆರು ತಿಂಗಳ ಕಾಲ ಪರೀಕ್ಷೆ ಮುಂದೂಡಬೇಕು’ ಎಂದು ಆಗ್ರಹಿಸಿದರು.

ಉತ್ತರ ನೀಡಿದ ಗೃಹ ಸಚಿವರು, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಪರೀಕ್ಷೆ ನಡೆದಿತ್ತು. ಅಕ್ರಮ ಪತ್ತೆಯಾದ ಕಾರಣದಿಂದ ಹಿಂದಿನ ಸರ್ಕಾರವೇ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಹೈಕೋರ್ಟ್‌ ಆದೇಶದ ಅನುಸಾರ ಈಗ ಮರು ಲಿಖಿತ ಪರೀಕ್ಷೆಯನ್ನು ನಿಗದಿ ಮಾಡಲಾಗಿದೆ’ ಎಂದರು.

ರಾಜ್ಯದಲ್ಲಿ 1,500 ಪಿಎಸ್‌ಐ ಹುದ್ದೆಗಳು ಖಾಲಿ ಇವೆ. ಪೊಲೀಸ್‌ ಠಾಣೆಗಳಲ್ಲಿ ಪಿಎಸ್‌ಐಗಳ ಕೊರತೆ ಇದೆ. ಮೊದಲ ಹಂತದಲ್ಲಿ ಈ 545 ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲಾಗುವುದು. ಎರಡನೇ ಹಂತದಲ್ಲಿ 403 ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಯಲಿದೆ. ಮೂರನೇ ಹಂತದಲ್ಲಿ 600 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಕಾರಣದಿಂದ ಪರೀಕ್ಷೆ ಮುಂದೂಡುವುದು ಅಸಾಧ್ಯ ಎಂದು ಹೇಳಿದರು.

ಪಿಎಸ್‌ಐ ನೇಮಕಾತಿಯ ಮರು ಲಿಖಿತ ಪರೀಕ್ಷೆಯನ್ನು ಮುಂದೂಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್‌ ಶಾಸಕರೂ ಬೆಂಬಲಿಸಿದರು. ಆಡಳಿತ ಪಕ್ಷದ ಹಲವು ಶಾಸಕರು ಎದ್ದು ನಿಂತು, ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದರು. ಅವರನ್ನು ಸಮಾಧಾನಪಡಿಸುವ ಪ್ರಯತ್ನ ಫಲಿಸಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸದನದಲ್ಲಿದ್ದರು. ಅವರ ಆಸನದ ಬಳಿ ಹೋದ ಗೃಹ ಸಚಿವರು ಚರ್ಚೆ ನಡೆಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ಅವರೂ ಜತೆಯಾದರು. ಚರ್ಚೆಯ ಬಳಿಕ ಮತ್ತೆ ಹೇಳಿಕೆ ನೀಡಿದ ಪರಮೇಶ್ವರ, ‘ಡಿ.23ಕ್ಕೆ ನಿಗದಿಯಾಗಿರುವ ಪರೀಕ್ಷೆಯನ್ನು 2024ರ ಜನವರಿ 23ಕ್ಕೆ ನಡೆಸಲಾಗುವುದು’ ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT